ಮೈಸೂರು: ‘ವೈದ್ಯರು ದೇವರ ಪ್ರತಿರೂಪವಾಗಿದ್ದು, ಅವರ ವೃತ್ತಿ ವಿಶಿಷ್ಟ ಹಾಗೂ ಶ್ರೇಷ್ಠವಾದುದು’ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿಆರ್‌ಐ), ಮೈಸೂರು ವೈದ್ಯಕೀಯ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದಿಂದ ನಗರದಲ್ಲಿ ಭಾನುವಾರ ನಡೆದ ‘ವಿಶಿಷ್ಟ ಸೇವಾ ಪುರಸ್ಕಾರ’ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇದು ವೈದ್ಯರಿಗಲ್ಲ, ದೇವರ ಸನ್ಮಾನದ ಸಮಾರಂಭವಾಗಿದೆ. ಸಮಾಜದಲ್ಲಿ ವೈದ್ಯರಿಗೆ ವಿಶೇಷ ಗೌರವವಿದೆ. ಉತ್ತಮ ಸೇವೆ ನೀಡಿದ ಸಾಧಕ ವೈದ್ಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಖುಷಿಯ ವಿಚಾರ. ಇದರಲ್ಲಿ ಭಾಗವಹಿಸಿರುವುದು ನನ್ನ ಯೋಗ’ ಎಂದರು.
‘ಮೈಸೂರು ವೈದ್ಯಕೀಯ ಮಹಾವಿದ್ಯಾಲಯಕ್ಕೆ 100 ವರ್ಷದ ಸಂಭ್ರಮ. ಏಷ್ಯಾದಲ್ಲಿಯೇ ಸಂಸ್ಥೆಗೆ ಒಂದು ವಿಶೇಷ ಹೆಸರಿದೆ. ಶತಮಾನೋತ್ಸವದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸೋಣ. ಸರ್ಕಾರದಿಂದ ಅನೇಕ ಸವಲತ್ತು ಒದಗಿಸಲಾಗುತ್ತಿದ್ದು, ಸಹಕಾರ ಸದಾ ಇರುತ್ತದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ‘ವಿಶೇಷ ವ್ಯಕ್ತಿತ್ವ ಹೊಂದಿದವರಿಗೆ ವಿಶಿಷ್ಟ ಪುರಸ್ಕಾರ ನೀಡಲಾಗುತ್ತಿದೆ. ಇಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಾಧಕರ ಸಮಾವೇಶ ಇದಾಗಿದೆ’ ಎಂದು ಹೇಳಿದರು.
‘ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಹಾಗೂ ವೃತ್ತಿಗೆ ಸೇವೆ ಸಲ್ಲಿಸಿ ಜನಾನುರಾಗಿ ಆಗಿದಲ್ಲದೆ, ಎಲ್ಲರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸಿದ್ದಾರೆ. ಸಿಕ್ಕಂತಹ ಅವಕಾಶವನ್ನು ಪ್ರಾಮಾಣಿಕವಾಗಿ ಸದುಪಯೋಗ ಪಡಿಸಿಕೊಂಡು ಸಮಾಜಕ್ಕಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ಸಾರ್ಥಕ ಬದುಕು ಲಭಿಸುತ್ತದೆ. ಸಂಸ್ಥೆಯ ಶತಮಾನೋತ್ಸವ ಆಚರಣೆ ಸೆ.28ಕ್ಕೆ ಮಾಡಲಾಗುತ್ತದೆ’ ಎಂದು ತಿಳಿಸಿದರು.
ಸಾಧಕರಿಗೆ ‘ವಿಶಿಷ್ಟ ಸೇವಾ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು.
ಎಂಎಂಸಿ ಸಂಸ್ಥೆ ಡೀನ್ ಕೆ.ಆರ್.ದಾಕ್ಷಾಯಣಿ, ಆರ್‌ಜಿಯುಎಚ್‌ಎಸ್ ಉಪಕುಲಪತಿ ಎಂ.ಕೆ.ರಮೇಶ್ ಮಾತನಾಡಿದರು.
ಕೂಡ್ಲಿಗಿ ಶಾಸಕ ಎನ್.ಟಿ.ಶ್ರೀನಿವಾಸ್, ವಿಶ್ರಾಂತ ಉಪಕುಲಪತಿ ಡಾ.ಎಸ್.ಚಂದ್ರಶೇಖರ್ ಶೆಟ್ಟಿ, ಮೈಸೂರು ವೈದ್ಯಕೀಯ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ (ಎಂಎಎ) ಅಧ್ಯಕ್ಷ ಡಾ.ಸಿ.ಡಿ.ಶ್ರೀನಿವಾಸ ಮೂರ್ತಿ, ಕಾರ್ಯಕಾರಿ ಅಧ್ಯಕ್ಷ ಎಚ್.ಎನ್.ದಿನೇಶ್, ಕಾರ್ಯದರ್ಶಿ ಡಾ.ಎಚ್.ಬಿ.ಶಶಿಧರ್, ಖಜಾಂಚಿ ಡಾ.ಸರ್ವೇಶ ರಾಜೇ ಅರಸ್, ಡಾ.ಎಚ್.ರವಿಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.