
ಮೈಸೂರು: ‘ಕೇವಲ 5 ಗ್ಯಾರಂಟಿಗಳನ್ನು ಜನತೆಗೆ ನೀಡಿ, ಹಂತಹಂತವಾಗಿ ಭ್ರಷ್ಟಾಚಾರದಲ್ಲಿ ತೊಡಗಿರುವ ಅತ್ಯಂತ ಕೆಟ್ಟ ಸರ್ಕಾರ ರಾಜ್ಯದಲ್ಲಿದೆ’ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಆರೋಪಿಸಿದರು.
ಇಲ್ಲಿನ ರಾಮಕೃಷ್ಣನಗರದ ಇಂದ್ರಲೋಕ ಸಭಾಂಗಣದಲ್ಲಿ ಸೋಮವಾರ ಬಿಜೆಪಿ ಮೈಸೂರು ಮಹಾನಗರ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
‘ಆಡಳಿತ ಪಕ್ಷದ ನಾಲ್ಕೈದು ಶಾಸಕರು ಭ್ರಷ್ಟಾಚಾರ ಮುಂತಾದ ವಿಚಾರದಲ್ಲಿ ಜೈಲು ಸೇರಿದ್ದಾರೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಜನರ ಗಮನಸೆಳೆಯಬೇಕು’ ಎಂದು ಒತ್ತಾಯಿಸಿದರು.
‘ದ್ವೇಷ ಭಾಷಣ ಮಸೂದೆ ಮೂಲಕ ಜನರ ಧ್ವನಿ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಜಿಎಸ್‌ಟಿ ವಿಚಾರದಲ್ಲೂ ಸುಳ್ಳು ಮಾಹಿತಿಯನ್ನು ಈ ಸರ್ಕಾರ ಕೊಡುತ್ತಿದೆ’ ಎಂದು ದೂರಿದರು.
‘ಶಾಸಕ ಜನಾರ್ದನ ರೆಡ್ಡಿ ವಿರುದ್ಧದ ಗೂಂಡಾ ವರ್ತನೆ ಮೈಸೂರಿನಲ್ಲೂ ನಡೆಯಬಹುದು. ಇದು ಮುಖ್ಯಮಂತ್ರಿ ತವರು. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮುಡಾ ಪ್ರಕರಣದ ಅಂತಿಮ ತೀರ್ಪಿನಲ್ಲಿ ವ್ಯತಿರಿಕ್ತ ಸನ್ನಿವೇಶ ಎದುರಾದರೆ ಇಲ್ಲಿಯೂ ಗಲಾಟೆ ಮಾಡುವ ವಾತಾವರಣ ಇದೆ. ಕಾರ್ಯಕರ್ತರು ಎಚ್ಚರದಿಂದ ಇರಬೇಕು. ಹಳೆ ಮೈಸೂರು ಭಾಗದಲ್ಲಿ ನಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಬೇಕು’ ಎಂದರು.
‘ಜೆಡಿಎಸ್ ಜತೆ ನಾವು ಮೈತ್ರಿಯಲ್ಲಿದ್ದೇವೆ. ಈ ಬಗ್ಗೆ ಭಿನ್ನಾಭಿಪ್ರಾಯವನ್ನು ಯಾರೂ ವ್ಯಕ್ತಪಡಿಸಬಾರದು. ಪಕ್ಷದ ನಿರ್ಧಾರಕ್ಕಿಂತ ನಮ್ಮ ಅಭಿಪ್ರಾಯ ದೊಡ್ಡದಲ್ಲ. ಚಾಮರಾಜ ಕ್ಷೇತ್ರದಲ್ಲಿ ಈಗಿರುವ ಶಾಸಕರು ಉತ್ತಮರಾಗಿದ್ದಾರಾ, ಎನ್‌ಆರ್ ಕ್ಷೇತ್ರದಲ್ಲಿ ತನ್ವೀರ್ ಸೇಠ್ ಮನೆ ಮುಂದೆ ಕೆಲಸಕ್ಕಾಗಿ ನಮ್ಮ ಕಾರ್ಯಕರ್ತರು ನಿಲ್ಲಲು ಸಾಧ್ಯವೇ? ಇದನ್ನು ಗಂಭೀರವಾಗಿ ಯೋಚಿಸಿ ಅಧಿಕಾರ ಪಡೆಯಲು ಎಲ್ಲರೂ ಶ್ರಮ ವಹಿಸಬೇಕು’ ಎಂದು ಹೇಳಿದರು.
ಪಕ್ಷದ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿದರು.
ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ಆರ್.ರಘು (ಕೌಟಿಲ್ಯ), ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಡಾ.ಅನಿಲ್ ಥಾಮಸ್, ಗ್ರಾಮಾಂತರ ಘಟಕದ ಅಧ್ಯಕ್ಷ ಕೆ.ಎನ್. ಸುಬ್ಬಣ್ಣ, ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಮಾಜಿ ಮೇಯರ್ ಶಿವಕುಮಾರ್, ಮಾಜಿ ಉಪ ಮೇಯರ್ ರೂಪಾ, ನಗರಪಾಲಿಕೆ ಮಾಜಿ ಸದಸ್ಯ ಬಿ.ವಿ.ಮಂಜುನಾಥ್, ಮುಖಂಡರಾದ ಶಿವಕುಮಾರ್, ಅಪ್ಪಣ್ಣ, ಮಂಜುನಾಥ್ ಹಾಜರಿದ್ದರು.
‘ಕಾರ್ಯಕರ್ತರು ಪಕ್ಷ ಸಂಘಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅವರ ಶ್ರಮಕ್ಕೆ ತಕ್ಕ ಸ್ಥಾನಮಾನ ನೀಡುವ ಏಕೈಕ ಪಕ್ಷ ಬಿಜೆಪಿ. ಸ್ಥಳೀಯ ಅಥವಾ ಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಸಜ್ಜಾಗಬೇಕು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.