ನಂಜನಗೂಡು: ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ದೇಬೂರು, ಬ್ಯಾಳಾರು, ಹರತಲೆ, ಕಳಲೆ ಗ್ರಾಮಗಳಲ್ಲಿ ಇತ್ತಿಚೆಗೆ ಸುರಿದ ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಸಂತ್ರಸ್ತರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ‘ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಕಸಬಾ ಮತ್ತು ಹುಲ್ಲಹಳ್ಳಿ ಹೋಬಳಿಗಳಲ್ಲಿ ಸುಮಾರು 34 ಮನೆಗಳು ನೆಲ ಸಮಗೊಂಡಿವೆ. ಬಿದ್ದು ಹೋದ ಮನೆಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದೇನೆ. ಪ್ರಾಕೃತಿಕ ವಿಕೋಪ ನಿಯಮಾವಳಿ ಅನುಸಾರ ಪೂರ್ಣವಾಗಿ ಬಿದ್ದು ಹೋದ ಮನೆಗಳಿಗೆ ₹1.20 ಲಕ್ಷ ಪರಿಹಾರ ನೀಡಲಾಗುವುದು. ಶೇ 22ಕ್ಕಿಂತ ಕಡಿಮೆ ಹಾನಿಯಾದಲ್ಲಿ ₹6.5 ಸಾವಿರ, ಶೇ 22 ರಿಂದ 50 ಪ್ರತಿಶತ ಹಾನಿಯಾಗಿದ್ದಲ್ಲಿ ₹30 ಸಾವಿರ, ಶೇ 50ರಿಂದ 75 ರಷ್ಟು ಹಾನಿಯಾದಲ್ಲಿ ₹50 ಸಾವಿರ ಪರಿಹಾರ ನಿಗದಿಪಡಿಸಲಾಗಿದೆ. ಈಗಾಗಲೇ ಅಧಿಕಾರಿಗಳು ಮನೆ ಹಾನಿಯಾದ ಪ್ರದೇಶಗಳಿಗೆ ತೆರಳಿ ನಷ್ಟದ ಅಂದಾಜು ನಡೆಸುವಂತೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲಿ ಫಲಾನುಭವಿಗಳಿಗೆ ಪರಿಹಾರ ದೊರಕುವಂತೆ ಸೂಕ್ತ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.
ಮುಖಂಡರಾದ ಕೇಶವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ತಾ.ಪಂ ಇಒ ಜೆರಾಲ್ಢ್ ರಾಜೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.