
ಮೈಸೂರು: ತಾಲ್ಲೂಕಿನ ಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ಆಕರ್ಷಕ ಹಾಗೂ ಮಾದರಿಯಾಗಿ ರೂಪಗೊಂಡಿರುವ ಗ್ರಂಥಾಲಯ ಓದುಗರನ್ನು ಕೈಬೀಸಿ ಕರೆಯುತ್ತಿದೆ. ಅದಕ್ಕೆ ‘ಡಾ. ಬಿ.ಆರ್.ಅಂಬೇಡ್ಕರ್ ಗ್ರಾಮ ಪಂಚಾಯಿತಿ ಅರಿವು ಕೇಂದ್ರ’ ಎಂದು ಹೆಸರಿಡಲಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ.
ಹಾರೋಹಳ್ಳಿ ಗ್ರಾಮ ಪಂಚಾಯಿತಿಯ ಕಾಳಜಿಯ ಪರಿಣಾಮ, ಗ್ರಂಥಾಲಯವು ಓದುಗಸ್ನೇಹಿಯಾಗಿ ರೂಪಗೊಂಡಿದೆ. ಪಂಚಾಯಿತಿ ಕೇಂದ್ರವಾದ ಹಾರೋಹಳ್ಳಿ ಗ್ರಾಮದ ಜೊತೆಗೆ ಸುತ್ತಮುತ್ತಲ 8 ಹಳ್ಳಿಗಳ ವಿದ್ಯಾರ್ಥಿಗಳು, ಸಾರ್ವಜನಿಕರು, ಯುವಕರು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಜ್ಞಾನಧಾರೆ ಎರೆಯಲು ಸಿದ್ಧವಾಗಿದೆ. ಜನಪರವಾಗಿ ಯೋಚಿಸಿದರೆ, ಬಳಕೆಯಾಗದಿದ್ದ ಭವನವನ್ನು ಸುಂದರವಾದ ಅರಿವು ಕೇಂದ್ರವನ್ನಾಗಿ ಹೇಗೆ ರೂಪಿಸಬಹುದು ಎಂಬುದಕ್ಕೆ ಹಾರೋಹಳ್ಳಿ ಗ್ರಾ.ಪಂ. ನಿದರ್ಶನವಾಗಿದೆ.
ಹಾಳಾಗುವ ಸ್ಥಿತಿಯಲ್ಲಿತ್ತು: ಅಲ್ಲಿ 2018ರಲ್ಲಿ ನಿರ್ಮಿಸಿದ್ದ ಅಂಬೇಡ್ಕರ್ ಸಮುದಾಯ ಭವನ ಸರಿಯಾಗಿ ಬಳಕೆ ಆಗಿರಲಿಲ್ಲ. ಸುತ್ತಲೂ ಗಿಡಗಳು ಬೆಳೆದಿದ್ದವು. ಹಾಗೆಯೇ ಬಿಟ್ಟಿದ್ದರೆ ಹಾಳಾಗುವ ಸ್ಥಿತಿ ಇತ್ತು. ಈ ನಡುವೆ, ಗ್ರಾಮದ ಗ್ರಂಥಾಲಯ ಚಿಕ್ಕದೆನಿಸುತ್ತಿತ್ತು. ಹೀಗಾಗಿ, ಭವನವನ್ನೇಕೆ ಅರಿವು ಕೇಂದ್ರ ಮಾಡಬಾರದೆಂಬ ಯೋಚನೆಯು ಪಂಚಾಯಿತಿಯವರಿಗೆ ಬಂದಿದ್ದು, ಫಲ ನೀಡಿದೆ. ಕೆಲವೇ ತಿಂಗಳಲ್ಲಿ ಇದನ್ನು ಸಾಧ್ಯವಾಗಿಸಲಾಗಿದೆ. ನಗರ ಪ್ರದೇಶದಲ್ಲೂ ಇಂತಹ ಗ್ರಂಥಾಲಯ ಕಾಣಸಿಗದು!
ಭವನಕ್ಕೆ ಸಂಬಂಧಿಸಿದ ಮುಖಂಡರೊಂದಿಗೆ ಸಮಾಲೋಚಿಸಿದ ಪಂಚಾಯಿತಿಯವರು, ಅವರ ಸಮ್ಮತಿಯೊಂದಿಗೆ ಅರಿವು ಕೇಂದ್ರ ಮಾಡಿದ್ದಾರೆ. ಇದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಜ್ಯದಲ್ಲೇ ಮೊದಲು: ‘ಅಂಬೇಡ್ಕರ್ ಸಮುದಾಯ ಭವನ ಬಿಟ್ಟುಕೊಟ್ಟಿರುವುದು ಹಾಗೂ ಅದನ್ನು ಅರಿವು ಕೇಂದ್ರ ಮಾಡಿರುವುದು ರಾಜ್ಯದಲ್ಲೇ ಇದೇ ಮೊದಲನೆಯದಾಗಿದೆ. ಗ್ರಾ.ಪಂ. ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷೆ ಜ್ಯೋತಿ ಮಹದೇವನಾಯಕ, ನಟರಾಜ್ ಸೇರಿದಂತೆ ಎಲ್ಲ ಸದಸ್ಯರ ಸಹಕಾರ ದೊಡ್ಡದು. ₹ 15 ಲಕ್ಷ ವೆಚ್ಚವಾಗಿದೆ. 15ನೇ ಹಣಕಾಸು ಹಾಗೂ ಸ್ವಂತ ಸಂಪನ್ಮೂಲ ಬಳಸಿಕೊಳ್ಳಲಾಗಿದೆ. ಗ್ರಂಥಪಾಲಕರಿಗೆ ಪ್ರತ್ಯೇಕ ಚೇಂಬರ್ ಮಾಡಲಾಗಿದೆ’ ಎಂದು ಅಲ್ಲಿನ ಪಿಡಿಒ ಕೆ.ಎಸ್. ಗಣೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹಾರೋಹಳ್ಳಿ ಪಂಚಾಯಿತಿಯು 6 ಕಂದಾಯ ಗ್ರಾಮ ಹಾಗೂ ಮೂರು ಉಪಗ್ರಾಮ ಒಳಗೊಂಡಿದೆ. ಹಾರೋಹಳ್ಳಿ, ಗುಜ್ಜೇಗೌಡನಪುರ, ಮಂಡನಹಳ್ಳಿ, ಮದ್ದೂರು, ಎಸ್. ಕಲ್ಲಹಳ್ಳಿ, ಚುಂಚರಾಯನಹುಂಡಿ, ಕಾಡನಹಳ್ಳಿ, ಮದ್ದೂರುಹುಂಡಿ ಹಾಗೂ ಮಹದೇವಪುರ ವ್ಯಾಪ್ತಿ ಹೊಂದಿದೆ. 2011ರ ಜನಗಣತಿ ಪ್ರಕಾರ 9,500 ಜನಸಂಖ್ಯೆ ಇದೆ. 23 ಮಂದಿ (12 ಮಹಿಳೆಯರು, 11 ಪುರುಷರು) ಪಂಚಾಯಿತಿ ಸದಸ್ಯರಿದ್ದಾರೆ.
ಡಾ.ಬಿ.ಆರ್. ಅಂಬೇಡ್ಕರ್ ಅರಿವು ಕೇಂದ್ರ ಶೀಘ್ರವೇ ಉದ್ಘಾಟನೆಗೊಳ್ಳಲಿದೆ. ಪಂಚಾಯಿತಿಯ ಎಲ್ಲ ಸದಸ್ಯರೂ ಮುಕ್ತ ಮನಸ್ಸಿನಿಂದ ಸಹಕರಿಸಿದ್ದರಿಂದ ಈ ಕೆಲಸ ಸಾಧ್ಯವಾಯಿತುಕೆ.ಎಸ್. ಗಣೇಶ್ ಪಿಡಿಒ ಹಾರೋಹಳ್ಳಿ ಗ್ರಾಮ ಪಂಚಾಯಿತಿ ಜಯಪುರ ಹೋಬಳಿ
ಈ ಅರಿವು ಕೇಂದ್ರದಲ್ಲಿ 50 ಮಂದಿ ಏಕಕಾಲಕ್ಕೆ ಕುಳಿತು ಓದಬಹುದು. ನಾಲ್ಕು ವಿಭಾಗ ಮಾಡಲಾಗಿದೆ. ದೃಷ್ಟಿದೋಷವುಳ್ಳವರಿಗಾಗಿ ‘ಬೀಕನ್ ವಿಭಾಗ’ವಿದದ್ದು ಬ್ರೈಲ್ ಲಿಪಿಯ ಪುಸ್ತಕಗಳಿವೆ. ಡಿಜಿಟಲ್ ಲೈಬ್ರರಿ ವಿಭಾಗದಲ್ಲಿ 2 ಕಂಪ್ಯೂಟರ್ 2 ಲ್ಯಾಪ್‌ಟಾಪ್ 2 ಮೊಬೈಲ್ ಫೋನ್ ಲಭ್ಯವಿದೆ. ಅವುಗಳಿಗೆ ಅಂತರ್ಜಾಲದ ಸಂಪರ್ಕ ಕಲ್ಪಿಸಲಾಗಿದ್ದು ಆನ್‌ಲೈನ್‌ನಲ್ಲಿನ ಓದಿಗಾಗಿ ಉಚಿತವಾಗಿ ಬಳಸಿಕೊಳ್ಳಬಹುದು. ರೈತರ ವಿಭಾಗದಲ್ಲಿ ಶೇ 95ರಷ್ಟು ಪುಸ್ತಕಗಳನ್ನು ಕೃಷಿ ತೋಟಗಾರಿಕೆ ಬೇಸಾಯ ಕ್ರಮ ಮೊದಲಾದವುಗಳಿಗೆ ಸಂಬಂಧಿಸಿದವನ್ನೇ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ವಿಭಾಗದಲ್ಲಿ ಲೇಖಕಿಯರ ಪುಸ್ತಕಗಳಿವೆ. ಮಕ್ಕಳಿಗೆ ಸಂಬಂಧಿಸಿದ ಪುಸ್ತಕಗಳಿಗಾಗಿ ಮಕ್ಕಳ ವಿಭಾಗ ಮಾಡಲಾಗಿದೆ. ಮಕ್ಕಳಿಗಾಗಿ ಶಟಲ್ ಚೆಸ್ ಕೇರಂ ಆಡುವುದಕ್ಕೂ ಅವಕಾಶವಿದೆ. ಜೊತೆಗೆ ದಿನಪತ್ರಿಕೆಗಳು ನಿಯತಕಾಲಿಕೆಗಳೂ ಲಭ್ಯವಾಗಲಿದೆ.-
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.