ಮೈಸೂರು: ‘ಆಧುನಿಕ ಕೃಷಿ ಪದ್ಧತಿ ಅಳವಡಿಕೆ, ತಂತ್ರಜ್ಞಾನ, ಯಂತ್ರೋಪಕರಣಗಳ ಬಳಕೆಗೆ ಕೃಷಿಕರು ಮುಂದಾಗಬೇಕು. ಆಗ ಉತ್ತಮ ಇಳವರಿ, ಆರ್ಥಿಕ ಅಭಿವೃದ್ಧಿ ಸಾಧ್ಯ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ರೈತರಿಗೆ ಸಲಹೆ ನೀಡಿದರು.
ದಸರಾ ಪ್ರಯುಕ್ತ ಇಲ್ಲಿನ ಜೆ.ಕೆ.ಮೈದಾನದ ಸಭಾಂಗಣದಲ್ಲಿ ಶುಕ್ರವಾರ ಭತ್ತ ಕುಟ್ಟುವ ಹಾಗೂ ತೆಂಗಿನ ಹೊಂಬಾಳೆ ಅರಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
‘ಕೃಷಿ ಕಾರ್ಮಿಕರ ಅಲಭ್ಯತೆ ಸಮಸ್ಯೆಗೂ ಇದರಿಂದ ಪರಿಹಾರ ದೊರೆಯಲಿದೆ. ರೈತರಿಗೆ ಅವಶ್ಯ ಸೌಲಭ್ಯ, ಮಾರ್ಗದರ್ಶನವನ್ನು ಸರ್ಕಾರದಿಂದ ಒದಗಿಸಲಾಗುತ್ತಿದೆ. ಕೃಷಿಗೆ ಸಂಬಂಧಿಸಿದ ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ, ರೇಷ್ಮೆ ಕೃಷಿಯ ಮಾಹಿತಿಯನ್ನೂ ದಸರಾ ವಸ್ತು ಪ್ರದರ್ಶನದಲ್ಲಿ ತೋರಲಾಗಿದ್ದು ಬಳಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.
‘ರೈತರಲ್ಲಿ ಕೆಲವರು ತಾವು ಸಂಗ್ರಹಿಸಿರುವ ಹಳೆ ತಳಿಯ ಬೀಜಗಳನ್ನೇ ಬೆಳೆ ಬೆಳೆಯಲು ಮುಂದಾಗುತ್ತಾರೆ. ಆದರೆ, ಸಂಗ್ರಹಿಸಲ್ಪಟ್ಟ ತಳಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ, ರೋಗ ನಿರೋಧಕ ಶಕ್ತಿ ಹೆಚ್ಚಿರುವ, ಆಧುನಿಕ ಪದ್ಧತಿಯಿಂದ ಸಂಸ್ಕರಿಸಲ್ಪಟ್ಟ ತಳಿಗಳ ಬೇಸಾಯ ಆರ್ಥಿಕವಾಗಿ ಸಹಕಾರಿ. ಕೃಷಿ ವಿಶ್ವವಿದ್ಯಾಲಯಗಳ ಸಹಕಾರ ಪಡೆಯಬಹುದು’ ಎಂದು ಸಲಹೆ ನೀಡಿದರು.
‘ಕಬ್ಬು ಕಟಾವು ಯಂತ್ರಕ್ಕೆ ಸುಮಾರು ₹1 ಕೋಟಿ ದರವಿದ್ದು, ರಾಜ್ಯ ಸರ್ಕಾರ ರೈತರಿಗೆ ಶೇ 50ರಷ್ಟು ಸಬ್ಸಿಡಿ ನೀಡುತ್ತಿದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ತಲಾ ₹50 ಲಕ್ಷ, ಹಿಂದುಳಿದ ವರ್ಗಕ್ಕೆ ₹40 ಲಕ್ಷ ಸಹಾಯ ಧನ ನೀಡಿ ಉತ್ತೇಜನ ನೀಡುತ್ತಿದೆ. ಯಂತ್ರೋಪಕರಣಕ್ಕಾಗಿಯೇ ₹1 ಸಾವಿರ ಕೋಟಿ ಮೀಸಲಿರಿಸಿದ್ದು, ಸುಮಾರು 334 ಫಲಾನುಭವಿಗಳು ಇದರ ಸೌಲಭ್ಯ ಪಡೆದುಕೊಂಡಿದ್ದಾರೆ. ನಾಟಿ, ಕಟಾವು ಇನ್ನಿತರ ಕೆಲಸಕ್ಕೆ ಯಂತ್ರೋಪಕರಣಗಳನ್ನು ಬಳಸಿ’ ಎಂದರು.
ಗ್ರಾಮೀಣ ಭಾಗಗಳಲ್ಲಿ ಕೃಷಿ ಮಾಹಿತಿ ತಿಳಿಸಲು ಕೃಷಿ ಪರಿಸರ ಪ್ರವಾಸೋದ್ಯಮ ಕೈಪಿಡಿ ಬಿಡುಗಡೆಗೊಳಿಸಲಾಯಿತು.
ಶಾಸಕ ಕೆ.ಹರೀಶ್‌ಗೌಡ, ವಿಧಾನಪರಿಷತ್ತು ಸದಸ್ಯ ಕೆ.ಶಿವಕುಮಾರ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರ್‌ನಾಥ್, ರೈತರ ದಸರಾ ಉಪ ಸಮಿತಿ ಕಾರ್ಯಧ್ಯಕ್ಷ ಕೆ.ಎಚ್ ರವಿ, ಅಧ್ಯಕ್ಷ ಕೆ.ಪಿ.ಯೋಗೇಶ್, ಉಪ ವಿಶೇಷಾಧಿಕಾರಿ ಭೀಮಪ್ಪ ಕೆ.ಲಾಳಿ, ಉಪಾಧ್ಯಕ್ಷರಾದ ಹರೀಶ್ ಮೊಗಣ್ಣ, ಗೋವಿಂದ ಶೆಟ್ಟಿ, ಶ್ರೀನಿವಾಸ್, ರಘು, ಕೆ.ಎಸ್.ಕೃಷ್ಣಮೂರ್ತಿ, ಉಪ ಕೃಷಿ ನಿರ್ದೇಶಕ ಬಿ.ಎನ್.ಧನಂಜಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.