ADVERTISEMENT

ಮೈಸೂರು | ಅಶೋಕಪುರಂ ರೈಲು ನಿಲ್ದಾಣ ಅಭಿವೃದ್ಧಿಗೆ ₹ 28.78 ಕೋಟಿ: ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2022, 10:55 IST
Last Updated 17 ಡಿಸೆಂಬರ್ 2022, 10:55 IST
   

ಮೈಸೂರು: ‘ಅಶೋಕಪುರಂ ರೈಲು ನಿಲ್ದಾಣದಲ್ಲಿ ₹ 28.78 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ತಲಾ ಮತ್ತೆರಡು ಅಂಕಣಗಳು, ಹಳಿಗಳನ್ನು ಅಲ್ಲಿ ನಿರ್ಮಿಸಲಾಗುತ್ತಿದ್ದು, ನಾಲ್ಕೈದು ತಿಂಗಳಲ್ಲಿ ಸಿದ್ಧಗೊಳ್ಳಲಿವೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ಇಲ್ಲಿನ ಅಶೋಕಪುರಂ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಹಿಂದೆ ಇದ್ದ ಗೂಡ್ಸ್ ಶೆಡ್ ಜಾಗವನ್ನು ಬಳಸಿಕೊಂಡು ಹೆಚ್ಚುವರಿಯಾಗಿ ಅಂಕಣಗಳನ್ನು (ಪ್ಲಾಟ್‌ಫಾರಂ) ನಿರ್ಮಿಸಲಾಗುತ್ತಿದೆ. ನಿಲ್ದಾಣದಲ್ಲಿ ಸದ್ಯ ಮೂರು ಅಂಕಣಗಳಿವೆ. ಹೆಚ್ಚುವರಿಯಾಗಿ ಮತ್ತೆರಡು ನಿರ್ಮಾಣಗೊಳ್ಳುತ್ತಿವೆ. ಇಲ್ಲಿ ರೈಲುಗಳನ್ನು ನಿಲುಗಡೆ ಮಾಡಬಹುದಾಗಿದೆ. ಇದರಿಂದ ಕೇಂದ್ರ ರೈಲು ನಿಲ್ದಾಣದ ಮೇಲಿನ ದಟ್ಟಣೆ ಕಡಿಮೆಯಾಗಲಿದೆ. ಅಲ್ಲದೇ, ಇಲ್ಲಿಂದಲೂ ರೈಲುಗಳು ಹೊರಡುವುದರಿಂದ ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ಮೊದಲ ಹಂತದಲ್ಲಿ ₹ 15.25 ಕೋಟಿ ಹಾಗೂ 2ನೇ ಹಂತದಲ್ಲಿ ₹ 13.50 ಕೋಟಿ ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಿಲ್ದಾಣದಿಂದ ಚಿಕ್ಕಹರದನಹಳ್ಳಿ ಕಡೆಗೆ ಪಾದಚಾರಿ ಮೇಲ್ಸೇತುವೆಯನ್ನೂ ನಿರ್ಮಿಸಲಾಗುವುದು. ಇದರಿಂದಾಗಿ, ಚಿಕ್ಕಹರದನಹಳ್ಳಿ, ಶ್ರೀರಾಂಪುರ 2ನೇ ಹಂತ, ಜೆ.‍ಪಿ.ನಗರ, ಜಯನಗರದ ಮೊದಲಾದ ಕಡೆಗಳ ಪ್ರಯಾಣಿಕರು ಸುತ್ತಿ ಬಳಸಿಕೊಂಡು ರೈಲು ನಿಲ್ದಾಣಕ್ಕೆ ಬರುವುದು ತಪ್ಪಲಿದೆ. ಹೆಚ್ಚುವರಿಯಾಗಿ ಹಳಿಗಳು (ಸ್ಟೇಬಲಿಂಗ್ ಲೈನ್) ಲಭ್ಯವಾಗುವುದರಿಂದಾಗಿ ಅಲ್ಲಿ ರೈಲುಗಳನ್ನು ತೊಳೆಯುವುದಕ್ಕೆ ಹಾಗೂ ನಿರ್ವಹಣೆಗೆ ಸಹಕಾರಿಯಾಗಲಿದೆ. ನಿಲ್ದಾಣದ ಹಿಂಬದಿಯಿಂದಲೂ (ಚಿಕ್ಕಹರದನಹಳ್ಳಿ ಕಡೆಯಿಂದ) ಪ್ರಯಾಣಿಕರ ಪ್ರವೇಶಕ್ಕೆ ಅವಕಾಶ ಕೊಡಲಾಗುವುದು’ ಎಂದು ಮಾಹಿತಿ ನೀಡಿದರು.

‘ನಿಲ್ದಾಣದ ಬಳಿ 5ಸಾವಿರ ಚ.ಮೀ. ಸರ್ಕಾರಿ ಜಾಗ ಲಭ್ಯವಿದೆ. ಅದನ್ನು ಹಿಂದೆ ಮಹಾನಗರಪಾಲಿಕೆಗೆ ನೀಡಲಾಗಿತ್ತು. ಅದನ್ನು ಅವರು ಬಳಸಿಕೊಂಡಿಲ್ಲ. ಅಭಿವೃದ್ಧಿ ಕಾಮಗಾರಿಗಾಗಿ ಈಗ ವಾಪಸ್ ಪಡೆದುಕೊಳ್ಳಲಾಗುತ್ತಿದೆ. 318 ಚ.ಮೀ. ಜಾಗವನ್ನು ಖಾಸಗಿಯವರಿಂದ ಖರೀದಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಮೈಸೂರಿನ ಬೆಳವಣಿಗೆ ಹಿನ್ನೆಲೆಯಲ್ಲಿ ದೂರದೃಷ್ಟಿಯಿಂದ ಕೈಗೊಂಡಿರುವ ಯೋಜನೆ ಇದಾಗಿದೆ. ಕೇಂದ್ರ ರೈಲು ನಿಲ್ದಾಣದ ನಂತರ 2ನೇ ದೊಡ್ಡ ನಿಲ್ದಾಣವನ್ನಾಗಿ ಮಾಡಲಾಗುತ್ತಿದೆ’ ಎಂದರು.

ನೈರುತ್ಯ ರೈಲ್ವೆ ಮೈಸೂರು ವಿಭಾಗದ ಡಿಆರ್‌ಎಂ ರಾಹುಲ್ ಅಗರ್‌ವಾಲ್‌, ಮೈಸೂರು ಉಪ ವಿಭಾಗಾಧಿಕಾರಿ ಕಮಲಾ ಬಾಯಿ ಇದ್ದರು.

ಎಲೆಕ್ಟ್ರಿಕ್‌ ರೈಲು: ತೊಡಕು ನಿವಾರಣೆಗೆ ಕ್ರಮ
ಮೈಸೂರು:
‘ಮೈಸೂರು–ಚಾಮರಾಜನಗರ ಮಾರ್ಗದಲ್ಲಿ ವಿದ್ಯುದ್ದೀಕರಣ ಯೋಜನೆಯನ್ನು ಸಂಪೂರ್ಣ ಅನುಷ್ಠಾನಗೊಳಿಸಿ, ಎಲೆಕ್ಟ್ರಿಕ್‌ ಎಂಜಿನ್‌ ರೈಲುಗಳ ಸಂಚಾರಕ್ಕೆ ಎದುರಾಗಿರುವ ತೊಡಕು ನಿವಾರಣೆಗೆ ಪ್ರಯತ್ನಿಸಲಾಗುತ್ತಿದೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ಇಲ್ಲಿನ ಅಶೋಕಪುರಂ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಈ ಮಾರ್ಗದಲ್ಲಿ ಎಲೆಕ್ಟ್ರಿಕ್‌ ಎಂಜಿನ್ ರೈಲು ಸಂಚಾರ ಸದ್ಯಕ್ಕೆ ಆರಂಭವಾಗುವುದಿಲ್ಲ. ಮತ್ತಷ್ಟು ತಿಂಗಳುಗಳು ಕಾಯಬೇಕಾಗುತ್ತದೆ. ಮಂಡಕಳ್ಳಿಯಲ್ಲಿರುವ ವಿಮಾನ ನಿಲ್ದಾಣದ ಸಮೀಪದಲ್ಲಿ ಹಾದು ಹೋಗಿರುವ ಹಳಿಯಲ್ಲಿ ಒಂದೂವರೆ ಕಿ.ಮೀ.ನಷ್ಟು ವಿದ್ಯುತ್ ಲೈನ್ ಅಳವಡಿಸಲು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅನುಮತಿ ದೊರೆತಿಲ್ಲ. ವಿಮಾನಗಳ ಲ್ಯಾಂಡಿಂಗ್‌ಗೆ ತೊಂದರೆ ಆಗಬಹುದು ಎನ್ನುವುದು ಇದಕ್ಕೆ ಕಾರಣವಾಗಿದೆ. ಹೀಗಾಗಿ, ಎಲೆಕ್ಟ್ರಿಕಲ್ ಎಂಜಿನ್‌ ರೈಲುಗಳ ಸಂಚಾರ ವಿಳಂಬವಾಗುತ್ತಿದೆ’ ಎಂದರು.

‘ಮೈಸೂರು-ಚಾಮರಾಜನಗರ ನಡುವೆ ಎಂದಿನಂತೆಯೇ ಡಿಸೇಲ್ ಎಂಜಿನ್‌ ರೈಲುಗಳೇ ಸಂಚರಿಸಲಿವೆ. ಈಗ ಎಲೆಕ್ಟ್ರಿಕ್‌ ರೈಲು ಸಂಚರಿಸಬೇಕಾದರೆ ಮೈಸೂರಿನಿಂದ ಮಂಡಕಳ್ಳಿ ಸಮೀಪದವರೆಗೆ ಹಾಗೂ ಚಾಮರಾಜನಗರ ಕಡೆಯಿಂದ ಬರುವಾಗ ಕಡಕೊಳ ಬಳಿ ಡೀಸೆಲ್‌ ಎಂಜಿನ್‌ ಬದಲಿಸಬೇಕಾಗುತ್ತದೆ. ಇದಕ್ಕಾಗಿ ಸರಾಸರಿ ಒಂದು ತಾಸು ಬೇಕಾಗುತ್ತದೆ. ಆದ್ದರಿಂದ, ಸಮಸ್ಯೆ ಪರಿಹರಿಸಲು ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ’ ಎಂದರು.

‘ವಿಮಾನನಿಲ್ದಾಣದ ರನ್‌ವೇ ವಿಸ್ತರಣೆಗೆ ಅಗತ್ಯ ಭೂಮಿಯನ್ನು (242 ಎಕರೆ) ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಹೆಚ್ಚುವರಿ ಭೂಮಿ ಪಡೆದುಕೊಳ್ಳುವುದಕ್ಕೂ ಯೋಜಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಿದ್ದೇನೆ. ಹೆಚ್ಚುವರಿಯಾಗಿ 50 ಎಕರೆ ಕೊಡುವಂತೆ ಕೋರಲಿದ್ದೇನೆ’ ಎಂದು ತಿಳಿಸಿದರು.

‘ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ರನ್‌ವೇ ವಿಸ್ತರಣೆಗಾಗಿ ಅಗತ್ಯವಿರುವ ಜಮೀನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರದಿಂದ ₹ 319 ಕೋಟಿ ಅನುದಾನ ಮಂಜೂರಾಗಿದೆ. 1ನೇ ಹಂತದಲ್ಲಿ ₹ 50 ಕೋಟಿಯನ್ನು ಕೆ.ಐ.ಎ.ಡಿ.ಬಿ.ಗೆ ಬಿಡುಗಡೆ ಮಾಡಲಾಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸುವ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಕೋರಿದ್ದ ಮೇರೆಗೆ 2ನೇ ಹಂತದಲ್ಲಿ ₹ 100 ಕೋಟಿಯನ್ನು ಸರ್ಕಾರವು ಕೆ.ಐ.ಎ.ಡಿ.ಬಿ.ಗೆ ಬಿಡುಗಡೆ ಮಾಡಿದೆ’ ಎಂದು ಹೇಳಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.