ADVERTISEMENT

ನಾಲ್ವಡಿ ಅವರ ಕಾಲಿನ ದೂಳಿಗೂ ಪ್ರತಾಪಸಿಂಹ ಸಮವಲ್ಲ: ಎಂ.ಲಕ್ಷ್ಮಣ ಟೀಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 9:46 IST
Last Updated 31 ಜನವರಿ 2022, 9:46 IST
ಎಂ.ಲಕ್ಷ್ಮಣ
ಎಂ.ಲಕ್ಷ್ಮಣ   

ಮೈಸೂರು: ಮನೆಮನೆಗೆ ಕೊಳವೆ ಮೂಲಕ ಅಡುಗೆ ಅನಿಲ ವಿತರಿಸುವ ಕೇಂದ್ರ ಸರ್ಕಾರದ ಯೋಜನೆ ಕುರಿತು ಸಂಸದ ಪ್ರತಾಪಸಿಂಹ ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.

ಈ ಯೋಜನೆಯಲ್ಲಿ ಶೇ 10ರಷ್ಟು ಕಮಿಷನ್‌ನ್ನು ಪಡೆಯಲಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಈ ಕುರಿತು ಪ್ರತಾಪಸಿಂಹ ಸ್ಪಷ್ಟನೆ ನೀಡಬೇಕು ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಈ ಯೋಜನೆಗೆ ಅನುಮತಿ ನೀಡಬೇಕೋ, ಬೇಡವೋ ಎಂಬುದನ್ನು ಪಾಲಿಕೆ ಸದಸ್ಯರು ತೀರ್ಮಾನಿಸುತ್ತಾರೆ. ಇವರ ಮೇಲೆ ಯೋಜನೆಗೆ ಅನುಮತಿ ನೀಡಬೇಕು ಎಂದು ಪ್ರತಾಪಸಿಂಹ ಒತ್ತಡ ಹೇರುವುದಾದರೂ ಏಕೆ ಎಂದು ಪ್ರಶ್ನಿಸಿದರು.

ADVERTISEMENT

ಈಗಾಗಲೇ ಬಿಜೆಪಿ ಶಾಸಕ ಎಲ್.ನಾಗೇಂದ್ರ ಈ ಯೋಜನೆಯಡಿ ಕಮಿಷನ್ ಆಸೆ ಇಲ್ಲ ಎಂದು ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಿದ್ದಾರೆ. ಪ್ರತಾಪಸಿಂಹ ಪದೇ ಪದೇ ತಮ್ಮದೇ ‍ಪಕ್ಷದ ಶಾಸಕರು ಹಾಗೂ ಪಾಲಿಕೆ ಸದಸ್ಯರ ಮೇಲೆ ಆರೋಪ ಮಾಡುತ್ತಿದ್ದಾರೆ. ಇವೆಲ್ಲವೂ ಕಮಿಷನ್‌ ದಂಧೆ ಕುರಿತ ಅನುಮಾನವನ್ನು ಬಲಗೊಳಿಸುತ್ತದೆ ಎಂದರು.

ದರ ದುಬಾರಿ

ಪ್ರತಾಪಸಿಂಹ ಹೇಳುವಂತೆ ಈ ಯೋಜನೆಯಡಿ ಸಾರ್ವಜನಿಕರಿಗೆ ಅಗ್ಗದ ದರದಲ್ಲಿ ಅಡುಗೆ ಅನಿಲ ಸಂಪರ್ಕ ದೊರೆಯುವುದಿಲ್ಲ. ಒಟ್ಟು ₹ 7,154 ನಗದನ್ನು ಮುಂಗಡವಾಗಿಯೇ ಪಾವತಿಸಬೇಕು. ಒಂದು ವೇಳೆ ಬಿಲ್ ಪಾವತಿಸಲಿಲ್ಲ ಎಂದರೆ ಸಂಪರ್ಕ ಕಡಿದು ಹಾಕಲು ₹ 450, ಮತ್ತೆ ಸಂಪರ್ಕ ನೀಡಲು ₹1,000, ತಡವಾಗಿ ಬಿಲ್ ಪಾವತಿಸಿದರೆ ನಿತ್ಯ ₹ 50 ದಂಡ, ಸಣ್ಣ ರಬ್ಬರ್ ಪೈಪಿನ ಬದಲಾವಣೆಗೆ ₹ 110 ಹೀಗೆ ಬಿಡಿಭಾಗಗಳ ದರವೂ ದುಬಾರಿ ಎನಿಸಿದೆ. ಕನಿಷ್ಠ ಎಂದರೂ ₹ 25 ಸಾವಿರ ಹಣ ಸಂಪರ್ಕ ಪಡೆಯಲು ಬೇಕಾಗುತ್ತದೆ. ಈ ಎಲ್ಲ ವಿಚಾರಗಳಿಂದ ಪ್ರತಾಪಸಿಂಹ ಕೇವಲ ಪಾಲಿಕೆ ಸದಸ್ಯರು, ಅವರದೇ ಪಕ್ಷದ ಶಾಸಕರನ್ನು ಮಾತ್ರವಲ್ಲ ಸಾರ್ವಜನಿಕರನ್ನೂ ಕತ್ತಲಲ್ಲಿರಿಸಿದ್ದಾರೆ ಎಂದು ದೂರಿದರು.

ಸಬ್ಸಿಡಿ ನೀಡುವುದನ್ನು ನಿಲ್ಲಿಸುವುದು ಹಾಗೂ ಖಾಸಗೀಕರಣವೇ ಈ ಯೋಜನೆಯ ಉದ್ದೇಶ. ಗ್ಯಾಸ್‌ ಡೀಲರ್‌ಷಿಪ್‌ನ್ನು ರದ್ದುಗೊಳಿಸಿ, ಸಿಲಿಂಡರ್‌ಗಳನ್ನು ಹೊಂದುವುದಕ್ಕೂ ಅವಕಾಶ ನೀಡುವುದಿಲ್ಲ. ದರ ಏರಿಕೆ ಮೇಲೆ ಸರ್ಕಾರದ ನಿಯಂತ್ರಣ ಇರುವುದಿಲ್ಲ. ಬಡವರು ಮತ್ತು ಮಧ್ಯಮವರ್ಗದವರಿಗೆ ಈ ಯೋಜನೆ ಹೊರೆ ಎನಿಸಲಿದೆ ಎಂದರು.

ಅಡುಗೆ ಅನಿಲ ತಯಾರಾಗುವ ಘಟಕದಿಂದ ನೇರವಾಗಿ ಕೊಳವೆ ಮೂಲಕ ಬರುವುದರಿಂದ ಇಂಧನ ಉಳಿತಾಯವಾಗುತ್ತದೆ ಎಂಬುದೂ ಸುಳ್ಳು. ಇದು ಲಾರಿಗಳ ಮೂಲಕ ಇಲ್ಲಿನ ಹೆಬ್ಬಾಳದ ಘಟಕಕ್ಕೆ ಬಂದು ಅಲ್ಲಿಂದ ಕೊಳವೆ ಮೂಲಕ ಸರಬರಾಜಾಗುತ್ತದೆ. ಇದು ಪರಿಸರ ಸ್ನೇಹಿ ಯೋಜನೆಯೂ ಅಲ್ಲ ಎಂದು ಹೇಳಿದರು.

ಒಂದು ವೇಳೆ ಅಕ್ಕಪಕ್ಕದವರು ಈ ಪೈಪಿಗೆ ಹಾನಿ ಮಾಡಿದರೆ ಸಂಭವಿಸುವ ಅಪಾಯಗಳೇನು. ಇದಕ್ಕೆ ಕೈಗೊಂಡಿರುವ ಸುರಕ್ಷಿತ ಕ್ರಮಗಳೇನು, ವಿಶಾಖಪಟ್ಟಣದಲ್ಲಿ ಈಗಾಗಲೇ ದುರಂತವೊಂದು ಸಂಭವಿಸಿದೆ. ಈ ಎಲ್ಲ ವಿಚಾರಗಳ ಕುರಿತು ಕೇವಲ ಬಾಯಿಮಾತಿನ ಭರವಸೆ ಬೇಕಿಲ್ಲ. ಪಾಲಿಕೆ ಸದಸ್ಯರಿಗೆ ಸಂಪೂರ್ಣವಾದ ಮಾಹಿತಿ ನೀಡಿ, ಅವರ ಸಂದೇಹಗಳನ್ನು ನಿವಾರಿಸಬೇಕು ಎಂದು ಅವರು ಒತ್ತಾಯಿಸಿದರು.

ನಿಜ ಹೇಳಿದ ಪ್ರತಾಪಸಿಂಹ

‘ತಮ್ಮದೇ ಪಕ್ಷದ ಶಾಸಕ ಎಲ್.ನಾಗೇಂದ್ರ ತಮ್ಮ ಕ್ಷೇತ್ರಕ್ಕೆ ಕೊಟ್ಟಿರುವುದು ಕೇವಲ ₹ 50 ಕೋಟಿ ಮಾತ್ರ. ಮಿಕ್ಕಿದ್ದೆಲ್ಲ ಹಿಂದಿನ ಕಾಂಗ್ರೆಸ್ ಶಾಸಕ ವಾಸು ಅವರ ಕೊಡುಗೆ ಎಂದು ಪ್ರತಾಪಸಿಂಹ ಹೇಳಿದ್ದಾರೆ. ಅಪರೂಪಕ್ಕೆ ಅವರು ಈ ರೀತಿ ಸತ್ಯವನ್ನು ಹೇಳಿರುವುದು ನಮಗೂ ಸಂತಸ ತರಿಸಿದೆ’ ಎಂದು ವ್ಯಂಗ್ಯವಾಡಿದರು.

‘ತಮ್ಮನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಹೋಲಿಸಿಕೊಂಡು, ಅವರ ನಂತರ ಮೈಸೂರಿಗೆ ದೊಡ್ಡ ಕೊಡುಗೆ ಕೊಟ್ಟವ ನಾನೇ ಎಂದು ಹೇಳಿಕೊಂಡಿರುವುದು ನಿಜಕ್ಕೂ ಮೈಸೂರಿಗೆ ಮಾಡಿದ ಅವಮಾನ. ನಾಲ್ವಡಿ ಅವರ ಕಾಲಿನ ದೂಳಿಗೂ ಪ್ರತಾಪಸಿಂಹ ಸಮವಲ್ಲ’ ಎಂದು ಕಿಡಿಕಾರಿದರು.

ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವದ ದಿನ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆಗೆದ ವಿಚಾರ ಕುರಿತು ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರ ಮೌನ ಆ ಕೃತ್ಯವನ್ನು ಸಮರ್ಥಿಸುವಂತಿದೆ ಎಂದು ಹೇಳಿದರು.

ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ಮಾತನಾಡಿ, ‘ಕೋವಿಡ್ ಸಂಕಷ್ಟ ಕಾಲದಲ್ಲಿ ನಾಪತ್ತೆಯಾಗಿದ್ದ ಪ್ರತಾಪಸಿಂಹ ಗ್ಯಾಸ್ ಪೈಪ್‌ಲೈನ್ ವಿಚಾರದಲ್ಲಿ ಪ್ರತ್ಯಕ್ಷರಾಗಿ, ‍ಪಾಲಿಕೆ ಸದಸ್ಯರು ಹಾಗೂ ಶಾಸಕರ ವಿರುದ್ದ ಅವಹೇಳನಕಾರಿಯಾಗಿ ಮಾತುಗಳನ್ನಾಡುತ್ತಿರುವುದು ಸರಿಯಲ್ಲ. ಕಮಿಷನ್‌ಗಾಗಿ ಇಂತಹ ಬೀದಿನಾಟಕ ಬೇಕಿತ್ತಾ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.