ADVERTISEMENT

ಮೈಸೂರು: ನಾಲ್ಕು ಹೊಸ ಬಡಾವಣೆಗಳ ನಿರ್ಮಾಣ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಜೆಟ್; ರಸ್ತೆಗಳ ನಿರ್ಮಾಣಕ್ಕೆ ಒತ್ತು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 10:14 IST
Last Updated 29 ಏಪ್ರಿಲ್ 2020, 10:14 IST
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ   

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 2020–21ನೇ ಸಾಲಿನ ಬಜೆಟ್‌ ಮಂಡನೆಯಾಗಿದ್ದು, ಮೈಸೂರು ಮತ್ತು ನಂಜನಗೂಡು ತಾಲ್ಲೂಕಿನಲ್ಲಿ ರೈತರ ಸಹಭಾಗಿತ್ವದೊಂದಿಗೆ ನಾಲ್ಕು ಹೊಸ ಬಡಾವಣೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

ಲಾಕ್‌ಡೌನ್‌ ಇದ್ದ ಕಾರಣ ಈ ಬಾರಿ ಬಜೆಟ್‌ ಸಭೆ ನಡೆಯಲಿಲ್ಲ. ಮುಡಾ ಆಯುಕ್ತ ಪಿ.ಎಸ್‌.ಕಾಂತರಾಜು ಅವರು ಬಜೆಟ್‌ ಪ್ರತಿಯನ್ನು ಎಲ್ಲ ಸದಸ್ಯರಿಗೆ ಕಳುಹಿಸಿ, ಸಮ್ಮತಿ ಪಡೆದು ಬಜೆಟ್‌ ಮಂಡಿಸಿದರು.

2020–21ನೇ ಸಾಲಿನಲ್ಲಿ ವಿವಿಧ ಮೂಲಗಳಿಂದ ₹324.50 ಕೋಟಿ ಆದಾಯ ಸಂಗ್ರಹಿಸಲು ಹಾಗೂ ₹322.91 ಕೋಟಿ ವೆಚ್ಚ ಭರಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ₹1.58 ಕೋಟಿ ಉಳಿತಾಯ ಬಜೆಟ್‌ ಮಂಡಿಸಲಾಗಿದೆ.

ADVERTISEMENT

₹289 ಕೋಟಿ ಆದಾಯ ಸಂಗ್ರಹ: 2019–20ರ ಸಾಲಿನಲ್ಲಿ ವಿವಿಧ ಮೂಲಗಳಿಂದ ₹405.87 ಕೋಟಿ ಆದಾಯ ನಿರೀಕ್ಷಿಸಲಾಗಿತ್ತು. ಆದರೆ, 2019ರ ಏಪ್ರಿಲ್‌ನಿಂದ ಡಿಸೆಂಬರ್‌ ವರೆಗೆ ₹289.54 ಕೋಟಿ ಆದಾಯ ಸಂಗ್ರಹವಾಗಿದೆ. 2020ರ ಜನವರಿಯಿಂದ ಮಾರ್ಚ್‌ವರೆಗೆ ₹ 61.30 ಕೋಟಿ ಆದಾಯ ನಿರೀಕ್ಷಿಸಿ 2019–20ರ ಸಾಲಿಗೆ ಅಂದಾಜು ಆದಾಯವನ್ನು ₹350 ಕೋಟಿಗಳಿಗೆ ಪರಿಷ್ಕರಿಸಲಾಗಿದೆ.

ನಾಲ್ಕು ಹೊಸ ಬಡಾವಣೆಗಳು: ಮೈಸೂರು ನಗರ ಹೊರವಲಯದ ಮಳಲವಾಡಿ ಮತ್ತು ಚಿಕ್ಕಹರದನಹಳ್ಳಿ ಗ್ರಾಮಗಳಲ್ಲಿ ಒಟ್ಟು 20 ಎಕರೆ 12 ಗುಂಟೆ ಪ್ರದೇಶದ ಜಮೀನಿನ ಮಾಲೀಕರು ಪ್ರಾಧಿಕಾರದ ಯೋಜನೆಗೆ ಆಸಕ್ತಿ ತೋರಿದ್ದು, ಸಹಭಾಗಿತ್ವ 50:50ರ ಅನುಪಾತದಡಿವಸತಿ ಬಡಾವಣೆ ರಚಿಸಲು ಉದ್ದೇಶಿಸಲಾಗಿದೆ.

ಮೈಸೂರು ತಾಲ್ಲೂಕಿನ ಧನಹಳ್ಳಿ ಗ್ರಾಮ ವ್ಯಾಪ್ತಿಯ 47 ಎಕರೆ ಪ್ರದೇಶ, ಮೈಸೂರು ತಾಲ್ಲೂಕಿನ ಜಯಪುರ ಹೋಬಳಿ, ದಾರಿಪುರ ಗ್ರಾಮದಲ್ಲಿ 20 ಎಕರೆ ಪ್ರದೇಶ, ನಂಜನಗೂಡು ತಾಲ್ಲೂಕಿನ ಕಸಬಾ ಹೋಬಳಿ ಕಳಲೆ ಗ್ರಾಮದಲ್ಲಿ 22 ಎಕರೆ 5 ಗುಂಟೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸಲು ನಿರ್ಧರಿಸಲಾಗಿದೆ.

ಹೊಸ ಬಡಾವಣೆಗಳಾದ ಲಾಲ್‌ಬಹದ್ದೂರ್‌ ಶಾಸ್ತ್ರಿ ನಗರ 2ನೇ ಹಂತ, ಶಾಂತವೇರಿ ಗೋಪಾಲಗೌಡ ನಗರ 2ನೇ ಹಂತ, ಸ್ವರ್ಣಜಯಂತಿ ನಗರ, ನಾಲ್ವಡಿ ಕೃಷ್ಣರಾಜ ಒಡೆಯರ್‌ ನಗರ, ಲಲಿತಾದ್ರಿನಗರ 2ನೇ ಹಂತ, ಆರ್‌.ಟಿ.ನಗರ 2ನೇ ಹಂತದ ಜಮೀನುಗಳ ಜೆಎಂಸಿ ಕಾರ್ಯ ಪೂರ್ಣಗೊಂಡಿದ್ದು, ಬಡಾವಣೆ ನಿರ್ಮಾಣ ಪ್ರಸ್ತಾವವನ್ನು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಈ ಯೋಜನೆಗಳಿಗೆ ಪ್ರಸ್ತುತ ಸಾಲಿನಲ್ಲಿ ₹10 ಕೋಟಿ ಮೀಸಲಿಡಲಾಗಿದೆ.

ಪಾರ್ಕ್‌ಗಳ ಅಭಿವೃದ್ಧಿ: ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯ ಪಾರ್ಕ್‌ ಸಂಖ್ಯೆ 15ನ್ನು ಹೈಟೆಕ್‌ ಆಗಿ ಅಭಿವೃದ್ಧಿಪಡಿಸಲು ₹50 ಲಕ್ಷ ಮತ್ತು ವಿಜಯನಗರ 3ನೇ ಹಂತ ‘ಡಿ’ ಬ್ಲಾಕ್‌ ಬಡಾವಣೆಯ ಪಾರ್ಕ್‌ ಸಂಖ್ಯೆ 4ನ್ನು ಅಭಿವೃದ್ಧಿಪಡಿಸಲು ₹30 ಲಕ್ಷ ಮೀಸಲಿಡಲಾಗಿದೆ.

ಟ್ರಕ್‌ ಟರ್ಮಿನಲ್‌: ಮೈಸೂರು– ಬೆಂಗಳೂರು ರಸ್ತೆ ಹಾಗೂ ರಿಂಗ್‌ ರಸ್ತೆ ಸೇರುವ ಜಾಗದಲ್ಲಿ ಮತ್ತು ಮೈಸೂರು– ಹುಣಸೂರು ರಸ್ತೆಯ ನಾಗವಾಲ ಜಂಕ್ಷನ್‌ನಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಿಸಲು ಉದ್ದೇಶಿಸಲಾಗಿದ್ದು, ಡಿಪಿಆರ್‌ ತಯಾರಿಸಲು ₹ 20 ಲಕ್ಷ ತೆಗೆದಿರಿಸಲಾಗಿದೆ.

ಔಟರ್‌ ರಿಂಗ್‌ ರೋಡ್‌ ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ₹5 ಕೋಟಿ, ವೃತ್ತಗಳ ಅಭಿವೃದ್ಧಿಗೆ ₹15 ಲಕ್ಷ, ವಾಣಿಜ್ಯ ಸಂಕೀರ್ಣ, ಕಟ್ಟಡಗಳ ನಿರ್ಮಾಣಕ್ಕೆ ₹70 ಲಕ್ಷ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ₹30 ಲಕ್ಷ, ವಿಜಯನಗರ ಕ್ರೀಡಾ ಸಂಕೀರ್ಣದಲ್ಲಿ ಯೋಗ ಮಂದಿರ ನಿರ್ಮಾಣಕ್ಕೆ ₹25 ಲಕ್ಷ ಕಾಯ್ದಿರಿಸಲಾಗಿದೆ.

ಮಹಾ ಯೋಜನೆಯಲ್ಲಿ ಪ್ರಸ್ತಾಪಿಸಿರುವ ರಸ್ತೆಗಳ ಪೈಕಿ ನಿರ್ಮಾಣ ವಾಗದೆ ಉಳಿದಿರುವ 20ಕ್ಕೂ ಅಧಿಕ ರಸ್ತೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುದಾನ ಮೀಸಲಿಡಲಾಗಿದೆ.

₹81 ಕೋಟಿ ಕಡಿಮೆ ಆದಾಯ

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ₹81 ಕೋಟಿಯಷ್ಟು ಕಡಿಮೆ ಆದಾಯ ನಿರೀಕ್ಷಿಸಲಾಗಿದೆ. 2019–20ರ ಸಾಲಿನಲ್ಲಿ ವಿವಿಧ ಮೂಲಗಳಿಂದ ₹405 ಕೋಟಿ ಆದಾಯ ಸಂಗ್ರಹಿಸಿ ₹403 ಕೋಟಿ ವೆಚ್ಚ ಭರಿಸಲು ಉದ್ದೇಶಿಸಲಾಗಿತ್ತು. ಆದರೆ, ಈ ಬಾರಿ ₹324 ಕೋಟಿ ಆದಾಯ ಸಂಗ್ರಹ ಉದ್ದೇಶಿಸಲಾಗಿದೆ.

ಆಸನ ಸಾಮರ್ಥ್ಯ 40 ಸಾವಿರಕ್ಕೆ ಹೆಚ್ಚಳ

ದಸರಾ ಪಂಜಿನ ಕವಾಯತು ನಡೆಯುವ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಹಾಲಿ 32 ಸಾವಿರ ಆಸನ ಸಾಮರ್ಥ್ಯವಿದ್ದು, ಅದನ್ನು 40 ಸಾವಿರಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಕಾಮಗಾರಿಯ ಅಂದಾಜು ಮೊತ್ತ ₹4.50 ಕೋಟಿ ಆಗಿದ್ದು, ಪ್ರಸ್ತುತ ಸಾಲಿನಲ್ಲಿ ₹1.50 ಕೋಟಿ ಕಾಯ್ದಿರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.