
ತಿ.ನರಸೀಪುರ: ತಾಲ್ಲೂಕಿನ ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಬಂಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಉತ್ಸವದ ಅಂಗವಾಗಿ ಗ್ರಾಮ ದೇವತೆ ತ್ರಿಪುರ ಸುಂದರಿ ಅಮ್ಮನವರಿಗೆ ಮುಂಜಾನೆ ಕಂಕಣಧಾರಿ ಅರ್ಚಕರಾದ ಎಂ. ಎಸ್. ರವಿ ಹಾಗೂ ಆಗಮಿಕರಿಂದ ವಿಶೇಷ ಅಭಿಷೇಕ ಪೂಜೆಗಳು ನಡೆದವು. ಬಳಿಕ ಅಮ್ಮನವರ ಉತ್ಸವ ಮೂರ್ತಿಯನ್ನು ರುದ್ರಾಕ್ಷಿ ಮಂಟಪದಲ್ಲಿ ಪ್ರತಿಷ್ಠಾಪಿಸಿ ದೇವಾಲಯದಿಂದ ಬಂಡಿ ಮಂಟಪದವರಿಗೆ ಮೆರವಣಿಗೆಯಲ್ಲಿ ಸಾಗಿದ ನಂತರ ಮೊದಲ ಬಂಡಿಗೆ ಕಂಕಣ ಧಾರಿ ಅರ್ಚಕರಿಂದ ಪೂಜೆ ಹಾಗೂ ತೀರ್ಥ ಸಂಪ್ರೋಕ್ಷಣೆಯ ನಂತರ ಬಂಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಮೂಗೂರು ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬಂಡಿಗಳಿಗೆ ಎತ್ತುಗಳನ್ನು ಕಟ್ಟಿ ಬಂಡಿ ಓಡಿಸಲಾಯಿತು. ರಸ್ತೆಯ ಇಕ್ಕೆಲ್ಲಗಳಲ್ಲಿ ನಿಂತ ಗ್ರಾಮಸ್ಥರು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಬಂಡಿ ಉತ್ಸವವನ್ನು ಕಣ್ತುಂಬಿಕೊಂಡರು. ಬಂಡಿ ಉತ್ಸವ ಮುಗಿದ ನಂತರ ಸಂಜೆ ರುದ್ರಾಕ್ಷಿ ಮಂಟಪದಲ್ಲಿರುವ ಅಮ್ಮನವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಬಂಡಿ ಮಂಟಪದಿಂದ ದೇವಾಲಯಕ್ಕೆ ತರಲಾಯಿತು.
ಇಂದು ಭಾನುವಾರ ತೆಪ್ಪೋತ್ಸವ ಹಾಗೂ ಸೋಮವಾರ ಅಮ್ಮನವರ ಬ್ರಹ್ಮ ರಥೋತ್ಸವ ನಡೆಯಲಿದೆ.