ADVERTISEMENT

ಕನ್ನಡ ವಿರೋಧಿಗಳಿಗೇಕೆ ಪ್ರೋತ್ಸಾಹ: 'ಮುಖ್ಯಮಂತ್ರಿ’ ಚಂದ್ರು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 3:13 IST
Last Updated 26 ಡಿಸೆಂಬರ್ 2025, 3:13 IST
ಜನಪರ ಸಾಹಿತ್ಯ ಪರಿಷತ್ತು ವತಿಯಿಂದ ಚಲನಚಿತ್ರ ನಟ ‘ಮುಖ್ಯಮಂತ್ರಿ’ ಚಂದ್ರು ಹಾಗೂ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅವರಿಗೆ ‘ಶ್ರೀಕೃಷ್ಣ ಆಲನಹಳ್ಳಿ ರಾಜ್ಯಮಟ್ಟದ ಪ್ರಶಸ್ತಿ’ಯನ್ನು ಗುರುವಾರ ಪ್ರದಾನ ಮಾಡಲಾಯಿತು
ಜನಪರ ಸಾಹಿತ್ಯ ಪರಿಷತ್ತು ವತಿಯಿಂದ ಚಲನಚಿತ್ರ ನಟ ‘ಮುಖ್ಯಮಂತ್ರಿ’ ಚಂದ್ರು ಹಾಗೂ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅವರಿಗೆ ‘ಶ್ರೀಕೃಷ್ಣ ಆಲನಹಳ್ಳಿ ರಾಜ್ಯಮಟ್ಟದ ಪ್ರಶಸ್ತಿ’ಯನ್ನು ಗುರುವಾರ ಪ್ರದಾನ ಮಾಡಲಾಯಿತು    

ಮೈಸೂರು: ‘ಕನ್ನಡ ವಿರೋಧಿಗಳಿಗೇಕೆ ಪ್ರೋತ್ಸಾಹ ನೀಡಬೇಕು?’ ಎಂದು ಚಲನಚಿತ್ರ ನಟ ‘ಮುಖ್ಯಮಂತ್ರಿ’ ಚಂದ್ರು ಪ್ರಶ್ನಿಸಿದರು.

ಮೈಸೂರು- ಗದ್ದಿಗೆ ರಸ್ತೆಯ ಆಲನಹಳ್ಳಿಯಲ್ಲಿ ಗುರುವಾರ ಜನಪರ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ, ಮನೆಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅವರೊಂದಿಗೆ ‘ಶ್ರೀಕೃಷ್ಣ ಆಲನಹಳ್ಳಿ ರಾಜ್ಯಮಟ್ಟದ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

‘ಇತ್ತೀಚಿನ ಸಿನಿಮಾಗಳಿಗೆ ಇಂಗ್ಲಿಷ್‌ನಲ್ಲಿ ಶೀರ್ಷಿಕೆ ಇಡಲಾಗುತ್ತಿದೆ. ಇದು ಸರಿಯಲ್ಲ. ನಟರು ಕನ್ನಡ ನಾಡು-ನುಡಿಗೆ ಹೋರಾಡಲಿ. ಕನ್ನಡದಲ್ಲಿ ನಾಮಫಲಕಗಳಿರುವಂತೆ ನೋಡಿಕೊಳ್ಳಬೇಕು. ಜನರ ಪ್ರೀತಿ, ವಿಶ್ವಾಸ ಗಳಿಸಿಕೊಳ್ಳಬೇಕು. ಇದಕ್ಕಾಗಿ ವರನಟ ರಾಜಕುಮಾರ್ ಅವರನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು. ಹಣಕ್ಕಿಂತಲೂ ವ್ಯಕ್ತಿತ್ವ, ನಡವಳಿಕೆ ಮುಖ್ಯ ಎಂಬುದನ್ನು ಅರಿಯಬೇಕು’ ಎಂದರು.

ADVERTISEMENT

‘ಕಲಾವಿದರು ಎಲ್ಲರೊಂದಿಗೂ ಸ್ನೇಹದಿಂದ ಇರಬೇಕು. ಸ್ಪರ್ಧೆಗಿಳಿದಂತೆ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಬಾರದು. ನಮ್ಮ ಸಿನಿಮಾ ರಂಗ ಚಿಕ್ಕದು. ಹೀಗಿರುವಾಗ ಎಲ್ಲ ಸಿನಿಮಾಗಳು ಹೆಚ್ಚು ದಿನಗಳವರೆಗೆ ಪ್ರದರ್ಶನ ಕಾಣಬೇಕು. ಆದರೆ, ಪೈಪೋಟಿಯಿಂದಾಗಿ ನಮ್ಮ ಚಿತ್ರರಂಗ ಸೊರಗುತ್ತಿದೆ’ ಎಂದು ಹೇಳಿದರು.

ಓದುವ ಅಗತ್ಯವಿದೆ: 

‘ಕನ್ನಡದ ಅನನ್ಯ ಲೇಖಕ ಶ್ರೀಕೃಷ್ಣ ಆಲನಹಳ್ಳಿ ಅವರ ಕೃತಿಗಳನ್ನು ಈಗಿನ ತಲೆಮಾರು ಓದುವ ಅಗತ್ಯವಿದೆ. ನಾನು ಅವರ ಕಾದಂಬರಿ, ಕಥೆಗಳಿಂದ ಪ್ರೇರಿತನಾಗಿದ್ದೆ’ ಎಂದು ನೆನೆದರು.

ಉದ್ಘಾಟಿಸಿದ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ‘ಆಲನಹಳ್ಳಿ ಪ್ರತಿಷ್ಠಾನ ಆರಂಭಿಸಿ ಪ್ರತಿ ವರ್ಷ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಉದ್ದೇಶವಿದೆ’ ಎಂದು ತಿಳಿಸಿದರು.

ಮೈಸೂರು ಆನಂದ್ ಹಾಸ್ಯ ಕಾರ್ಯಕ್ರಮ ನೀಡಿದರು. ವಿಧಾನಪರಿಷತ್‌ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಕನ್ನಡ ಉಪನ್ಯಾಸಕಿ ಎಂ.ಎಸ್‌. ಅನಿತಾ, ಜನಪರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಎಂ.ಮಹೇಶ ಚಿಕ್ಕಲ್ಲೂರು, ರಾಜ್ಯ ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ, ರಾಜ್ಯ ನಿರ್ದೇಶಕರಾದ ಎಂ.ಚಂದ್ರಶೇಖರ್, ವೀರಭದ್ರಸ್ವಾಮಿ ಮಾತನಾಡಿದರು.

ಶ್ರೀಕೃಷ್ಣ ಆಲನಹಳ್ಳಿ ಅವರ ಪತ್ನಿ ವಿನುತಾ, ಪುತ್ರ ಪ್ರದ್ಯುಮ್ನ, ಪುತ್ರಿ ಕೃತಿಕಾ, ಎಎಪಿ ಮುಖಂಡರಾದ ರಂಗಯ್ಯ, ಕುಲಕರ್ಣಿ, ಪದ್ಮಾ ‘ಮುಖ್ಯಮಂತ್ರಿ’ ಚಂದ್ರು, ಸಿಪಿಐಗಳಾದ ಜಗದೀಶ, ಶಶಿಕುಮಾರ್‌, ಶಿವಪ್ರಕಾಶ್‌, ಉಪನ್ಯಾಸಕ ಆಲನಹಳ್ಳಿ ಸೋಮಣ್ಣ, ಚೇತನ ವಿದ್ಯಾಸಂಸ್ಥೆ ಅಧ್ಯಕ್ಷ ರವೀಶ್‌ ಪಾಲ್ಗೊಂಡಿದ್ದರು. 

ನಟ ಸುದೀಪ್ ಅವರು ಬದ್ಧ ಯುದ್ಧಕ್ಕೆ ಸಿದ್ಧ ಎನ್ನುವ ಬದಲಿಗೆ ನೇರವಾಗಿ ಪೈರಸಿ ವಿರುದ್ಧ ಯುದ್ಧ ಎನ್ನಬೇಕಿತ್ತು
‘ಮುಖ್ಯಮಂತ್ರಿ’ ಚಂದ್ರು ಚಲನಚಿತ್ರ ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.