ಮೈಸೂರು: ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಶನಿವಾರ ಸಂಗೀತದ ಕಂಪು ಪಸರಿಸಿತ್ತು. ಖ್ಯಾತನಾಮರ ಗಾನಸುಧೆಗೆ ಕೇಳುಗರು ತಲೆದೂಗುತ್ತ ಆಸ್ವಾದಿಸಿದರು.
‘ಮೈಸೂರು ಸಂಗೀತ ಸುಗಂಧ 2025’ ಮೊದಲ ದಿನದಂದು ಪುರಂದರದಾಸರು, ಕನಕದಾಸರು, ವಿಜಯದಾಸರು, ಗೋಪಾಲದಾಸರು ಸೇರಿದಂತೆ ದಾಸ ಪರಂಪರೆಯ ವಿವಿಧ ರಚನೆಕಾರರ ಕೀರ್ತನೆಗಳು ಪ್ರಸ್ತುತಗೊಂಡವು. ದೇಶದ ಹೆಮ್ಮೆಯ ಸಂಗೀತ ಕಲಾವಿದರು ತಮ್ಮದೇ ಶೈಲಿಗಳ ಗಾಯನದ ಮೂಲಕ ನೆರೆದ ಮಂದಿಯನ್ನು ಸಮ್ಮೋಹನಗೊಳಿಸಿದರು.
ಮೊದಲ ದಿನದಂದು ಕರ್ನಾಟಕದ ಬೆಂಗಳೂರು, ಉಡುಪಿ ಸೇರಿದಂತೆ ವಿವಿಧ ಭಾಗಗಳ ಕಲಾವಿದರ ಜೊತೆಗೆ ಚೆನ್ನೈ, ವಿಜಯವಾಡ ಮೊದಲಾದ ಭಾಗಗಳ ಕಲಾವಿದರೂ ಪ್ರದರ್ಶನ ನೀಡಿದರು. ತಮ್ಮ ಸಂಗೀತ ಕಛೇರಿ ಮೂಲಕ ದಾಸ ಪರಂಪರೆಯನ್ನು ಮೆಲುಕು ಹಾಕಿದರು.
ವಿದ್ಯಾಭೂಷಣ, ಸಾಕೇತ್‌ರಾಮನ್, ವಾಣಿಸತೀಶ್, ಮಹಾಲಕ್ಷ್ಮಿ ಶೆಣೈ, ಎಚ್.ಎಸ್. ವೇಣುಗೋಪಾಲ್, ಎಸ್.ಅಶೋಕ್ ಮತ್ತು ಎಂ.ಬಿ. ಹರಿಹರನ್ ಅವರ ಗಾಯನಕ್ಕೆ ಪ್ರೇಕ್ಷಕರು ತಲೆದೂಗಿದರು.
ಚಾಲನೆ:
ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆ, ಸಂಗೀತ ನಾಟಕ ಅಕಾಡೆಮಿ ಸಹಯೋಗದಲ್ಲಿ ಆರಂಭಗೊಂಡ ಎರಡು ದಿನಗಳ ‘ಮೈಸೂರು ಸಂಗೀತ ಸುಗಂಧ 2025-ದಾಸ ಸಂಗೀತ ಪರಂಪರೆ ಶ್ರೀಮಂತಿಕೆಯ ಆಚರಣೆ ಸಮಾರಂಭಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
‘ಭಾರತೀಯ ಸಂಗೀತ ಲೋಕದಲ್ಲಿ ದಾಸ ಪರಂಪರೆಗೆ ವಿಶೇಷವಾದ ಸ್ಥಾನವಿದೆ. ಅದರಲ್ಲೂ ಕರ್ನಾಟಕ ಸಂಗೀತ ದೇಶದಾದ್ಯಂತ ಮನೆಮಾತಾಗಿದೆ. ಈ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರವಾದದ್ದು’ ಎಂದು ಯದುವೀರ್ ಬಣ್ಣಿಸಿದರು.
‘ದಾಸ ಪರಂಪರೆ ಬಗ್ಗೆ ಮುಂದಿನ ಪೀಳಿಗೆ ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ ಮೈಸೂರು ಸಂಗೀತ ಸುಗಂಧ ಎಂಬ ವಿನೂತನ ಕಾರ್ಯಕ್ರಮಕ್ಕೆ ಕಳೆದ ವರ್ಷ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಿದ್ದರು. ಇದು ಎರಡನೇ ಆವೃತ್ತಿ. ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳು ದೇಶದ ಉದ್ದಗಲಕ್ಕೂ ದೊಡ್ಡ ಮಟ್ಟದಲ್ಲಿ ನಡೆಯಲಿ’ ಎಂದು ಆಶಿಸಿದರು.
‘ಮೈಸೂರಿನ ಗುರುತು ಸಂಗೀತದಲ್ಲೇ ಅಡಗಿದೆ. ಸಾಂಸ್ಕೃತಿಕವಾಗಿಯೂ ಈ ನಗರ ಶ್ರೀಮಂತವಾಗಿದೆ. ಅಯೋಧ್ಯೆಯಲ್ಲಿ ತ್ಯಾಗರಾಜ, ಪುರಂದರದಾಸರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಸಂಗೀತ ಮಾಧ್ಯಮದ ಮೂಲಕ ಭಕ್ತಿ ಮಾರ್ಗವನ್ನು ತೋರಿಸಿದ್ದ ಈ ಮಹನೀಯರಿಗೆ ಆ ಮೂಲಕ ನಮನ ಸಲ್ಲಿಸಲಾಗಿದೆ’ ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ, ಖ್ಯಾತ ವಯೋಲಿನ್ ವಾದಕ ಮೈಸೂರು ಮಂಜುನಾಥ್, ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಕಾರ್ಯದರ್ಶಿ ವಿದ್ಯಾವತಿ, ರಾಜ್ಯ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಕೆ.ವಿ. ತ್ರಿಲೋಕ್ ಚಂದ್ರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.