ADVERTISEMENT

ದಸರಾ ಕುಸ್ತಿ ನಾಳೆಯಿಂದ: ಸಾಕ್ಷಿ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 15:29 IST
Last Updated 24 ಸೆಪ್ಟೆಂಬರ್ 2022, 15:29 IST
ದಸರಾ ಕುಸ್ತಿ ಟೂರ್ನಿಯ ಪ್ರಚಾರ ಸಾಮಗ್ರಿಯನ್ನು ಉಪ ಸಮಿತಿಯ ಪದಾಧಿಕಾರಿಗಳು ಶನಿವಾರ ಬಿಡುಗಡೆ ಮಾಡಿದರು
ದಸರಾ ಕುಸ್ತಿ ಟೂರ್ನಿಯ ಪ್ರಚಾರ ಸಾಮಗ್ರಿಯನ್ನು ಉಪ ಸಮಿತಿಯ ಪದಾಧಿಕಾರಿಗಳು ಶನಿವಾರ ಬಿಡುಗಡೆ ಮಾಡಿದರು   

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಇಲ್ಲಿನ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಮೈದಾನದಲ್ಲಿ ಸೆ.26ರಿಂದ ಅ.2ರವರೆಗೆ ಕುಸ್ತಿ ಪಂದ್ಯಾವಳಿ ನಡೆಯಲಿದೆ.

‘ದಸರಾ ಕಂಠೀರವ, ದಸರಾ ಕೇಸರಿ, ದಸರಾ ಕಿಶೋರಿ, ದಸರಾ ಕುಮಾರ, ದಸರಾ ಕಿಶೋರ ಪ್ರಶಸ್ತಿಗಳಿಗೆ ಪಾಯಿಂಟ್ ಕುಸ್ತಿಗಳನ್ನು ನಡೆಸಲಾಗುತ್ತದೆ’ ಎಂದು ದಸರಾ ಕುಸ್ತಿ ಉಪ ಸಮಿತಿಯ ಅಧ್ಯಕ್ಷ ಕೆ.ದೇವರಾಜ್ ಮತ್ತು ಉಪ ವಿಶೇಷಾಧಿಕಾರಿ ಬಿ.ಎನ್.ನಂದಿನಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

‘ಸೆ.26ರಂದು ಮಧ್ಯಾಹ್ನ 3.30ಕ್ಕೆ ಉದ್ಘಾಟನೆಗೊಳ್ಳಲಿದೆ. ಈಗಾಗಲೇ ಜೋಡಿ ಕಟ್ಟುವ ಕಾರ್ಯ ಮುಗಿದಿದೆ. ವಿಜೇತರಿಗೆ, 57 ಕೆ.ಜಿ.ಯಿಂದ 65 ಕೆ.ಜಿ.ವರೆಗೆ ‘ದಸರಾ ಕಿಶೋರ್’, 86 ಕೆ.ಜಿ.ವರೆಗೆ ‘ದಸರಾ ಕೇಸರಿ’, 86 ಕೆ.ಜಿ. ಮೇಲಿನವರಿಗೆ ‘ದಸರಾ ಕಂಠೀರವ’, 57 ಕೆ.ಜಿ.ಯಿಂದ 62 ಕೆ.ಜಿ.ವರೆಗೆ ಮಹಿಳೆಯರಿಗೆ ‘ದಸರಾ ಕಿಶೋರಿ’ ನೀಡಲಾಗುತ್ತದೆ. ‘ಮೈಸೂರು ದಸರಾ ಕುಮಾರ್’ ಪ್ರಶಸ್ತಿಯನ್ನು ಮೈಸೂರು ವಿಭಾಗ ಮಟ್ಟದ 74 ಕೆ.ಜಿ. ಮೇಲಿನ ಪಂದ್ಯದಲ್ಲಿ ವಿಜೇತರಿಗೆ ಕೊಡಲಾಗುತ್ತದೆ’ ಎಂದರು.

ADVERTISEMENT

‘ಉತ್ತಮ ನಾಡ ಕುಸ್ತಿ ಪಟುಗಳಿಗೆ ‘ಮೇಯರ್ ಕಪ್’ (ನಗರದವರು), ‘ಸಾಹುಕಾರ್ ಚನ್ನಯ್ಯ ಕಪ್’ (ರಾಜ್ಯದ) ಹಾಗೂ ‘ಮೈಸೂರು ಮಹಾರಾಜ ಒಡೆಯರ್ ಕಪ್‌’ (ಮೈಸೂರು ಗ್ರಾಮಾಂತರ) ಗಳನ್ನು ನೀಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ವಿಶೇಷ ಅಗತ್ಯವುಳ್ಳವರಿಗೂ ಪಂಜ ಕುಸ್ತಿ!:

‘ಸೆ.29ರಂದು ಕರ್ನಾಟಕ ರಾಜ್ಯ ಪಂಜ ಕುಸ್ತಿ ಸಂಘದಿಂದ 7ನೇ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ, 4ನೇ ವಿಶೇಷ ಅಗತ್ಯವುಳ್ಳವರ ಪಂಜ ಕುಸ್ತಿ ಟೂರ್ನಿ ನಡೆಯಲಿದೆ. ವಿಜೇತ ಮಹಿಳಾ ಪಂಜ ಕುಸ್ತಿ ಪಟುವಿಗೆ ‘ಮೈಸೂರು ದಸರಾ ಕುಮಾರಿ’ ಪ್ರಶಸ್ತಿ, ವಿಜೇತ ಪುರುಷ ಕುಸ್ತಿಪಟುವಿಗೆ ‘ಮೈಸೂರು ದಸರಾ ಶ್ರೀ’, ವಿಶೇಷಅಗತ್ಯವುಳ್ಳ ಮಹಿಳಾ ಪಂಜ ಕುಸ್ತಿ ಪಟುವಿಗೆ ‘ದಸರಾ ನವಚೇತನ ತಾರೆ’ ಪ್ರಶಸ್ತಿ, ವಿಶೇಷ ಅಗತ್ಯವುಳ್ಳ ಪುರುಷ ಪಂಜ ಕುಸ್ತಿಪಟುವಿಗೆ ‘ವಿಶೇಷ ಚೇತನ–2022’ ಪ್ರಶಸ್ತಿಯನ್ನು ಕೊಡಲಾಗುವುದು’ ಎಂದು ಹೇಳಿದರು.

‘ಮೈಸೂರು ವಿಭಾಗ ಮಟ್ಟದ ಕುಸ್ತಿ ಟೂರ್ನಿಯಲ್ಲಿ ‘ದಸರಾ ಕುಮಾರ’ ಪ್ರಶಸ್ತಿ, ಅರ್ಧ ಕೆ.ಜಿ. ಬೆಳ್ಳಿ ಗದೆ ನೀಡಲಾಗುತ್ತದೆ’ಎಂದರು.

ನಾಡಕುಸ್ತಿ:

‘ಸೆ.26ರಂದು ನಾಡ ಕುಸ್ತಿ ಟೂರ್ನಿ ನಡೆಯಲಿದೆ. ಕೊಲ್ಲಾಪುರದ ಸಿದ್ದೇಶ್ವರದ ಮೌಲಿ ಜಮದಾಳೆ–ಹರಿಯಾಣದ ವಿಕಾಸ ಕಾಳ (1 ಗಂಟೆ ಮಾರ್ಫಿಟ್ ಕುಸ್ತಿ), ಸುನೀಲ್ ಪಡತಾರೆ–ಅಭಿಮನ್ಯು ನಡುವೆ (30 ನಿಮಿಷ) ನಾಡ ಕುಸ್ತಿಯನ್ನು ಆಯೋಜಿಸಲಾಗಿದೆ. ಖ್ಯಾತ ಕುಸ್ತಿ ಪಟು ಸಾಕ್ಷಿ ಮಲ್ಲಿಕ್ ಅವರನ್ನು ಸೆ.29ರಂದು ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ. ಅ.2ರಂದು ಸಮಾರೋ‍ಪ ಹಾಗೂ ಅಂತಿಮ ಕುಸ್ತಿ ಪಂದ್ಯಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.

ಉಪಾಧ್ಯಕ್ಷ ವೇದರಾಜ್, ಮಹೇಶ್‌ರಾಜೇ ಅರಸ್, ಕಾರ್ಯದರ್ಶಿ ಎಸ್.ಜೆ.ಹರ್ಷವರ್ಧನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.