ADVERTISEMENT

ಮೈಸೂರು: ಎಪಿಎಂಸಿ ಪ್ರವೇಶಕ್ಕೆ ಶುಲ್ಕ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 15:03 IST
Last Updated 8 ಆಗಸ್ಟ್ 2022, 15:03 IST
   

ಮೈಸೂರು: ಇಲ್ಲಿನ ನಂಜನಗೂಡು ರಸ್ತೆಯ ಬಂಡೀಪಾಳ್ಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಲ್ಲಿ ‘ಕೃಷಿ ಉತ್ಪನ್ನಗಳನ್ನು ಹೊರತುಪಡಿಸಿದ ಸರಕು ವಾಹನ’ಗಳ ಪ್ರವೇಶಕ್ಕೆ ಶುಲ್ಕ ನಿಗದಿಪಡಿಸಲಾಗಿದೆ. ಇದು, ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ ಮತ್ತು ಬಳಕೆದಾರರ ಆಕ್ಷೇ‍ಪಕ್ಕೆ ಕಾರಣವಾಗಿದೆ.

ಲಾರಿ, ಭಾರಿ ಸರಕು ಸಾಗಣೆ (10 ಚಕ್ರಗಳಿಗಿಂತ ಜಾಸ್ತಿ) ವಾಹನಗಳಿಗೆ ₹ 400, 6ರಿಂದ 10 ಚಕ್ರಗಳ ಲಾರಿಗಳಿಗೆ ₹ 300, ಟೆಂಪೊಗೆ ₹ 200, ಟಾಟಾ ಮೊಬೈಲ್‌ (‍ಪ್ರತಿ ಲೋಡ್‌ಗೆ) ₹ 150 ಹಾಗೂ ಆಟೊರಿಕ್ಷಾ (ಪ್ರತಿ ಲೋಡ್‌ಗೆ) ₹ 75 ನಿಗದಿಪಡಿಸಲಾಗಿದೆ.

ಈ ಕ್ರಮವನ್ನು ವಿರೋಧಿಸಿ ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದವರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ADVERTISEMENT

‘ರಾಜ್ಯದ ಯಾವುದೇ ಜಿಲ್ಲೆಗಳಲ್ಲೂ ಎಪಿಎಂಸಿ ಪ್ರವೇಶಕ್ಕೆ ಶುಲ್ಕ ವಿಧಿಸುತ್ತಿಲ್ಲ. ಆದರೆ, ಮೈಸೂರು ನಗರದ ಎಪಿಎಂಸಿಯಲ್ಲಿ ಮಾತ್ರ ಹೊಸ ಕಾನೂನು ಜಾರಿ ಮಾಡಿ ಸುಂಕ ವಸೂಲಿಗೆ ಮುಂದಾಗಿರುವುದು ಸರಿಯಲ್ಲ. ಅವೈಜ್ಞಾನಿಕವಾದ ಈ ನಿರ್ಧಾರಕ್ಕೆ ಲಾರಿ ಮಾಲೀಕರ ವಿರೋಧವಿದೆ’ ಎಂದು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಕೋದಂಡರಾಂ ತಿಳಿಸಿದ್ದಾರೆ.

‘ನಾವು ಏರುತ್ತಿರುವ ಇಂಧನ ದರ, ಟೈರ್‌ಗಳ ಬೆಲೆ, ಟೋಲ್‌ ಹೆಚ್ಚಳ ಮೊದಲಾದ ಹೊರೆಗಳನ್ನು ತಾಳಲಾರದೆ ಏದುಸಿರು ಬಿಡುತ್ತಿದ್ದೇವೆ. ಮಾಲೀಕರು ತಮ್ಮ ಬಳಿ ಇರುವ ಎಲ್ಲ ಸ್ವತ್ತುಗಳನ್ನೂ ಕಳೆದುಕೊಂಡು ಲಾರಿ ಉದ್ಯಮವನ್ನು ನಡೆಸುವ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭದಲ್ಲಿ ಪ್ರವೇಶ ಶುಲ್ಕ ವಸೂಲಾತಿ ಕ್ರಮವು ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಹೇಳಿದ್ದಾರೆ.

‘ಲಾರಿ ಉದ್ಯಮವನ್ನು ಉಳಿಸುವ ನಿಟ್ಟಿನಲ್ಲಿ, ಪ್ರವೇಶ ಶುಲ್ಕ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.