ADVERTISEMENT

Mysore Dasara: ಕಣ್ಮನ ಸೆಳೆಯುವ ರಾಷ್ಟ್ರಪತಿ ಭವನ!

ಸೇವಂತಿ, ಗುಲಾಬಿಯಲ್ಲಿ ಅರಳಿದ ಕಲಾಕೃತಿಗಳು: ಪುನೀತ್‌, ಡಾ.ರಾಜ್‌ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 10:26 IST
Last Updated 26 ಸೆಪ್ಟೆಂಬರ್ 2022, 10:26 IST
ಮೈಸೂರಿನ ಕುಪ್ಪಣ್ಣ ಉದ್ಯಾನದಲ್ಲಿ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ನಿರ್ಮಿಸಲಾಗಿರುವ ರಾಷ್ಟ್ರಪತಿ ಭವನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ವೀಕ್ಷಿಸಿದರು. ಮಿರ್ಲೆ ಶ್ರೀನಿವಾಸಗೌಡ, ಶಿವಕುಮಾರ್‌, ರೂಪಾ, ಶಿವಕುಮಾರ್‌, ಎಲ್‌.ನಾಗೇಂದ್ರ ಇದ್ದರು
ಮೈಸೂರಿನ ಕುಪ್ಪಣ್ಣ ಉದ್ಯಾನದಲ್ಲಿ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ನಿರ್ಮಿಸಲಾಗಿರುವ ರಾಷ್ಟ್ರಪತಿ ಭವನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ವೀಕ್ಷಿಸಿದರು. ಮಿರ್ಲೆ ಶ್ರೀನಿವಾಸಗೌಡ, ಶಿವಕುಮಾರ್‌, ರೂಪಾ, ಶಿವಕುಮಾರ್‌, ಎಲ್‌.ನಾಗೇಂದ್ರ ಇದ್ದರು   

ಮೈಸೂರು: ಕುಪ್ಪಣ್ಣ ಉದ್ಯಾನದ ಗಾಜಿನ ಮನೆಯಲ್ಲಿ 3.5 ಲಕ್ಷ ಗುಲಾಬಿ, ಸೇವಂತಿ ಹೂಗಳಲ್ಲಿ ರಾಷ್ಟ್ರಪತಿ ಭವನವು ಅರಳಿ ನಿಂತಿದ್ದು, ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಆಗಮಿಸಿದ್ದ ಹಿನ್ನೆಲೆಯಲ್ಲಿ ತೋಟಗಾರಿಕಾ ಇಲಾಖೆಯು 50 ಅಡಿ ಅಗಲ x 30 ಅಡಿ ಉದ್ದ x 27 ಅಡಿ ಎತ್ತರದ ಪ್ರತಿಕೃತಿಯನ್ನು ದಸರಾ ಫಲಪುಷ್ಪ ಪ್ರದರ್ಶನದಲ್ಲಿ ನಿರ್ಮಿಸಿರುವುದು ಕಣ್ಮನ ಸೆಳೆಯುತ್ತಿದೆ.

‘50 ಕಾರ್ಮಿಕರ ಪರಿಶ್ರಮದಿಂದ ಮೂರು ದಿನಗಳಲ್ಲಿ ಕಲಾಕೃತಿ ನಿರ್ಮಿಸಲಾಗಿದೆ. 2 ಲಕ್ಷ ಕೆಂಗುಲಾಬಿ, 50 ಬಿಳಿ ಗುಲಾಬಿ ಹಾಗೂ 1 ಲಕ್ಷ ಸೇವಂತಿಗೆ ಹೂಗಳನ್ನು ಬಳಸಲಾಗಿದ್ದು, ಗುಣಮಟ್ಟದ ಹೂಗಳನ್ನು ರೈತರಿಂದಲೇ ನೇರ ಖರೀದಿಸಲಾಗಿದೆ’ ಎಂದು ಕಲಾಕೃತಿಯನ್ನು ರೂ‍ಪಿಸಿದ ಸಂಧ್ಯಾ ಯಾದವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ರಾಷ್ಟ್ರಪತಿ ಭವನದೊಂದಿಗೆ ವರನಟರಾಜ್‌ಕುಮಾರ್‌, ಪುನೀತ್‌ ರಾಜ್‌ ಕುಮಾರ್ ಶಿಲ್ಪಗಳ ಜೊತೆ ಗಾಜನೂರಿನ ಮನೆಯನ್ನು ನಿರ್ಮಿಸಿರುವುದು ವಿಶೇಷ. ಗಾಜಿನ ಮನೆ ಪ್ರವೇಶ ಪಥದಲ್ಲಿ ಮುಸುಕಿನ ಜೋಳದ ಹಸಿರು ಚಪ್ಪರ ನಿರ್ಮಿಸಲಾಗಿದ್ದು, ತಂಪೆರೆಯುತ್ತಿದೆ.ಅದರೊಂದಿಗೆ 50 ಸಾವಿರ ಹೂ ಕುಂಡಗಳು ಉದ್ಯಾನದಲ್ಲಿವೆ.

ಮಕ್ಕಳ ಆಕರ್ಷಿಸುವ ‘ಹನಿ ಬೀ’:
ಮಕ್ಕಳನ್ನು ಆಕರ್ಷಿಸುವ ‘ಹನಿ ಬೀ’ ಕಾರ್ಟೂನ್‌ ಲೋಕವು ಅಂಗಳದಲ್ಲಿ ಅರಳಿದೆ. 7 ಅಡಿ ಎತ್ತರದ ‘ಹನಿ ಬೀ’ ಜೊತೆಗೆ ಸೇಬು, ಮಾವು, ಸ್ಟ್ರಾಬೆರಿ ಪಾತ್ರಗಳು ಇವೆ. ಹಳದಿ, ಕೆಂಪು, ಹಸಿರು ದಪ್ಪ ಮೆಣಸಿನಕಾಯಿಯಿಂದ (ಕ್ಯಾಪ್ಸಿಕಂ) ನಿರ್ಮಿಸಲಾದ ಮನೆಯೂ ಕಣ್ಮನ ಸೆಳೆಯುತ್ತದೆ.

ಶ್ವೇತ ವರ್ಣದ ನಂದಿ, ಗಣೇಶ, ಏರೋಪ್ಲೇನ್‌ ಚಿಟ್ಟೆ, ಮತ್ಸಲೋಕದ ನಕ್ಷತ್ರ ಮೀನು, ಹಸಿರು ಡಾಲ್ಫಿನ್‌ ಜೋಡಿ, ಕಪ್ಪೆಚಿಪ್ಪಿನ ಮುತ್ತನ್ನು ಸೇವಂತಿಗೆ, ಗುಲಾಬಿ ಹೂಗಳಿಂದ ಅಲಂಕರಿಸಲಾಗಿದೆ.ಸಂಗೀತ ನೃತ್ಯ ಕಾರಂಜಿ ಹಾಗೂ ಜಿರಾಫೆ ಕಲಾಕೃತಿಯು ಗಮನ ಸೆಳೆಯುತ್ತಿದೆ.

ಮನರಂಜನಾ ಉದ್ಯಾನ, ಆಹಾರ ಮಳಿಗೆ:
ರಾಜ್ಯದ ವಿವಿಧ ಭಾಗದ ತಿನಿಸಿನ ಸವಿಯನ್ನೂ ಫಲಪುಷ್ಪ ಪ್ರದರ್ಶನದಲ್ಲಿ ಸವಿಯಬಹುದಾಗಿದ್ದು, 50ಕ್ಕೂ ಹೆಚ್ಚು ಮಳಿಗೆಗಳು ಇವೆ. ಅವುಗಳೊಂದಿಗೆ ಮನರಂಜನಾ ಉದ್ಯಾನವೂ ಇದೆ. ಮಕ್ಕಳು ಹಾಗೂ ವಯಸ್ಕರಿಗೆ ತೂಗುವ ತೊಟ್ಟಿಲು, ದೋಣಿ, ಹೆಲಿಕಾಪ್ಟರ್‌ ಸೇರಿದಂತೆ ಆಟಿಕೆಗಳು ಇಲ್ಲಿವೆ.

5ರವರೆಗೆ ಪ್ರದರ್ಶನ:
ಫಲಪುಷ್ಪ ಪ್ರದರ್ಶನವು ಅ.5ರವರೆಗೆ ಇರಲಿದ್ದು, ಸೆ.30ರಂದು ಹೂಗಳನ್ನು ಮತ್ತೆ ಬದಲಿಸಲಾಗುತ್ತದೆ.ಪ್ರವೇಶ ದರ ವಯಸ್ಕರಿಗೆ ₹ 30 ಹಾಗೂ ಮಕ್ಕಳಿಗೆ ₹ 20 ಇದೆ.

ಸಚಿವ ಸೋಮಶೇಖರ್‌ ಚಾಲನೆ:
ದಸರಾ ಫಲಪುಷ್ಪ ಪ್ರದರ್ಶನ ಉಪಸಮಿತಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಉದ್ಘಾಟಿಸಿದರು.

‘ರಾಷ್ಟ್ರಪತಿ ಭವನ ಸೇರಿದಂತೆ ವಿವಿಧ ಹೂವಿನ ಕಲಾಕೃತಿಗಳು ಆಕರ್ಷಣೀಯವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಕುಪ್ಪಣ್ಣ ಉದ್ಯಾನವನ್ನು ಜೀವವೈವಿಧ್ಯದ ಉದ್ಯಾನವಾಗಿ ರೂಪಿಸಲು ದಸರೆ ನಂತರ ನಿರ್ಧರಿಸಲಾಗುವುದು’ ಎಂದರು.

ಶಾಸಕ ಎಲ್‌.ನಾಗೇಂದ್ರ, ಮೇಯರ್‌ ಶಿವಕುಮಾರ್, ವಸ್ತುಪ್ರದರ್ಶನ‍ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್‌, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಲ್ಲಾ‍ಪಂಚಾಯಿತಿ ಸಿಇಒ ಬಿ.ಆರ್‌.ಪೂರ್ಣಿಮಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರುದ್ರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.