ಮೈಸೂರು: ‘ಹೇಮರೆಡ್ಡಿ ಮಲ್ಲಮ್ಮ ಅವರ ಆದರ್ಶಗಳು ನಮಗೆ ದಾರಿದೀಪವಾಗಿವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರಲ್ಲಿ ಆಯೋಜಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
‘ಮಲ್ಲಮ್ಮ ಅವರ ವ್ಯಕ್ತಿತ್ವ ಎಂದಿಗೂ ಭಾರತೀಯ ಮಹಿಳೆಯರಿಗೆ ಆದರ್ಶವಾಗಿ ನಿಲ್ಲುತ್ತದೆ. ನಡತೆಯ ಮೂಲಕ ಕುಟುಂಬದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದವರು. ಕನ್ನಡದಲ್ಲಿ ಸರ್ವಜ್ಞ ಹೇಗೋ ಹಾಗೆಯೇ ತೆಲುಗಿನಲ್ಲಿ ವೇಮನನನ್ನು ಗುರುತಿಸಲಾಗುತ್ತದೆ. ಅಂತಹ ಒಬ್ಬ ಮಹಾನ್ ವ್ಯಕ್ತಿಯನ್ನೇ ಸೃಷ್ಟಿ ಮಾಡಿದವರು ಮಲ್ಲಮ್ಮನವರು’ ಎಂದು ಸ್ಮರಿಸಿದರು.
‘ಇಡೀ ಮಾನವ ಸಮುದಾಯಕ್ಕೆ ಆದರ್ಶ ಪ್ರಿಯವಾದಂತಹ ಜೀವನ ಅವರು ಕಟ್ಟಿಕೊಟ್ಟಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಹುಣಸೂರು ತಾಲ್ಲೂಕಿನ ಗಾವಡೆಗೆರೆಯ ಗುರುಲಿಂಗ ಜಂಗಮ ದೇವರ ಮಠದ ನಟರಾಜ ಸ್ವಾಮೀಜಿ, ‘ಜೀವನದಲ್ಲಿ ಹೇಳಿಕೊಳ್ಳಲೂ ಆಗದಷ್ಟು ಕಷ್ಟಗಳನ್ನು ಅನುಭವಿಸಿದರೂ ಅವುಗಳನ್ನು ಸಂತೋಷದಿಂದ ಸ್ವೀಕರಿಸಿ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಿದರು ಮಲ್ಲಮ್ಮ’ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜು ಪಿ.ಚಿಕ್ಕಹಳ್ಳಿ (ದೇಚಿ) ಮಾತನಾಡಿ, ‘ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಂಡು ಆ ಪರಂಪರೆಯಲ್ಲಿ ನಡೆದು ಬಂದವರು ಮಲ್ಲಮ್ಮ. ಅವರು ಮೊದಲು ಸಂಸಾರವನ್ನು ತಿದ್ದಿ ಇಡೀ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಪವಾಡ ಮಲ್ಲಮ್ಮ, ಬೆಂಕಿ ಮಲಮ್ಮ ಎಂಬಿತ್ಯಾದಿ ಹೆಸರಿನಿಂದ ಅವರನ್ನು ಕರೆಯಲಾಗುತ್ತದೆ’ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಬಳಗದ ಉಪಾಧ್ಯಕ್ಷ ಶಿವಲಿಂಗ ಸ್ವಾಮಿ, ಮಹಾಂತೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.