ಮೈಸೂರು ತಾಲ್ಲೂಕಿನ ಕಳಲವಾಡಿ ಗ್ರಾಮದ ಬಳಿ ‘ಎಣ್ಣೆಹೊಳೆ’ಗೆ ನಿರ್ಮಿಸಲಾದ ರಾಯನಕೆರೆಯ ನೋಟ
ಪ್ರಜಾವಾಣಿ ಚಿತ್ರ: ಅನೂಪ್ ರಾಘ. ಟಿ.
ಮೈಸೂರು: ಸಾಂಸ್ಕೃತಿಕ ನಗರಿಯಲ್ಲೊಂದು ನದಿಯಿತ್ತೇ ಎಂದು ಜಲತಜ್ಞರನ್ನು ನೀವೇನಾದರೂ ಕೇಳಿದರೆ ಹೌದೆಂಬ ಉತ್ತರ ಬರುತ್ತದೆ.
ಕುಕ್ಕರಹಳ್ಳಿ–ಮಳಲವಾಡಿ ಕೆರೆ, ಬೋಗಾದಿ– ಲಿಂಗಾಂಬುಧಿ ಕೆರೆ, ನಾಗವಾಲ– ಹುಯಿಲಾಳು–ಮಾದಗಳ್ಳಿ–ಮೂಗನಹುಂಡಿ ಕೆರೆ, ಕಾರಂಜಿ ಕೆರೆ– ದೊಡ್ಡಕೆರೆ– ದಳವಾಯಿ ಕೆರೆ ಜಾಲಗಳಲ್ಲಿ ತಣ್ಣಗೆ, ಮಂದಗಾಮಿಯಾಗಿ ಹರಿಯುತ್ತಿರುವ ನದಿಯೇ ‘ಎಣ್ಣೆಹೊಳೆ’!
ನಗರದ ದಕ್ಷಿಣ ಭಾಗದಲ್ಲಿರುವ ಸಿಂಧುವಳ್ಳಿ– ಕಳಲವಾಡಿ ಗ್ರಾಮಗಳ ಬಳಿ ಈ ‘ಎಣ್ಣೆಹೊಳೆ’ಗೆ ಅಡ್ಡಲಾಗಿ ಬಹು ಎತ್ತರದ ಒಡ್ಡು ನಿರ್ಮಿಸಲಾಗಿದೆ. ಅದರಿಂದ ಉಂಟಾಗಿರುವ ‘ರಾಯನ ಕೆರೆ’ ಎಂಬ ಜಲನಿಧಿಯನ್ನು ಕಣ್ತುಂಬಿಕೊಳ್ಳಬಹುದು. ಕೆರೆಯ ಏರಿಯಿಂದ ಪಶ್ಚಿಮದ ಕಡೆ ಕಣ್ಣು ಹಾಯಿಸಿದರೆ ದಿಗಂತ ಕಾಣುವುದೇ ಇಲ್ಲ.
ಕೆರೆಯ ಒಂದು ದಿಕ್ಕಿನಲ್ಲಿ ಹಾದು ಹೋದರೆ ಬಳಸಿ ಬರಲು 8 ಕಿ.ಮೀ ನಡೆಯಬೇಕಾಗುತ್ತದೆ. ಅಂದರೆ ಕುಕ್ಕರಹಳ್ಳಿ ಕೆರೆಯ ಎರಡೂವರೆ ಪಟ್ಟು ದೊಡ್ಡದಾಗಿದೆ.
ಮೈಸೂರನ್ನು ‘ವೆನಿಸ್’, ‘ಜಿನಿವಾ’ ಮಾಡುವ ಅವಕಾಶ ಏನಾದರೂ ಇದೆಯೇ ಎಂಬ ಕನಸೇನಾದರೂ ಎಂಜಿನಿಯರ್‌ಗಳಿಗೆ ಬಿದ್ದರೆ, ಖಂಡಿತ ಈ ನದಿಯತ್ತ ಬಂದು ನೋಡಬಹುದು!
45 ಕಿ.ಮೀ ಉದ್ದದ ಹೊಳೆ: ಕೂರ್ಗಳ್ಳಿ, ಇಲವಾಲದ ಎತ್ತರ ಪ್ರದೇಶದಲ್ಲಿ ಹುಟ್ಟುವ ಹೊಳೆಯ ಹಾದಿ ಬರೊಬ್ಬರಿ 45 ಕಿ.ಮೀ. ಇದು ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದ ಬಳಿ ಕಬಿನಿ ನದಿ ಸೇರುತ್ತದೆ. ನಂಜನಗೂಡಿಗೆ ಹೋಗುವವರು ಕಡಕೊಳಕ್ಕೂ ಮೊದಲು ಈ ಹೊಳೆಗೆ ಸೇತುವೆ ಕಟ್ಟಿರುವುದನ್ನು ನೋಡಬಹುದು.
ಕೆರೆಯ ಉತ್ತರಕ್ಕಿರುವ ರಾಯನಕೆರೆ ಗ್ರಾಮದ ಬಳಿ ತ್ಯಾಜ್ಯ ನೀರು ಸಂಸ್ಕರಣ ಘಟಕವಿದೆ. ಮೈಸೂರು ನಗರದ ದಕ್ಷಿಣ ಹಾಗೂ ಪಶ್ಚಿಮ ಭಾಗದ ಚರಂಡಿನೀರು ಕಪ್ಪು ಬಣ್ಣದಲ್ಲಿ ಇಲ್ಲಿಗೆ ಹರಿಯುತ್ತಿದೆ. ಕಾಲುವೆಗಳಿಂದ ಕೆರೆ ನೀರನ್ನು ತೆಂಗಿನ ತೋಟಗಳು, ಭತ್ತದ ಗದ್ದೆಗಳಿಗೆ ಹರಿಸಲಾಗುತ್ತಿದೆ. ಕೆರೆಯ ವಾಯುವ್ಯ ಭಾಗದಲ್ಲಿ ಒತ್ತುವರಿ ನಡೆದಿದೆ.
ಮೈಸೂರಿನಲ್ಲಿ ಸುಮಾರು 45 ಕಿ.ಮೀ ಹರಿಯುವ ‘ಎಣ್ಣೆಹೊಳೆ’ ರಕ್ಷಣೆಯು ಕೆರೆಗಳ ಜಾಲದ ಸಂರಕ್ಷಣೆಯೇ ಆಗಿದೆಯು.ಎನ್.ರವಿಕುಮಾರ್, ಜಲತಜ್ಞ
ವೃಷಭಾವತಿ ಆಗದಿರಲಿ..
ಅವೈಜ್ಞಾನಿಕವಾಗಿ ಪರಿಸರ ಕೇಂದ್ರಿತ ಅಭಿವೃದ್ಧಿ ಇಲ್ಲದ್ದರಿಂದಲೇ ಬೆಂಗಳೂರಿನ ‘ವೃಷಭಾವತಿ’ ಎಂಬ ಜೀವನದಿ ಚರಂಡಿಯಾಗಿ ಬದಲಾಗಿರುವುದು ಕಣ್ಣ ಮುಂದಿರುವ ಸತ್ಯ. ಎಣ್ಣೆಹೊಳೆಗೂ ಇದೇ ಪರಿಸ್ಥಿತಿ ಬರಲಿದೆ. ಇದು ನಿಜವಾದರೆ ಕಡಕೊಳ ಗ್ರಾಮವು ‘ಕೆಂಗೇರಿ’ ಮೋರಿ ಆಗುತ್ತದೆ!
‘ದಿಶಾಂಕ್’ನಲ್ಲಿಲ್ಲ ಸರ್ವೆ ಸಂಖ್ಯೆ
ದಿಶಾಂಕ್ ಆ್ಯಪ್‌ನಲ್ಲಿ ಕೆರೆಯ ಸರ್ವೆ ಸಂಖ್ಯೆಯೇ ಮಾಯವಾಗಿದೆ. ನೂರಾರು ಎಕರೆ ವಿಸ್ತೀರ್ಣದ ಕೆರೆಯನ್ನು ನೂರಾರು ರೈತರಿಗೆ ಹಂಚಿಕೆ ಮಾಡಿರುವಂತೆ ತೋರಿರುವುದು ಆತಂಕಕ್ಕೆ ಎಡೆ ಮಾಡಿಕೊಡುತ್ತದೆ. ಇದನ್ನು ಜಿಲ್ಲಾಡಳಿತ ಸರಿಪಡಿಸಬೇಕಿದೆ. ಕೆರೆ ವಿಸ್ತೀರ್ಣ 181.39 ಎಕರೆ ಎಂದು ‘ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ’ಯು (ಇಎಂಪಿಆರ್‌ಐ) ಹಲವು ವರ್ಷಗಳ ಹಿಂದೆಯೇ ಸಲ್ಲಿಸಿರುವ ವರದಿಯಲ್ಲಿ ಗುರುತಿಸಿದೆ. ಅಲ್ಲದೇ ಕೆರೆಯ ಸರ್ವೆ ಸಂಖ್ಯೆ 22 ಎಂದೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.