
ಮೈಸೂರು: ‘ವಾಹನಗಳ ದಟ್ಟಣೆ ತಡೆಯುವ ಉದ್ದೇಶದಿಂದ ನಗರದ ಜೆಎಲ್‌ಬಿ ರಸ್ತೆ ಹಾಗೂ ವಿನೋಬಾ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದರು.
ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಯೋಜನೆಯಿಂದ ಪರಂಪರೆಗೆ ಧಕ್ಕೆ ಆಗುವುದಿಲ್ಲ. ಆದರೂ ಸಂಸದರು ವಿರೋಧ ವ್ಯಕ್ತಪಡಿಸುತ್ತಿರುವುದೇಕೆ ಎಂಬುದಕ್ಕೆ ಸ್ಪಷ್ಟನೆ ಕೊಡಬೇಕು. ನಾವು ಅಂಬಾವಿಲಾಸ ಅರಮನೆ ಕಟ್ಟಡದ ಮೇಲಾಗಲಿ ಅಥವಾ ಸಮೀಪದಲ್ಲಾಗಲಿ ಫ್ಲೈಓವರ್ ನಿರ್ಮಿಸುತ್ತಿದ್ದೇವೆಯೇ?’ ಎಂದು ಕೇಳಿದರು.
‘ಯಾವುದೇ ಕಾರಣಕ್ಕೂ ಫ್ಲೈಓವರ್ ಯೋಜನೆಯಿಂದ ಸರ್ಕಾರ ಹಿಂದೆ ಸರಿಯಬಾರದು. ಜನರು ನಮ್ಮೊಂದಿಗಿದ್ದಾರೆ. ಯಾರೋ ಕೆಲವರ ಆಕ್ಷೇಪಗಳಿಗೆ ಮುಖ್ಯಮಂತ್ರಿಯವರು ಮಣೆ ಹಾಕಬಾರದು’ ಎಂದು ಒತ್ತಾಯಿಸಿದರು.
‘ವಿನೋಬಾ ರಸ್ತೆಯಲ್ಲಿ ಮೆಟ್ರೋಪೋಲ್ ಹೋಟೆಲ್ ಬಳಿಯ ಜಂಕ್ಷನ್‌ನಿಂದ ಹಿನಕಲ್‌ವರೆಗೆ (12 ಕಿ.ಮೀ.) ಫ್ಲೈಓವರ್ ನಿರ್ಮಾಣವಾದರೆ ಬಹಳ ಅನುಕೂಲ ಆಗುತ್ತದೆ’ ಎಂದು ಪ್ರತಿಪಾದಿಸಿದರು.
‘ಮೆಟ್ರೋಪೋಲ್‌ನಿಂದ ಹಿನಕಲ್ ಜಂಕ್ಷನ್‌ವರೆಗೆ ಪ್ರಸ್ತುತ ದಿನಕ್ಕೆ ಸರಾಸರಿ 60ಸಾವಿರ ವಾಹನಗಳು ಸಂಚರಿಸುತ್ತಿವೆ. ಇದು ಮುಂದಿನ 10 ವರ್ಷಗಳಲ್ಲಿ 1.90 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ, ಪರ್ಯಾಯ ವ್ಯವಸ್ಥೆಗೆ ನಮ್ಮ ಸರ್ಕಾರ ಈಗಿನಿಂದಲೇ ಕ್ರಮ ಕೈಗೊಳ್ಳುತ್ತಿದೆ’ ಎಂದು ಹೇಳಿದರು.
‘ಈ ಮಾರ್ಗದಲ್ಲಿರುವ 12 ಸಿಗ್ನಲ್‌ಗಳನ್ನು ದಾಟಿ ತಲುಪಲು ಹಿನಕಲ್ ಜಂಕ್ಷನ್ ತಲುಪಲು 45 ನಿಮಿಷ ಬೇಕಾಗುತ್ತಿದೆ. ಫ್ಲೈಓವರ್ (ನಾಲ್ಕುಪಥದದ್ದು) ನಿರ್ಮಾಣವಾದರೆ 5ರಿಂದ 7 ನಿಮಿಷಗಳಲ್ಲಿ ಕ್ರಮಿಸಬಹುದು. ಇದಕ್ಕಾಗಿ 15 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. 212 ಮರಗಳನ್ನು ಕತ್ತರಿಸಬೇಕಾಗುತ್ತದೆ. ಹಳೆಯವು ಹಾಗೂ ಕೆಲವು ಬಸ್ ತಂಗುದಾಣ ಸೇರಿದಂತೆ 75 ಕಟ್ಟಡಗಳನ್ನು ತೆರವುಗೊಳಿಸಬೇಕಾಗುತ್ತದೆ. ಮೆಟ್ರೋರೈಲು ಸಂಚಾರಕ್ಕೂ ಅಗತ್ಯವಾದ ವ್ಯವಸ್ಥೆಯನ್ನು ಯೋಜನೆಯಲ್ಲಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಈ ರಸ್ತೆಯಲ್ಲಿ ಕಳೆದ 3 ವರ್ಷಗಳಲ್ಲಿ 74 ಅಪಘಾತ ಸಂಭವಿಸಿದ್ದು, 11 ಮಂದಿ ಸಾವಿಗೀಡಾಗಿದ್ದು, 73 ಮಂದಿ ಗಾಯಗೊಂಡಿದ್ದಾರೆ. ಸಾವು–ನೋವು ತಡೆಯಲು ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವುದು ಅಗತ್ಯವಲ್ಲವೇ?’ ಎಂದು ಕೇಳಿದರು.
‘ನಗರದಲ್ಲಿ 2 ಆರ್‌ಟಿಒಗಳಿದ್ದು, ಒಟ್ಟು 10.03 ಲಕ್ಷ ವಾಹನಗಳು ನೋಂದಣಿಯಾಗಿವೆ. ನಿತ್ಯವೂ ಬಂದು ಹೋಗುವ ವಾಹನಗಳು 2 ಲಕ್ಷ ಆಗುತ್ತವೆ. ಸುತ್ತಮುತ್ತಲ ಜಿಲ್ಲೆಗಳಲ್ಲಿ ನೋಂದಣಿಯಾಗಿ ಇಲ್ಲಿರುವಂತಹ 2.50 ಲಕ್ಷ ವಾಹನಗಳಿವೆ. ಒಟ್ಟು 15 ಲಕ್ಷಕ್ಕೂ ಜಾಸ್ತಿ ವಾಹನಗಳು ನಗರದಲ್ಲಿವೆ. ಇಲ್ಲಿನ ಜನಸಂಖ್ಯೆ ಅಂದಾಜು 12 ಲಕ್ಷ ಇದೆ. ಹೀಗಾಗಿ, ವಾಹನ ದಟ್ಟಣೆ ತಡೆಯಲು ಫ್ಲೈಓವರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.
‘ಜೆಎಲ್‌ಬಿ ರಸ್ತೆಯ ದಾಸಪ್ಪ ವೃತ್ತದಿಂದ ಮೆಟ್ರೋಪೋಲ್ ವೃತ್ತ, ಅಲ್ಲಿಂದ ದೇವರಾಜ ಅರಸು ರಸ್ತೆ ಜಂಕ್ಷನ್‌ವರೆಗೆ, ಜಾವಗಲ್ ಶ್ರೀನಾಥ್ ಜಂಕ್ಷನ್‌ನಿಂದ ರಾಮಸ್ವಾಮಿ ವೃತ್ತದವರೆಗೆ ಹಾಗೂ ಅಲ್ಲಿಂದ ಆರ್‌ಟಿಒ ಜಂಕ್ಷನ್‌ವರೆಗೆ ಅಂಡರ್‌ಪಾಸ್ ಹಾಗೂ ಅಲ್ಲಿಂದ ಜೆಎಸ್ಎಸ್ ಆಸ್ಪತ್ರೆಯ ಜಂಕ್ಷನ್‌ವರೆಗೆ ಫ್ಲೈಓವರ್ ನಿರ್ಮಾಣಕ್ಕೆ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಇದಕ್ಕಾಗಿ 192 ಮರಗಳನ್ನು ಕತ್ತರಿಸಬೇಕಾಗುತ್ತದೆ. 13.56 ಎಕರೆ ಭೂಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಇಲ್ಲಿ ನಿತ್ಯ ಸರಾಸರಿ 30ಸಾವಿರ ವಾಹನಗಳು ಸಂಚರಿಸುತ್ತಿವೆ. ಇದು ಮುಂದಿನ 10 ವರ್ಷಗಳಲ್ಲಿ ಲಕ್ಷಕ್ಕೆ ಏರಿಕೆ ಆಗಲಿದೆ. ಹೀಗಾಗಿ, ಯೋಜನೆ ಸಿದ್ಧಪಡಿಸಲಾಗಿದೆ’ ಎಂದರು.
‘ಈ ಕಾಮಗಾರಿಯನ್ನು 12 ತಿಂಗಳಲ್ಲಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ನಿರ್ಮಾಣವಾದಲ್ಲಿ ವಾಹನ ಸವಾರರಿಂದ ಯಾವುದೇ ಟೋಲ್ ಸಂಗ್ರಹಿಸುವುದಿಲ್ಲ’ ಎಂದು ಹೇಳಿದರು.
‘ಗ್ರೇಟರ್ ಮೈಸೂರು ಆಗಲೇಬೇಕು. ನಗರದ ಸುತ್ತಮುತ್ತಲಿನ 60ಕ್ಕೂ ಹೆಚ್ಚು ಬಡಾವಣೆಗಳಿಗೂ ಮೂಲಸೌಕರ್ಯ ಕೊಡಬೇಕೋ, ಬೇಡವೋ? ಇದಕ್ಕೂ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ’ ಎಂದರು.
‘ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ನಗರ ಅಭಿವೃದ್ಧಿಗೆ ₹ 3,200 ಕೋಟಿ ಅನುದಾನ ಕೊಟ್ಟಿದ್ದರು. 2ನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ಇಲ್ಲಿಯವರೆಗೆ ₹3,500 ಕೋಟಿ ಒದಗಿಸಿದ್ದಾರೆ. ಇದನ್ನು ಸಹಿಸಲಾಗದ ಕೆಲವರು ಅವರನ್ನು ತೇಜೋವಧೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸಂಸದರು ಐದು ರೂಪಾಯಿಯನ್ನೂ ತಂದಿಲ್ಲ. ಹಿಂದಿನ ಸಂಸದರು ಕೋಮುಸೌಹಾರ್ದ ಹಾಳು ಮಾಡುವುದರಲ್ಲೇ ನಿರತರಾಗಿದ್ದರು. ರಾಜ್ಯ ಸರ್ಕಾರ ಅಭಿವೃದ್ಧಿ ಮಾಡುವುದನ್ನೂ ಸಹಿಸಿಕೊಳ್ಳುವುದಿಲ್ಲ; ಕೇಂದ್ರದಿಂದ ಅನುದಾನವನ್ನೂ ತರುವುದಿಲ್ಲ. ಈಗಿನ ಸಂಸದರು ಈವರೆಗೆ ಹದಿನೆಂಟು ರೂಪಾಯಿಯನ್ನಾದರೂ ತಂದಿದ್ದರೆ ತಿಳಿಸಲಿ’ ಎಂದು ಸವಾಲು ಹಾಕಿದರು.
‘ಮೈಸೂರು ನಗರವೊಂದರಲ್ಲೇ 15 ಆಸ್ಪತ್ರೆ ಕಟ್ಟಿಸಿಕೊಟ್ಟ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಈಗ, ಇಲ್ಲಿನ ಟ್ರಾಫಿಕ್ ವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ ಮೂಲಕ ನಗರದಲ್ಲಿ ಎರಡು ಫ್ಲೈಓವರ್ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದಾರೆ’ ಎಂದರು.
ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ವಕ್ತಾರ ಮಹೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.