ಮೈಸೂರು: ಇಲ್ಲಿನ ದೊಡ್ಡಕೆರೆ ಮೈದಾನದಲ್ಲಿರುವ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ(ಎಇಎ)ದ ಆವರಣದಲ್ಲಿ ಮೇ 9ರಿಂದ ಜೂನ್ 17ರವರೆಗೆ ‘ಫನ್‌ಫೇರ್ ಎಕ್ಸಿಬಿಷನ್’ ಬೇಸಿಗೆ ಮೇಳ ಆಯೋಜಿಸಲಾಗಿದೆ.
‘ಬೆಂಗಳೂರಿನ ಇಂಡಿಯನ್ ಕನ್ಸೂಮರ್ ಎಂಟರ್‌ಟೇನರ್ಸ್ ಹಾಗೂ ಪ್ರಾಧಿಕಾರದ ಸಹಯೋಗದಲ್ಲಿ ಮೇಳ ಆಯೋಜಿಸಲಾಗಿದೆ. ಸ್ಥಳವನ್ನು ಬಾಡಿಗೆ ಆಧಾರದ ಮೇಲೆ ನೀಡಿರುವುದರಿಂದ ಪ್ರಾಧಿಕಾರಕ್ಕೆ ₹ 34 ಲಕ್ಷ ಆದಾಯ ದೊರೆಯುತ್ತಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಮಧ್ಯಾಹ್ನ 3ರಿಂದ 10ರವರೆಗೆ ಮೇಳ ತೆರೆದಿರುತ್ತದೆ. ವಯಸ್ಕರಿಗೆ ₹ 50, ಮಕ್ಕಳಿಗೆ ₹ 30 ಪ್ರವೇಶ ಶುಲ್ಕ ವಿಧಿಸಲಾಗಿದೆ. 5 ವರ್ಷದೊಳಗಿನವರಿಗೆ ಉಚಿತ ಪ್ರವೇಶ ನೀಡಲಾಗುತ್ತದೆ. ನಯಾಗರ ಜಲಪಾತದ ಮಾದರಿಯು ವಿಶೇಷ ಆಕರ್ಷಣೆಯಾಗಿದೆ. ಮನರಂಜನೆ ಆಟಿಕೆಗಳು, ವಾಣಿಜ್ಯ ಮಳಿಗೆಗಳು, ಫುಡ್ ಕೋರ್ಟ್ ಮೊದಲಾದವುಗಳನ್ನು ಮೇಳ ಒಳಗೊಂಡಿದೆ. ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
‘ಪ್ರಾಧಿಕಾರ ಆವರಣದ ಸಂಗೀತ ಕಾರಂಜಿಯನ್ನು ಮೇಲ್ದರ್ಜೆಗೇರಿಸಲು ಹಾಗೂ ‘ಎ ಬ್ಲಾಕ್’ ವಾಣಿಜ್ಯ ಮಳಿಗೆಗಳ ಪ್ರದೇಶವನ್ನು ‘ಹಳೇಬೀಡು’ ಶೈಲಿಯಲ್ಲಿ ನವೀಕರಿಸಲು ತಲಾ ₹ 10 ಕೋಟಿಯನ್ನು ರಾಜ್ಯ ಸರ್ಕಾರ ಒದಗಿಸಿದೆ. ‘ಎ’ ಬ್ಲಾಕ್ ನವೀಕರಣಕ್ಕೆ ಟೆಂಡರ್ ಪ್ರಕ್ರಿಯೆ (₹ 9.50 ಕೋಟಿ) ಪೂರ್ಣಗೊಂಡಿದ್ದು, ಕಾಮಗಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ಗುದ್ದಲಿಪೂಜೆ ನೆರವೇರಿಸಲಾಗುವುದು. ಮುಂಬರುವ ದಸರಾ ವೇಳೆಗೆ ಹೊಸರೂಪ ನೀಡಬೇಕೆಂಬ ಉದ್ದೇಶವಿದೆ. ಅಂತೆಯೇ, ಕಾರಂಜಿಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೊಳ್ಳಲೆಂದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಪ್ರವಾಸಿಗರು ಸಂಜೆ ಕಳೆಯಲು ಇಲ್ಲಿಗೆ ಬರುವಂತೆ ಮಾಡುವುದು ನಮ್ಮ ಯೋಜನೆಯಾಗಿದೆ’ ಎಂದು ಅಯೂಬ್‌ಖಾನ್ ತಿಳಿಸಿದರು.
ಪ್ರಾಧಿಕಾರ ಸಿಇಒ ಕೆ.ರುದ್ರೇಶ್, ಬೇಸಿಗೆ ಮೇಳ ಆಯೋಜಕ ಮಲ್ಲಿಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.