ಮೈಸೂರು: ಇಲ್ಲಿನ ಮೈಸೂರು ವೈದ್ಯಕೀಯ ಕಾಲೇಜು ಶತಮಾನೋತ್ಸವ ಸ್ಮರಣಾರ್ಥ ಹೊರತಂದಿರುವ ಅಂಚೆ ಚೀಟಿಯನ್ನು ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಚೀಫ್ ಪೋಸ್ಟ್‌ಮಾಸ್ಟರ್ ಜನರಲ್ ಕೆ.ಪ್ರಕಾಶ್ ಬಿಡುಗಡೆ ಮಾಡಿದರು.
ನಂತರ ಮಾತನಾಡಿ, ‘ದೇಶ– ವಿದೇಶಗಳಿಗೆ ಉತ್ತಮ ವೈದ್ಯರನ್ನು ನೀಡುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ
ಕೊಡುಗೆಯನ್ನು ಈ ಕಾಲೇಜು ನೀಡಿದೆ. ಇಂತಹ ಅಪೂರ್ವ ಸಂಸ್ಥೆಯ ಕುರಿತ ಅಂಚೆ ಚೀಟಿ ಬಿಡುಗಡೆ ಮಾಡಲು ಇಲಾಖೆಗೆ ಹೆಮ್ಮೆ ಎನಿಸುತ್ತದೆ’ ಎಂದರು.
‘ಕಾಲೇಜಿನ ಶತಮಾನೋತ್ಸವ ಅಂಗವಾಗಿ ಸರ್ಕಾರವು ₹ 65 ಕೋಟಿ ವೆಚ್ಚದಲ್ಲಿ ಹೊರರೋಗಿಗಳ ಘಟಕ ನಿರ್ಮಾಣಕ್ಕೆ ಅನುಮತಿ ನೀಡಿದೆ’ ಎಂದು ಎಂಎಂಸಿಆರ್‌ಐ ನಿರ್ದೇಶಕಿ ದಾಕ್ಷಾಯಿಣಿ ತಿಳಿಸಿದರು.
ಎಂಎಂಸಿಆರ್‌ಐ ನೋಡಲ್ ಅಧಿಕಾರಿ ಡಾ.ಕೆ. ಪುರುಷೋತ್ತಮ್, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಕೃಷ್ಣೇಗೌಡ ಮಾತನಾಡಿದರು.
ಕರ್ನಾಟಕ ಅಂಚೆ ವೃತ್ತದ ಫಿಲಾಟೆಲಿ ವಿಭಾಗದ ಸಹಾಯಕ ನಿರ್ದೇಶಕಿ ಶಾಂತಲಾ ಭಟ್, ಮೈಸೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕ ಜಿ. ಹರೀಶ್, ಉಪ ಅಧೀಕ್ಷಕ ವಿ.ಎಲ್. ನವೀನ್, ನಗರದ ಪ್ರಧಾನ ಅಂಚೆ ಕಚೇರಿಯ ಹಿರಿಯ ಅಂಚೆಪಾಲಕ ಸೋಮಯ್ಯ, ಡಾ.ಶಶಿಧರ್, ಡಾ.ಪುರುಷೋತ್ತಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.