ADVERTISEMENT

ರೇಸ್‌ ಕ್ಲಬ್‌ಗೆ ಜಾಗ‌: ಸಚಿವ ಸಂಪುಟದ ಟಿಪ್ಪಣಿ ಸಲ್ಲಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 16:45 IST
Last Updated 15 ಮಾರ್ಚ್ 2021, 16:45 IST
   

ಬೆಂಗಳೂರು: ಮೈಸೂರು ರೇಸ್‌ ಕ್ಲಬ್‌ ಜಾಗದ ಗುತ್ತಿಗೆ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಸಚಿವ ಸಂಪುಟದ ಟಿಪ್ಪಣಿಗಳು ಮತ್ತು ಇತರ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

139 ಎಕರೆ 39 ಗುಂಟೆ ಜಾಗದ ಗುತ್ತಿಗೆ ಅವಧಿ ವಿಸ್ತರಣೆ ಪ್ರಶ್ನಿಸಿ ವಕೀಲ ಎಸ್.ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಪ್ರವಾಸಿ ತಾಣವಾಗಿರುವ ಮೈಸೂರಿನಲ್ಲಿ ಕ್ರೀಡಾ ಚಟುವಟಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ವಿವರಣೆ ಸಲ್ಲಿಸಿತು. ಇದನ್ನು ಪರಿಶೀಲಿಸಿದ ಪೀಠ, ‘ಬೆಲೆ ಬಾಳುವ ಸರ್ಕಾರಿ ಜಾಗವನ್ನು ಬಿಟ್ಟುಕೊಡಲು ರಾಜ್ಯ ಸರ್ಕಾರ ತೆಗೆದುಕೊಂಡ ನಿಲುವು ಆಘಾತಕಾರಿ’ ಎಂದು ಅಭಿಪ್ರಾಯಪಟ್ಟಿತು.

ADVERTISEMENT

‘ವಾರ್ಷಿಕ ಗುತ್ತಿಗೆ ಸೇರಿದಂತೆ ಯಾವುದೇ ಷರತ್ತುಗಳನ್ನು ಸರ್ಕಾರ ನಿಗದಿಪಡಿಸಿಲ್ಲ. ಕ್ಲಬ್‌ ಆದಾಯದ ಶೇ 2ರಷ್ಟು ಬಾಡಿಗೆ ವಸೂಲಿ ಮಾಡಬಹುದು ಎಂದು ಉಲ್ಲೇಖಿಸಲಾಗಿದೆ. ಇದು ಸುಪ್ರೀಂ ಕೋರ್ಟ್‌ ಆದೇಶಗಳಿಗೂ ವ್ಯತಿರಿಕ್ತವಾಗಿದೆ. ಗುತ್ತಿಗೆ ಅವಧಿ ವಿಸ್ತರಣೆ ಪ್ರಕ್ರಿಯೆಯ ಎಲ್ಲ ದಾಖಲೆ ಪತ್ರಗಳು, ಸಂಪುಟದ ಟಿಪ್ಪಣಿಗಳನ್ನು ನ್ಯಾಯಾಲಯದ ಮುಂದೆ ಮಂಡಿಸಬೇಕು’ ಎಂದು ಪೀಠ ತಿಳಿಸಿತು.

‘ಮೈಸೂರು ನಗರದ ಕುರುಬರಹಳ್ಳಿ ಗ್ರಾಮದ ಸರ್ವೆ ನಂಬರ್ 4 ಮತ್ತು 74ರ ಭೂಮಿಯನ್ನು 1970ರಲ್ಲಿ ಮೈಸೂರು ರೇಸ್‌ ಕ್ಲಬ್‌ಗೆ ಗುತ್ತಿಗೆಗೆ ನೀಡಲಾಗಿತ್ತು. ಕಾಲಕಾಲಕ್ಕೆ ಗುತ್ತಿಗೆ ನವೀಕರಣಗೊಂಡು 2016ರಲ್ಲಿ ಮುಕ್ತಾಯಗೊಂಡಿದೆ. ಅಂದಿನಿಂದ ಗುತ್ತಿಗೆ ನವೀಕರಿಸದೆ ಜಾಗವನ್ನು ರೇಸ್‌ ಕ್ಲಬ್‌ ಅಕ್ರಮವಾಗಿ ಆಕ್ರಮಿಸಿಕೊಂಡಿತ್ತು’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

‘30 ವರ್ಷಗಳ ಅವಧಿಗೆ ಅಂದರೆ 2046 ರವರೆಗೆ ಕಾನೂನುಬಾಹಿರವಾಗಿ ಗುತ್ತಿಗೆ ಅವಧಿ ವಿಸ್ತರಿಸಲಾಗಿದೆ. ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಬಾಡಿಗೆ ನಿಗದಿ ಮಾಡಿಲ್ಲ. ಯಾವುದೇ ಸಾರ್ವಜನಿಕ ಹಿತಾಸಕ್ತಿ ಇರದಲ್ಲಿ ಇಲ್ಲ. ಶ್ರೀಮಂತರು ಮತ್ತು ಪ್ರಭಾವಿಗಳಿಗೆ ಮಾತ್ರ ಲಾಭವಾಗುತ್ತದೆ’ ಎಂದು ಅರ್ಜಿದಾರರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.