ADVERTISEMENT

ಯಾರಿಗೆ ಸಿಗಲಿದೆ ‘ಮೈತ್ರಿ’ ಟಿಕೆಟ್?

ದಕ್ಷಿಣ ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್‌ನಿಂದ ಮರಿತಿಬ್ಬೇಗೌಡ ಕಣಕ್ಕೆ; ಮೇ 9ರಂದು ಅಧಿಸೂಚನೆ ಪ್ರಕಟ

ಆರ್.ಜಿತೇಂದ್ರ
Published 3 ಮೇ 2024, 5:54 IST
Last Updated 3 ಮೇ 2024, 5:54 IST
ಮರಿತಿಬ್ಬೇಗೌಡ
ಮರಿತಿಬ್ಬೇಗೌಡ   

ಮೈಸೂರು: ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್‌ನಿಂದ ಮರಿತಿಬ್ಬೇಗೌಡ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಪೈಕಿ ಯಾರಿಗೆ ಸ್ಪರ್ಧೆಯ ಅವಕಾಶ ಸಿಗಲಿದೆ ಎಂಬ ಕುತೂಹಲವಿದೆ.

ಚುನಾವಣಾ ಆಯೋಗವು ಗುರುವಾರ ವೇಳಾಪಟ್ಟಿ ಪ್ರಕಟಿಸಿದ್ದು, ಮೇ 9ರಂದು ಅಧಿಸೂಚನೆ ಪ್ರಕಟವಾಗಲಿದೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಲೋಕಸಭಾ ಚುನಾವಣೆ ಮತ ಎಣಿಕೆಯ ಮುನ್ನಾ ದಿನವಾದ ಜೂನ್‌ 3ರಂದು ಮತದಾನ ನಡೆಯಲಿರುವುದು ವಿಶೇಷ.

ಬಿಜೆಪಿ–ಜೆಡಿಎಸ್‌ ನಡುವೆ ಲೋಕಸಭೆ ಚುನಾವಣೆಗೆ ನಡೆದ ಮೈತ್ರಿ ಮಾತುಕತೆ ಸಂದರ್ಭವೇ ವಿಧಾನ ಪರಿಷತ್‌ನ ಆರು ಕ್ಷೇತ್ರಗಳಿಗೆ ಸ್ಪರ್ಧೆ ಸಂಬಂಧ ಮಾತುಕತೆ ನಡೆದಿತ್ತು. ಆದರೆ, ಯಾವ ಪಕ್ಷಕ್ಕೆ ಟಿಕೆಟ್‌ ಎಂಬ ಕುರಿತು ಇನ್ನೂ ನಿರ್ಣಯ ಹೊರಬಿದ್ದಿಲ್ಲ.

ADVERTISEMENT

ಲೋಕಸಭೆ ಚುನಾವಣೆಗೆ ಮುನ್ನ ಪರಿಷತ್‌ನ ಎರಡು ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯು ಜೆಡಿಎಸ್‌ಗೆ ಅವಕಾಶ ನೀಡಿತ್ತು. ಹೀಗಾಗಿ ಮೈಸೂರು ಶಿಕ್ಷಕರ ಕ್ಷೇತ್ರ ಸೇರಿದಂತೆ ಪರಿಷತ್‌ನ ಹೆಚ್ಚಿನ ಸೀಟುಗಳನ್ನು ತನಗೆ ಬಿಟ್ಟುಕೊಡುವಂತೆ ಬಿಜೆಪಿ ಒತ್ತಾಯಿಸಲಿದೆ ಎನ್ನಲಾಗಿದೆ.

ಸದ್ಯ ಎರಡೂ ಪಕ್ಷಗಳಲ್ಲಿಯೂ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಬಿಜೆಪಿಯಿಂದ ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ನಿರಂಜನ ಮೂರ್ತಿ ಜೊತೆಗೆ ಮೈಸೂರು ವಿ.ವಿ. ಸಿಂಡಿಕೇಟ್‌ ಸದಸ್ಯರಾಗಿದ್ದ ಈ.ಸಿ. ನಿಂಗರಾಜೇಗೌಡ ಸಹ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನ್ನೂ ಮೂರ್ನಾಲ್ಕು ಆಕಾಂಕ್ಷಿಗಳಿದ್ದಾರೆ.

ಮಂಡ್ಯ ಭಾಗದ ಅನುಭವಿ ರಾಜಕಾರಣಿ ಕೆ.ಟಿ. ಶ್ರೀಕಂಠೇಗೌಡ ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲು ಒಲವು ತೋರಿದ್ದು, ಟಿಕೆಟ್‌ ಕೇಳಿದ್ದಾರೆ ಎನ್ನಲಾಗಿದೆ. ಸಾ.ರಾ. ಮಹೇಶ ಬೆಂಬಲಿಗ ವಿವೇಕಾನಂದ ಕೂಡ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಐದನೇ ಬಾರಿ ಗೆಲುವಿನ ಆಶಯದೊಂದಿಗೆ ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದು ಈ ಕ್ಷೇತ್ರದ ಮತದಾರರ ನಾಡಿಮಿಡಿತ ಅರಿತಿದ್ದೇನೆ

ಮರಿತಿಬ್ಬೇಗೌಡ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ

ಐದನೇ ಬಾರಿ ಮರಿತಿಬ್ಬೇಗೌಡ ಕಣಕ್ಕೆ

ಕಳೆದ ನಾಲ್ಕು ಬಾರಿಯಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮರಿತಿಬ್ಬೇಗೌಡ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಬಯಸಿದ್ದು ಈಗಾಗಲೇ ಪ್ರಚಾರವನ್ನೂ ಕೈಗೊಂಡಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್‌ನಿಂದ ಗೆಲುವು ದಾಖಲಿಸಿದ್ದ ಅವರು ನಂತರದಲ್ಲಿ ಪಕ್ಷೇತರರಾಗಿ ಹಾಗೂ ಎರಡು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಕೆಲವು ವರ್ಷಗಳಿಂದ ಜೆಡಿಎಸ್‌ ನಾಯಕರಿಂದ ಅಂತರ ಕಾಯ್ದುಕೊಂಡಿದ್ದು ಇದೇ ವರ್ಷ ಮಾರ್ಚ್‌ನಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರಿದ್ದರು. ವಿಧಾನ ಪರಿಷತ್‌ನ ಉಪ ಸಭಾಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದ ಅನುಭವವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.