ADVERTISEMENT

ಮೈಸೂರು: 88 ವರ್ಷಗಳಲ್ಲೇ ದಾಖಲೆ ಬಿಸಿಲು

ನಗರದಲ್ಲಿ ತಾಪಮಾನ ದಿಢೀರ್ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 17:12 IST
Last Updated 8 ಮಾರ್ಚ್ 2019, 17:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಸಿಲಿನ ತಾಪ ದಿಢೀರ್‌ ಹೆಚ್ಚಾಗಿದ್ದು, ಗುರುವಾರ ಗರಿಷ್ಠ ತಾಪಮಾನ 37.9 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಕಳೆದ 88 ವರ್ಷಗಳಲ್ಲಿ ಮಾರ್ಚ್‌ ತಿಂಗಳಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ ಇದಾಗಿದೆ.

1931ರ ಮಾರ್ಚ್‌ 30ರಂದು ನಗರದಲ್ಲಿ 37.8 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿತ್ತು. ವಾಡಿಕೆಗಿಂತ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಅಧಿಕ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾರ್ಚ್‌ ತಿಂಗಳ ಗರಿಷ್ಠ ಉಷ್ಣಾಂಶ ಕಳೆದ 10 ವರ್ಷಗಳಲ್ಲಿ ಒಮ್ಮೆ ಮಾತ್ರ 37 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿತ್ತು. 2016ರ ಮಾರ್ಚ್‌ 23ರಂದು 37.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಈ ಬಾರಿ ಮಾರ್ಚ್‌ ಮೊದಲ ವಾರದಲ್ಲೇ ಬಿಸಿಲಿನ ತಾಪಕ್ಕೆ ಜನರು ತತ್ತರಿಸುವಂತಾಗಿದೆ.

ADVERTISEMENT

2018ರ ಮಾರ್ಚ್‌ ತಿಂಗಳಲ್ಲಿ ನಗರದ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ ದಾಟಿರಲಿಲ್ಲ. 35.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ಎನಿಸಿಕೊಂಡಿತ್ತು. 2017ರ ಮಾರ್ಚ್‌ ತಿಂಗಳಲ್ಲಿ ಗರಿಷ್ಠ ತಾಪಮಾನ 36.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.

ನಗರದಲ್ಲಿ ಶುಕ್ರವಾರ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 16.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಮುಂದಿನ ಒಂದು ವಾರ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.

ಬೆಂಗಳೂರು ಒಳಗೊಂಡಂತೆ ರಾಜ್ಯದ ಹಲವೆಡೆ ದಿನಕಳೆದಂತೆ ಬಿಸಿಲಿನ ಪ್ರಖರತೆ ಹೆಚ್ಚುತ್ತಲೇ ಇದೆ. ಬೆಳಿಗ್ಗೆಯಿಂದ ಸಂಜೆವರೆಗೂ ಬಿಸಿಲು ಹೆಚ್ಚಿರುವುದರಿಂದ ಧಗೆಯ ಪ್ರಮಾಣವೂ ಏರಿಕೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.