ADVERTISEMENT

ಕೊರೊನಾ ಲಾಕ್‌ಡೌನ್‌ನಿಂದ ಬೀದಿಗೆ ಬಂತು ಬೀದಿ ಬದಿ ವ್ಯಾಪಾರಿ ಬದುಕು!

ಸಾವಿರಾರು ಕುಟುಂಬಗಳ ಬದುಕು ಅತಂತ್ರ

ರಮೇಶ ಕೆ
Published 24 ಮೇ 2021, 3:05 IST
Last Updated 24 ಮೇ 2021, 3:05 IST
ಮೈಸೂರಿನ ಸಯ್ಯಾಜಿರಾವ್‌ ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ಹಣ್ಣು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು
ಮೈಸೂರಿನ ಸಯ್ಯಾಜಿರಾವ್‌ ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ಹಣ್ಣು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು   

ಮೈಸೂರು: ಕೋವಿಡ್-19 ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್‌ಡೌನ್‌ ಘೋಷಿಸಿದ್ದರಿಂದ ನಗರದ ಬೀದಿ ಬದಿ ವ್ಯಾಪಾರಿಗಳ ಬದುಕು ಅಡಕತ್ತರಿಗೆ ಸಿಲುಕಿದಂತಾಗಿದೆ.

ಬೀದಿ ಬದಿ ಹಾಗೂ ಚಿಲ್ಲರೆ ಅಂಗಡಿ ವ್ಯಾಪಾರಿಗಳಬದುಕಿಗೆ ನಿತ್ಯದ ದುಡಿಮೆಯೇ ಆಧಾರ. ಕೊರೊನಾ ಲಾಕ್‌ಡೌನ್ ಇವರ ಬದುಕನ್ನೇ ಹೈರಾಣು ಮಾಡಿದೆ. ಕಳೆದ ವರ್ಷವೂ ಇದೇ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಅದರಿಂದ ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೆ ಲಾಕ್‌ಡೌನ್ ಎದುರಾಗಿ ಇವರ ಬದುಕು ಬೀದಿಗೆ ಬಿದ್ದಂತಾಗಿದೆ.

ತಳ್ಳುವ ಗಾಡಿಗಳಲ್ಲಿ ಸಂಜೆ 6ರವರೆಗೆ ವ್ಯಾಪಾರಕ್ಕೆ ಸರ್ಕಾರ ಅವಕಾಶ ನೀಡಿದೆ. ಆದರೆ, ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ನೀಡಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೇಳಿಕೊಳ್ಳುವಂತ ಪರಿಹಾರ ಸಿಕ್ಕಿಲ್ಲ, ಇತ್ತ ದುಡಿಯಲೂ ಬಿಡುತ್ತಿಲ್ಲ. ಜೀವನ ನಿರ್ವಹಣೆಗಾಗಿ ವ್ಯಾಪಾರ ನಡೆಸಲು ಸರ್ಕಾರ ಅವಕಾಶ ಕಲ್ಪಿಸಬೇಕು ಎಂಬುದು ಬಹುತೇಕ ವ್ಯಾಪಾರಿಗಳ ಆಗ್ರಹವಾಗಿದೆ.

ADVERTISEMENT

ರಸ್ತೆ ಬದಿ ಹಣ್ಣು, ತರಕಾರಿ, ಎಳನೀರು, ಹೂವು ಹಾಗೂ ತಳ್ಳುಗಾಡಿಗಳಲ್ಲಿ ಹೋಟೆಲ್‌ ನಡೆಸುವವರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳ ಬದುಕು ಈಗ ಅತಂತ್ರವಾಗಿದೆ. ಹಾಕಿದ ಬಂಡವಾಳವೂ ವಾಪಸ್‌ ಬರದೇ ಜೀವನ ನಡೆಸುವುದು ಕಷ್ಟವಾಗಿದೆ. ಮತ್ತೊಂದೆಡೆ ಸಾಲ ಮಾಡಿ ವ್ಯಾಪಾರ ಮಾಡುವ ಬಹುತೇಕ ಮಂದಿ ಬಡ್ಡಿ ಹಣ ಕಟ್ಟಲು ಪರದಾಡುತ್ತಿದ್ದಾರೆ. ಹೆಂಡತಿ, ಮಕ್ಕಳು, ತಂದೆ–ತಾಯಿಯನ್ನು ಸಾಕಲು ಕಷ್ಟಪಡುವಂತಾಗಿದೆ.

ಈಚೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೋವಿಡ್‌ ಎರಡನೇ ಅಲೆ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ರೈತರು, ಚಾಲಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರ ನೆರವಿಗೆ ನಿಲ್ಲಲು ₹1,250 ಕೋಟಿ ಮೊತ್ತದ ಪ್ಯಾಕೇಜ್‌ ಘೋಷಿಸಿದ್ದಾರೆ. ಅದರಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ (ಆತ್ಮನಿರ್ಭರ್‌ ಅಡಿ ನೋಂದಾಯಿಸಿದವರಿಗೆ) ತಲಾ ₹2 ಸಾವಿರದಂತೆ 2.20 ಲಕ್ಷ ಫಲಾನುಭವಿಗಳಿಗೆ ಪರಿಹಾರ ಸಿಗಲಿದೆ.

ನಮಗೂ ಅವಕಾಶ ನೀಡಿ: ‘ಸೊಪ್ಪು ಸಗಟು ವ್ಯಾಪಾರಕ್ಕೆ ಲಲಿತಮಹಲ್ ಮೈದಾನದಲ್ಲಿ ಹಾಗೂ ತರಕಾರಿ ಸಗಟು ವ್ಯಾಪಾರಕ್ಕೆ ವಸ್ತುಪ್ರದರ್ಶನ ಮೈದಾನದಲ್ಲಿ ಅವಕಾಶ ನೀಡಿದ್ದಾರೆ. ರಾತ್ರಿಯೇ ಹೋಗಿ ಅಲ್ಲಿಂದ ತರಕಾರಿ ತಂದಿಟ್ಟುಕೊಳ್ಳಬೇಕು. ಬೆಳಿಗ್ಗೆ 10ರವರೆಗೆ ಮಾತ್ರ ಮಾರಲು ಅವಕಾಶ ನೀಡಿದ್ದಾರೆ. ಪೊಲೀಸರು ರಸ್ತೆ ಬದಿ ಮಾರಲು ಬಿಡುತ್ತಿಲ್ಲ. 25 ಕಟ್ಟು ಸೊಪ್ಪು ತಂದರೆ ಅದರಲ್ಲಿ 10 ಕಟ್ಟು ಉಳಿಯುತ್ತದೆ. ₹6ಕ್ಕೆ ಒಂದು ಮೆಂತ್ಯೆ ಸೊಪ್ಪಿನ ಕಟ್ಟು, ₹3ಕ್ಕೆ ಕೊತ್ತಂಬರಿ ಸೊಪ್ಪನ್ನು ಸಗಟು ಬೆಲೆಗೆ ತಂದು ಮಾರಬೇಕು. 10 ಕಟ್ಟು ಉಳಿದರೆ ಬಂದ ಲಾಭವೂ ಹೋಗುತ್ತದೆ’ ಎಂದು ತರಕಾರಿ ವ್ಯಾಪಾರಿ ಸಿ.ವೆಂಕಟೇಶ್‌ ಬೇಸರ ವ್ಯಕ್ತಪಡಿಸಿದರು.

‘ಲಾಕ್‌ಡೌನ್‌ನಿಂದಾಗಿ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ. ಕೆಲಸಗಾರರು ನಾಲ್ಕು ಗಂಟೆ ದುಡಿದರೂ ಪೂರ್ತಿ ಸಂಬಳ ಕೊಡಬೇಕು. ನಮ್ಮ ಬಳಿ ಏಳು ಮಂದಿ ಕೆಲಸ ಮಾಡುತ್ತಿದ್ದಾರೆ. ಮುಂಚಿನ ದಿನಗಳಿಗೆ ಹೋಲಿಸಿದರೆ ಶೇ20 ರಷ್ಟು ವ್ಯಾಪಾರ ಆಗುತ್ತಿದೆ. ಇದೇ ರೀತಿ ಲಾಕ್‌ಡೌನ್‌ ಮುಂದುವರಿದರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ. 50 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇನೆ ಈ ರೀತಿಯ ಸಂಕಷ್ಟ ಎಂದೂ ಕಂಡಿಲ್ಲ. ಸರ್ಕಾರದೊಂದಿಗೆ ನಾವೂ ಕೈಜೋಡಿಸಿದ್ದು, ವ್ಯಾಪಾರಿಗಳ ಕಷ್ಟಕ್ಕೆ ಸ್ಪಂದಿಸಬೇಕು’ ಎಂದು ವಾಣಿವಿಲಾಸ ಮಾರುಕಟ್ಟೆ ವರ್ತಕರ ಸಂಘದ ಕಾರ್ಯದರ್ಶಿ ಶಿವಕುಮಾರ್‌ ಮನವಿ ಮಾಡಿದರು.

ವ್ಯಾಪಾರಿಗಳು ಏನಂತಾರೆ...

ಎಳನೀರು ಪೂರೈಕೆಯೇ ಇಲ್ಲ

27 ವರ್ಷಗಳಿಂದ ಎಳನೀರು ವ್ಯಾಪಾರ ಮಾಡುತ್ತಿದ್ದೇನೆ, ದಿನಕ್ಕೆ 200ಕ್ಕೂ ಹೆಚ್ಚು ಎಳನೀರು ಮಾರುತ್ತಿದ್ದೆ. ಲಾಕ್‌ಡೌನ್‌ ಜಾರಿಯಾದಾಗಿನಿಂದ 60ಕ್ಕಿಂತ ಹೆಚ್ಚು ಮಾರಿಲ್ಲ. ಬೆಳಿಗ್ಗೆ 10ರವರೆಗೆ ಮಾತ್ರ ಅವಕಾಶ ಕೊಟ್ಟಿದ್ದರಿಂದ ತೊಂದರೆಯಾಯಿತು. ಎಳನೀರು ಪೂರೈಕೆಯೇ ಇಲ್ಲವಾಗಿದೆ, ಮುಂಗಡ ಕೊಟ್ಟವರು ‘ಎಳನೀರು ಕೀಳುವವರು ಸಿಗುತ್ತಿಲ್ಲ’ ಎಂಬ ಸಬೂಬು ಹೇಳುತ್ತಾರೆ. ಸರ್ಕಾರದಿಂದಲೂ ನಮಗೆ ಯಾವುದೇ ನೆರವು ಸಿಕ್ಕಿಲ್ಲ’

- ತಿಮ್ಮಣ್ಣ, ಎಳನೀರು ವ್ಯಾಪಾರಿ, ಸಿದ್ದಪ್ಪ ಸ್ಕ್ವೇರ್‌

***

ಲಾಭಕ್ಕಿಂತ ನಷ್ಟವೇ ಹೆಚ್ಚು

ನಮ್ಮ ತಾತನ ಕಾಲದಿಂದಲೂ ಈರುಳ್ಳಿ ವ್ಯಾಪಾರ ಮಾಡುತ್ತಿದ್ದೇವೆ. ಈ ರೀತಿ ಪರಿಸ್ಥಿತಿ ಎಂದೂ ಆಗಿರಲಿಲ್ಲ. ಸಣ್ಣಪುಟ್ಟ ವ್ಯಾಪಾರಿಗಳ ಸ್ಥಿತಿ ಹೇಳತೀರದಾಗಿದೆ. ಸರ್ಕಾರ ನಿಗದಿ ಮಾಡಿದ ಸಮಯದಲ್ಲಿ ಗ್ರಾಹಕರು ಬರಬೇಕು. ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ, ಬಹಳಷ್ಟು ತರಕಾರಿ ಉಳಿಯುತ್ತದೆ. ದಿನಕ್ಕೆ ₹1000 ವ್ಯಾಪಾರವಾಗೋದು ಕಷ್ಟವಾಗಿದೆ. ನಮ್ಮ ಕಷ್ಟ ಯಾರಿಗೆ ಹೇಳಿಕೊಳ್ಳಲಿ?

- ಎಚ್‌.ಮೂರ್ತಿ, ಈರುಳ್ಳಿ ವ್ಯಾಪಾರಿ ಬಂಡಿಪಾಳ್ಯ

***

ಎಲ್ಲರಿಗೂ ಪರಿಹಾರ ತಲುಪಲಿ

‘ಸಂಜೆವರೆಗೆ ಮಾರಿದರೆ ಮಾತ್ರ ದಿನಕ್ಕೆ ₹500 ರವರೆಗೆ ಲಾಭ ಸಿಗುತ್ತಿತ್ತು, ಈಗ ಅದೂ ಇಲ್ಲದಂತಾಗಿದೆ. ಹಾಪ್‌ಕಾಮ್ಸ್‌ನವರಿಗೆ ಮಾತ್ರ ಸಂಜೆವರೆಗೆ ಅವಕಾಶ ನೀಡಿದ್ದಾರೆ. ನಾವು ಗ್ರಾಹಕರನ್ನು ಕಾಯಿಸುವುದಿಲ್ಲ, ಗುಂಪುಗೂಡಲು ಬಿಡುವುದಿಲ್ಲ. ಒಬ್ಬೊಬ್ಬರಿಗೆ ಕೊಟ್ಟು ಕಳುಹಿಸುತ್ತೇವೆ. ಆದರೆ, ನಮಗೆ ಮಾತ್ರ ಸರ್ಕಾರ ಅನ್ಯಾಯ ಮಾಡಿದೆ. ಲಾಕ್‌ಡೌನ್‌ನಿಂದ ನಷ್ಟ ಅನುಭವಿಸಿದ ಬೀದಿಬದಿ ವ್ಯಾಪಾರಿಗಳಿಗೂ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಮುಖ್ಯಮಂತ್ರಿಗಳು ₹2 ಸಾವಿರ ಪರಿಹಾರ ನೀಡುವುದಾಗಿ ಹೇಳಿದ್ದಾರೆ, ಅದು ಎಲ್ಲರಿಗೂ ತಲುಪಬೇಕು.

- ಸಿ.ವೆಂಕಟೇಶ್‌,ತರಕಾರಿ ವ್ಯಾಪಾರಿ, ಬಲ್ಲಾಳ್‌ ವೃತ್ತ

***

ಸಾಲ ಸೌಲಭ್ಯವೇ ಸಿಕ್ಕಿಲ್ಲ

ಮೈಸೂರು ಮಹಾನಗರ ಪಾಲಿಕೆಯಿಂದನಮಗೆ ಗುರುತಿನ ಚೀಟಿ ಕೊಟ್ಟಿದ್ದಾರೆ. ಕಳೆದ ವರ್ಷ ಪಿಎಂ ಸ್ವನಿಧಿ ಯೋಜನೆಯಡಿ ಸಾಲಸೌಲಭ್ಯಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ್ದೆ. ಆನಂತರ ಹತ್ತಾರು ಬಾರಿ ಪಾಲಿಕೆ ಹಾಗೂ ಬ್ಯಾಂಕ್‌ಗೆ ಅಡ್ಡಾಡಿದೆ. ಅರ್ಜಿ ಹಾಕಿದ್ದರಲ್ಲಿ ಲೋಪ‍ದೋಷವಿದೆ ಎಂದು ಹೇಳಿದರು. ಸಾಲ ಸೌಲಭ್ಯವೇ ಸಿಗಲಿಲ್ಲ. ಇನ್ನೂ ಈ ಬಾರಿ ಮುಖ್ಯಮಂತ್ರಿಗಳು ಘೋಷಣೆ ಮಾಡಿರುವ ₹ 2 ಸಾವಿರ ಪರಿಹಾರ ಹಣ ಬರುತ್ತದೆ ಎಂಬುದೇ ಅನುಮಾನ.

- ರವಿ, ತರಕಾರಿ ವ್ಯಾಪಾರಿ, ನಂಜುಮಳಿಗೆ

***

ಜೀವನ ನಿರ್ವಹಣೆ ಕಷ್ಟ

ಪದೇಪದೆ ಲಾಕ್‌ಡೌನ್‌ ಮಾಡುವುದರಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಬೆಳಿಗ್ಗೆ 10ರವರೆಗೆ ಅವಕಾಶ ಕೊಟ್ಟಿದ್ದರಿಂದ ಸ್ವಲ್ಪ ಹೂವು ತಂದು ಮಾರುತ್ತಿದ್ದೇವೆ. ದಿನಕ್ಕೆ ₹300 ಆಗೋದು ಕಷ್ಟವಾಯಿತು. ಸಾಮಾನ್ಯ ದಿನಗಳಲ್ಲಿ ₹2 ಸಾವಿರದವರೆಗೂ ವ್ಯಾಪಾರ ಮಾಡುತ್ತಿದ್ದೆವು.

- ಸಿದ್ದಮ್ಮ, ಹೂವಿನ ವ್ಯಾಪಾರಿ

***

ಸಾಲ ಸೌಲಭ್ಯಕ್ಕೆ 20,906 ಅರ್ಜಿ

ಪ್ರಧಾನಮಂತ್ರಿ ಆತ್ಮನಿರ್ಭರ್‌ ಯೋಜನೆಯಡಿ(ಪಿಎಂ ಸ್ವನಿಧಿ) ಸಾಲ ಸೌಲಭ್ಯಕ್ಕಾಗಿ ಕಳೆದ ವರ್ಷದ ಜುಲೈನಿಂದ ಇಲ್ಲಿಯವರೆಗೆ 20,906 ಬೀದಿ ಬದಿ ವ್ಯಾಪಾರಿಗಳು ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ್ದಾರೆ. ಅದರಲ್ಲಿ19,936 ಅರ್ಜಿಗಳು ಒಪ್ಪಿಗೆಯಾಗಿವೆ. 8,520 ವ್ಯಾಪಾರಿಗಳಿಗೆ ಮಂಜೂರಾಗಿದ್ದು, 5,962 ಮಂದಿಗೆ ವಿತರಣೆ ಮಾಡಲಾಗಿದೆ ಎಂದು ಪಾಲಿಕೆ ಹೆಚ್ಚುವರಿ ಆಯುಕ್ತ ಎನ್‌.ಎಂ.ಶಶಿಕುಮಾರ್‌ ಮಾಹಿತಿ ನೀಡಿದರು.

‘ಈ ಯೋಜನೆ ಈಗಲೂ ಚಾಲ್ತಿಯಲ್ಲಿದೆ, ಸಾಲ ತೀರಿಸಲು ಒಂದು ವರ್ಷದ ಅವಧಿ ಕೊಟ್ಟಿರುತ್ತೇವೆ. ಸೆಪ್ಟೆಂಬರ್‌ನಿಂದಲೇ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗಿದೆ. ಮೈಸೂರು ಮಹಾನಗರ ಪಾಲಿಕೆಯಿಂದ ನಗರದಲ್ಲಿ 1,856 ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ವ್ಯಾಪಾರ ಪ್ರಮಾಣ ಪತ್ರ ಸಿಕ್ಕಿದ್ದು, ಉಳಿದ ವ್ಯಾಪಾರಿಗಳ ಸರ್ವೆ ಕಾರ್ಯ ನಡೆಸಬೇಕಿದೆ’ ಎಂದು ಅವರು ಹೇಳಿದರು.

ಸಹಾಯ ಕೇಂದ್ರ

‘ಬೀದಿ ಬದಿ ವ್ಯಾಪಾರಿಗಳ ಜೀವನಮಟ್ಟ ಸುಧಾರಿಸಲು ಕಳೆದ ಬಾರಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆತ್ಮನಿರ್ಭರ್‌ ಯೋಜನೆ ಅಡಿ ಕಿರುಸಾಲ ಯೋಜನೆ ಘೋಷಿಸಿತ್ತು. ₹10 ಸಾವಿರ ಬಡ್ಡಿರಹಿತ ಸಾಲ ಸೌಲಭ್ಯದ ಯೋಜನೆ. ಮೈಸೂರಿನಲ್ಲಿ ಸಹಾಯ ಕೇಂದ್ರ ಮಾಡಿಕೊಂಡು ವ್ಯಾಪಾರಿಗಳಿಂದ ಉಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿಸಿದೆವು. 600ಕ್ಕೂ ಹೆಚ್ಚು ಮಂದಿಗೆ ನೆರವಾದೆವು’ ಎಂದು ಬಿಜೆಪಿ ಯುವ ಮೋರ್ಚಾ ಮೈಸೂರು ನಗರ ಘಟಕದ ಉಪಾಧ್ಯಕ್ಷ ಕೆ.ಎಂ.ನಿಶಾಂತ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.