ಮೈಸೂರಿನ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದ ತಿಪ್ಪಯ್ಯನ ಕೆರೆಯನ್ನು ತೇಲುಕಳೆ ತುಂಬಿದೆ
ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮೈಸೂರು: ಮೂರು ವರ್ಷದ ಹಿಂದೆ ತಿಳಿನೀರಿನಿಂದ ಹೊಳೆಯುತ್ತಿದ್ದ ‘ತಿಪ್ಪಯ್ಯನ ಕೆರೆ’ ಈಗ ತೇಲುಕಳೆಯ ತಿಪ್ಪೆಯಾಗಿದೆ. ಜಲಚರಗಳು ಉಸಿರುಗಟ್ಟಿ ಸತ್ತರೆ, ಬಾನಾಡಿಗಳಿಂದು ಗೈರಾಗಿವೆ.
ನಿಸರ್ಗ ನೀಡುವ ಎಚ್ಚರಿಕೆ ಕೇಳಿಸಿಕೊಳ್ಳುವ, ನೋಡುವ ತಾಳ್ಮೆ ಇಲ್ಲದಿದ್ದರೆ ಉಸಿರಾಡುವ ಗಾಳಿ, ಶುದ್ಧ ನೀರು ಕಲುಷಿತವಾಗುವುದಷ್ಟೇ ಅಲ್ಲ, ಇಡೀ ಪರಿಸರವೇ ಹಾಳಾಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಈ ಕೆರೆ ಕಣ್ಣ ಮುಂದಿದೆ.
‘ಜಲಪ್ರತಿನಿಧಿಗಳು, ಅಧಿಕಾರಿಗಳ ಮನೆಯ ಟ್ಯಾಂಕ್‌ಗಳಿಗೆ ಈ ನೀರನ್ನು ತುಂಬಿಸಬೇಕು. ಆಗಲಾದರೂ ನಮ್ಮ ಕಷ್ಟ ಗೊತ್ತಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸರ್ದಾರ್ ವಲ್ಲಭಬಾಯಿ ಪಟೇಲ್ ನಗರ ನಿವಾಸಿ ಲೋಕೇಶ್.
ಕೆರೆಯತ್ತ ವಿಹಾರ ಬರಬೇಕೆಂಬ ಮನಸ್ಸು ಮಾಡಿದವರೂ, ಜಲನಿಧಿಯ ಸೌಂದರ್ಯಕ್ಕೆ ಹತ್ತಿರದಲ್ಲೇ ನಿವೇಶನ ಕಟ್ಟಿಸಿದವರ ಪಾಲಿಗೆ ಕೆರೆಯೀಗ ರೌರವ ನರಕ ತೋರಿಸುತ್ತಿದೆ. ಹಂದಿ, ಸೊಳ್ಳೆ ಕಾಟ ಸೇರಿದಂತೆ ರೋಗರುಜಿನಗಳನ್ನೇ ಹೊತ್ತು ಕೂತಿದೆ.
ರಿಂಗ್ ರಸ್ತೆ ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲ್ ನಗರದ ಪೊಲೀಸ್ ಬಡಾವಣೆ ಮಧ್ಯೆ ಚಾಚಿರುವ ಕೆರೆಗೆ ನೇರವಾಗಿ ಒಳಚರಂಡಿ ನೀರು ಸೇರುತ್ತಿದೆ. ಈ ಬಾರಿಯ ಮಳೆ ಹೆಚ್ಚಳದಿಂದಾಗಿ ಕೆರೆಯ ನೀರಿನ ಮಟ್ಟ ಏರಿದ್ದರೂ ನೀರು ತಿಳಿಯಾಗಿಲ್ಲ. ಕೊಳಚೆ ನೀರಿನಿಂದ ‘ಕತ್ತೆ ಕಿವಿ’ ತೇಲುಕಳೆ ತುಂಬಿಹೋಗಿದ್ದು, ಆಟದ ಮೈದಾನದಂತೆ ಕಾಣುತ್ತದೆ.
‘ನಗರದ ಯಾವುದೇ ಬಡಾವಣೆಯಲ್ಲಿ ಹೀಗೆ ಜೀವಂತ ಕೆರೆ ಸಿಗುವುದಿಲ್ಲ. ಕೆರೆಯ ಜೀವವೈವಿಧ್ಯ ಉಳಿಸಬೇಕು. ಈ ಕೆರೆ ಮೇಲಿನ ‘ಸಾತಿ ಕೆರೆ’ಗೆ ಸಂಪರ್ಕಿಸಿರುವ ರಾಜಕಾಲುವೆಯಲ್ಲಿ ಚರಂಡಿ ನೀರು ಹರಿಯುತ್ತಿದೆ. ಆ ಕೆರೆಯ ರಕ್ಷಣೆಯೂ ಆಗಬೇಕು’ ಎನ್ನುತ್ತಾರೆ ಜಲತಜ್ಞ ಯು.ಎನ್. ರವಿಕುಮಾರ್.
ಲಲಿತಾದ್ರಿಪುರ ಗ್ರಾಮದ ಸರ್ವೆ ಸಂಖ್ಯೆ 31ರಲ್ಲಿ 6.17 ಎಕರೆ ಹಾಗೂ 30ರಲ್ಲಿ 9.01 ಎಕರೆ ವಿಸ್ತೀರ್ಣವನ್ನು ಹೊಂದಿರುವ ಕೆರೆ, ರಿಂಗ್ ರಸ್ತೆಯ ಪಕ್ಕದಲ್ಲೇ ಇದೆ. ಗಿರಿದರ್ಶಿನಿ ಬಡಾವಣೆ, ಪೊಲೀಸ್ ಬಡಾವಣೆ, ಆಲನಹಳ್ಳಿಯ ಒಳಚರಂಡಿ ನೀರು ರಾಜ ಕಾಲುವೆಯ ಮೂಲಕ ಕೆರೆಯ ಒಡಲು ಸೇರುತ್ತಿದೆ. ಅದಲ್ಲದೆ, ಕೆರೆ ಸಮೀಪದಲ್ಲೇ ಮ್ಯಾನ್‌ಹೋಲ್‌ಗಳ ಬಾಯಿ ಕಳಚಿದ್ದು, ಹಂದಿಗಳ ಆವಾಸಸ್ಥಾನವಾಗಿದೆ.
ನಗರದ ಪೂರ್ವಭಾಗದ ಬಡಾವಣೆಗಳ ಚರಂಡಿ ನೀರನ್ನು ಸಂಸ್ಕರಿಸುವ ಘಟಕ ತೆರೆಯುವ ಕೆಲಸವನ್ನು ಪಾಲಿಕೆ, ಮುಡಾ ಮಾಡಿಲ್ಲ. ಸಮನ್ವಯದ ಕೊರತೆಯಿಂದ ಕೆರೆಯ ಜೀವ ಹಾರಿಹೋಗಿದೆ.
ರಂದೀಪ್ ಜಿಲ್ಲಾಧಿಕಾರಿಯಾಗಿದ್ದಾಗ 2016-17ರಲ್ಲಿ ಆಟೊಮೋಟೀವ್ ಆ್ಯಕ್ಸಿಲ್ ಕಾರ್ಖಾನೆಯ ಸಿಎಸ್‌ಆರ್ ಹಣದಿಂದ ಕೆರೆಗೆ ಕಾಯಕಲ್ಪ ನೀಡಲಾಗಿತ್ತು. ಹೂಳು ತೆಗೆದು ಏರಿ ಮರು ನಿರ್ಮಿಸಲಾಗಿತ್ತು.
2018ರ ಏಪ್ರಿಲ್‌ನಲ್ಲಿ ಕೆರೆ ನಿರ್ವಹಣೆಯನ್ನು ಜಿಲ್ಲಾಡಳಿತ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸಿತ್ತು. ಅರಣ್ಯೀಕರಣ ಹುಲ್ಲುಗಾವಲು ನಿರ್ಮಾಣವಾಗಿ ಸೌಂದರ್ಯವೂ ಇಮ್ಮಡಿಸಿತ್ತು.
2022ರಲ್ಲಿ ಎಸ್‌ಟಿಪಿ ಟ್ಯಾಂಕ್‌ಗಳನ್ನು ನಿರ್ಮಿಸಿ ಕೊಳಚೆ ನೀರು ಬರದಿರಲು ಕ್ರಮವಹಿಸುವುದಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಹೇಳಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.
ತೇಲುಕಳೆ ಆವರಿಸಿದ್ದು ಜಲಚರಗಳೇ ಇಲ್ಲವಾಗಿವೆ
ಸುಮಾರು 400 ವರ್ಷಗಳ ಹಿಂದೆ ಚಾಮುಂಡಿ ಬೆಟ್ಟದಿಂದ ಹರಿದು ಬರುವ ನೀರನ್ನು ಹಿಡಿದಿಡಲು ಬೆಟ್ಟದ 4 ಕಡೆಯೂ ಒಂದೊಂದು ಕೆರೆಯನ್ನು ನಿರ್ಮಿಸಲಾಗಿತ್ತು. ತಿಪ್ಪರಾಯ ಎಂಬ ಸೇನಾದಂಡನಾಯಕ ತನ್ನ ಕುದುರೆಗಳಿಗೆ ಇಲ್ಲಿ ನೀರು ಕುಡಿಸುತ್ತಿದ್ದುದರಿಂದ ಹಾಗೂ ಅವನೇ ಈ ಕೆರೆ ನಿರ್ವಹಣೆ ಮಾಡಿದ್ದರಿಂದ ಅವನ ಹೆಸರಿನಿಂದಲೇ ಕರೆಯಲಾಗುತ್ತಿದೆ. ತಿಪ್ಪರಾಯನ ಕೆರೆ ತಿಪ್ಪಯ್ಯನ ಕೆರೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.