ಎಂಪಿ.ಇಡಿ ಮೂರನೇ ಸೆಮಿಸ್ಟರ್ ವಾಲಿಬಾಲ್ ಆಂತರಿಕ ಪರೀಕ್ಷೆಯ ಅಂಕಗಳನ್ನು ಅಲ್ಲಲ್ಲಿ ತಿದ್ದಿರುವುದು
ಮೈಸೂರು: ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ದ್ವಿತೀಯ ವರ್ಷದ ಎಂಪಿ.ಇಡಿ ಆರು ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಉದ್ದೇಶಪೂರ್ವಕವಾಗಿ ತಿದ್ದಿದ ಆರೋಪ ಕೇಳಿಬಂದಿದ್ದು, ಎರಡು ತಿಂಗಳ ಹೋರಾಟದ ಬಳಿಕ ಅವರಿಗೆ ಅಂಕಗಳು ಮರಳಿ ದೊರೆತಿವೆ. ವಿಭಾಗದಲ್ಲಿ ದಲಿತ ಸಮುದಾಯದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.
ಇದೇ ವರ್ಷ ಜನವರಿಯಲ್ಲಿ ಎಂಪಿ.ಇಡಿ ತೃತೀಯ ಸೆಮಿಸ್ಟರ್‌ಗಳ ಆಂತರಿಕ ಪರೀಕ್ಷೆಗಳು ನಡೆದಿದ್ದವು. ಪರೀಕ್ಷೆ ವೇಳೆ ವಿಭಾಗದ ಒಟ್ಟು 23 ವಿದ್ಯಾರ್ಥಿಗಳನ್ನೂ ನಿಗದಿತ ನಮೂನೆಯಲ್ಲಿ ನಮೂದಿಸಲಾಗಿತ್ತು. ವಾಲಿಬಾಲ್ ವಿಷಯದಲ್ಲಿ 6 ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ತಿದ್ದಲಾಗಿತ್ತು. ಒಟ್ಟು 30 ಅಂಕಗಳಿಗೆ ನಡೆದ ಪರೀಕ್ಷೆ ವೇಳೆ ನೀಡಲಾದ ಅಂಕಕ್ಕೂ, ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ನಮೂದಿಸಲಾದ ಅಂಕಗಳಿಗೂ 5–6 ಅಂಕಗಳ ವ್ಯತ್ಯಾಸ ಕಂಡುಬಂದಿತ್ತು.
ಇದು ಗಮನಕ್ಕೆ ಬರುತ್ತಲೇ ಆರು ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಕುಲಸಚಿವ ಹಾಗೂ ಕುಲಪತಿಗೆ ದೂರು ಸಲ್ಲಿಸಿದ್ದರು. ನಂತರದಲ್ಲಿ ಪರಿಶೀಲನೆ ನಡೆಸಿದ್ದು, ಆಂತರಿಕ ಅಂಕಗಳು ಬದಲಾಗಿರುವುದು ಕಂಡುಬಂದಿದೆ. ಇದೀಗ ವಿಶ್ವವಿದ್ಯಾಲಯವು ಆರೂ ವಿದ್ಯಾರ್ಥಿಗಳಿಗೆ ಅವರು ಗಳಿಸಿದ್ದ ಮೂಲ ಅಂಕಗಳನ್ನು ನೀಡಿದೆ. ಅಂಕ ತಿದ್ದಿದ ಆರೋಪ ಎದುರಿಸುತ್ತಿರುವ ಉಪನ್ಯಾಸಕರಿಗೂ ನೋಟಿಸ್ ನೀಡಲಾಗಿದೆ.
ದಲಿತರೇ ಟಾರ್ಗೆಟ್?: ‘ಅಂಕ ದೌರ್ಜನ್ಯ’ಕ್ಕೆ ಒಳಗಾದ ಒಳಗಾದ ಆರು ಮಂದಿ ಕೂಡ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ವಿಭಾಗದ ಮುಖ್ಯಸ್ಥ ಸಿ. ವೆಂಕಟೇಶ್ ಹಾಗೂ ಕೆಲವು ಉಪನ್ಯಾಸಕರು ಸಮುದಾಯದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿದ್ದಾರೆ’ ಎಂಬುದು ವಿದ್ಯಾರ್ಥಿಗಳ ಆರೋಪ. ‘ಅಂಕ ತಿದ್ದಿದ ಆರೋಪ ಎದುರಿಸುತ್ತಿರುವ ಅತಿಥಿ ಉಪನ್ಯಾಸಕ ಎಸ್. ಅಶೋಕ್ ಹಾಗೂ ಅದಕ್ಕೆ ಸಹಕರಿಸಿದ ವಿಭಾಗದ ಮುಖ್ಯಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎನ್ನುವುದು ಅವರ ಆಗ್ರಹ.
‘ಅಕ್ರಮವನ್ನು ಪ್ರಶ್ನಿಸಿದ್ದಕ್ಕೆ ನಮ್ಮ ವಿರುದ್ದ ಕೆಲವು ಸಹಪಾಠಿಗಳನ್ನೇ ಎತ್ತಿ ಕಟ್ಟಿದ್ದಾರೆ. ಹಿಂದೊಮ್ಮೆ ಅನ್ಯಾಯವನ್ನು ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರಿಂದ ಬೆದರಿಕೆ ಒಡ್ಡುವ ಪ್ರಯತ್ನ ಸಹ ನಡೆದಿದೆ’ ಎಂದು ಹೇಳುತ್ತಾರೆ.
‘ಪರೀಕ್ಷೆ ಸಂದರ್ಭ ಸಾಕಷ್ಟು ರೀತಿಯಲ್ಲಿ ಅಕ್ರಮಗಳು ನಡೆಯುತ್ತಿವೆ. ಆಂತರಿಕ ಪರೀಕ್ಷೆಗಳ ಅಂಕಗಳನ್ನು ಪೆನ್ಸಿಲ್‌ನಲ್ಲಿ ನಮೂದಿಸಿ ನಂತರದಲ್ಲಿ ತಿದ್ದಲಾಗುತ್ತಿದೆ. ಪರೀಕ್ಷೆ ನಕಲು ನಡೆಯುತ್ತಿದೆ. ಚಿನ್ನದ ಪದಕ, ಅಂಕಗಳ ನೀಡಿಕೆಯಲ್ಲೂ ವ್ಯತ್ಯಾಸಗಳಾಗುತ್ತಿವೆ. ಎಲ್ಲವನ್ನೂ ಕೂಲಂಕಷವಾಗಿ ತನಿಖೆಗೆ ಒಳಪಡಿಸಬೇಕು. ಪರೀಕ್ಷಾ ಕಾರ್ಯಗಳಿಗೆ ವಿಭಾಗದವರಲ್ಲದ ಸಿಬ್ಬಂದಿಯನ್ನು ನಿಯೋಜಿಸಿ ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು’ ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.
ವೆಂಕಟೇಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.