ADVERTISEMENT

ಮೈಸೂರು | ನಿವೃತ್ತರ ಪಿಂಚಣಿ ಹಣಕ್ಕೆ ಪರದಾಟ!: ಸರ್ಕಾರದ ಮೊರೆ ಹೋಗಲು ನಿರ್ಣಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 4:38 IST
Last Updated 17 ಅಕ್ಟೋಬರ್ 2025, 4:38 IST
ಮೈಸೂರು ವಿ.ವಿ ಕ್ರಾಫರ್ಡ್ ಭವನದಲ್ಲಿ ಬುಧವಾರ ಶಿಕ್ಷಣ ಮಂಡಳಿ ಸಭೆಯಲ್ಲಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್‌ ಮಾತನಾಡಿದರು. ಹಣಕಾಸು ಅಧಿಕಾರಿ ರೇಖಾ, ವಿಧಾನ ಪರಿಷತ್‌ ಸದಸ್ಯ ವಿವೇಕಾನಂದ, ಕುಲಸಚಿವ ನಾಗರಾಜು ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ
ಮೈಸೂರು ವಿ.ವಿ ಕ್ರಾಫರ್ಡ್ ಭವನದಲ್ಲಿ ಬುಧವಾರ ಶಿಕ್ಷಣ ಮಂಡಳಿ ಸಭೆಯಲ್ಲಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್‌ ಮಾತನಾಡಿದರು. ಹಣಕಾಸು ಅಧಿಕಾರಿ ರೇಖಾ, ವಿಧಾನ ಪರಿಷತ್‌ ಸದಸ್ಯ ವಿವೇಕಾನಂದ, ಕುಲಸಚಿವ ನಾಗರಾಜು ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ   

ಮೈಸೂರು: ಹಣಕಾಸಿನ ಬಿಕ್ಕಟ್ಟಿನಿಂದಾಗಿ ಮೈಸೂರು ವಿಶ್ವವಿದ್ಯಾಲಯದ 1900ಕ್ಕೂ ಹೆಚ್ಚು ನಿವೃತ್ತ ಉದ್ಯೋಗಿಗಳಿಗೆ ಕಳೆದ ಆರು ತಿಂಗಳಿಂದಲೂ ಪಿಂಚಣಿ ನೀಡಿಕೆಯಲ್ಲಿ ವ್ಯತ್ಯಯ ಆಗಿದ್ದು, ಬುಧವಾರ ನಡೆದ ವಿ.ವಿ. ಶಿಕ್ಷಣ ಮಂಡಳಿ ಸಭೆಯಲ್ಲಿಯೂ ಇದೇ ವಿಚಾರ ಚರ್ಚೆ ಆಯಿತು. ಹೆಚ್ಚಿನ ಅನುದಾನಕ್ಕೆ ಸರ್ಕಾರದ ಮೊರೆ ಹೋಗಲು ಸಭೆಯು ನಿರ್ಣಯಿಸಿತು.

‘ವಿಶ್ವವಿದ್ಯಾಲಯದ ನಿವೃತ್ತ ಸಿಬ್ಬಂದಿಗೆ 2019ರವರೆಗೂ ಸರ್ಕಾರವೇ ಪಿಂಚಣಿ ನೀಡುತ್ತಿತ್ತು. ನಂತರದಲ್ಲಿ ಸರ್ಕಾರ ಶೇ 50ರಷ್ಟು ವೆಚ್ಚ ಮಾತ್ರ ಭರಿಸುತ್ತಿತ್ತು. ಈ ವರ್ಷ ಜನವರಿಯಿಂದ ಅದೂ ಬಂದ್‌ ಆಗಿದೆ. 2019ರಿಂದ ಈವರೆಗೆ ಪಿಂಚಿಣಿದಾರರಿಗೆ ವಿ.ವಿ.ಯ ಎಲ್‌ಐಸಿ ಹಣದಿಂದ ₹280 ಕೋಟಿಯಷ್ಟು ಹಣ ಭರಿಸಿದ್ದು, ಸದ್ಯ ಆ ಹಣವೂ ಖಾಲಿಯಾಗಿದೆ. ಹೀಗಾಗಿ ಪಿಂಚಣಿ ನೀಡಲು ಹಣವಿಲ್ಲ. ಪಿಂಚಣಿದಾರರಿಗೆ ಪ್ರತಿ ತಿಂಗಳಿಗೆ ₹9.5 ಕೋಟಿಯಂತೆ ವರ್ಷಕ್ಕೆ ₹107 ಕೋಟಿ ಅನುದಾನ ಬೇಕಿದೆ ’ ಎಂದು ಹಣಕಾಸು ಅಧಿಕಾರಿ ರೇಖಾ ಸಭೆಗೆ ಮಾಹಿತಿ ನೀಡಿದರು.

ವಿಧಾನಪರಿಷತ್‌ ಸದಸ್ಯ ಕೆ.ವಿವೇಕಾನಂದ, ‘ನಿವೃತ್ತರಿಗೆ ಪಿಂಚಣಿ ನೀಡುವುದು ಆದ್ಯ ಕರ್ತವ್ಯ. ಈ ಬಗ್ಗೆ ಮನವಿ ನೀಡಿದಲ್ಲಿ ಸರ್ಕಾರದ ಗಮನಕ್ಕೆ ತಂದು, ಅನುದಾನಕ್ಕೆ ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

‘ಮೈಸೂರು ವಿ.ವಿ.ಗೆ ವರ್ಷಕ್ಕೆ ₹157 ಕೋಟಿ ಅನುದಾನ ಬೇಕು. ಈ ವರ್ಷಕ್ಕೆ ಸರ್ಕಾರವು ₹50 ಕೋಟಿ ಅನುದಾನ ನೀಡಿದೆ’ ಎಂದು ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್‌ ಮಾಹಿತಿ ನೀಡಿದರು.

ಏಕಮಾದರಿ ಪರೀಕ್ಷೆಗೆ ಒಲವು: ಮೈಸೂರು ವಿ.ವಿ.ವ್ಯಾಪ್ತಿಯಲ್ಲಿ 2025–26ನೇ ಸಾಲಿನಿಂದ ಎಫ್‌ಸಿಬಿಸಿಎಸ್‌ ಬದಲಿಗೆ ಸಿಬಿಎಸ್‌ಎಸ್‌ ಪದ್ಧತಿಯನ್ನು ಅಳವಡಿಸಿಕೊಂಡು ಏಕರೂಪದ ಪರೀಕ್ಷೆ ಜಾರಿಗೆ ಚಿಂತನೆ ನಡೆದಿದ್ದು, ಆರು ವಿಭಾಗಗಳ ಮುಖ್ಯಸ್ಥರೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಕುಲಪತಿ ಹೇಳಿದರು.

ಮಾನಸಗಂಗೋತ್ರಿಯ ವಾಣಿಜ್ಯಶಾಸ್ತ್ರ ವಿಭಾಗದ ಡೀನ್‌ ಪ್ರತಿಕ್ರಿಯಿಸಿ, ‘ವಿಭಾಗದಲ್ಲಿ ಎಫ್‌ಸಿಬಿಸಿಎಸ್‌ ಪದ್ಧತಿಯನ್ನೇ ಮುಂದುವರಿಸಿದರೆ ಅನುಕೂಲ. ಎಂ.ಕಾಂ. ಸಾಮಾನ್ಯ ಹಾಗೂ ಎಂ.ಕಾಂ. ಹಣಕಾಸು ಸೇವೆ ವಿಷಯಗಳಿಗೆ ಹಳೇ ಪದ್ಧತಿಯನ್ನೇ ಮುಂದುವರಿಸಬೇಕು’ ಎಂದು ಕೋರಿದರು.

ದತ್ತಿ ಸ್ಥಾಪನೆ: ವಿಧಾನ ಪರಿಷತ್‌ ಸದಸ್ಯ ಕೆ. ವಿವೇಕಾನಂದ ತಮ್ಮ ಪೋಷಕರಾದ ಕರೀಗೌಡ– ಚಿಕ್ಕತಾಯಮ್ಮ ಹೆಸರಿನಲ್ಲಿ ₹2 ಲಕ್ಷ ದತ್ತಿ ನಿಧಿ ನೀಡಿದ್ದು, ಇದರಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿ ವರ್ಷ ರಾಜಕೀಯ ವಿಜ್ಞಾನ ವಿಭಾಗದಲ್ಲಿ ಗರಿಷ್ಠ ಅಂಕ ಪಡೆಯುವ ವಿದ್ಯಾರ್ಥಿಗೆ ಚಿನ್ನದ ಪದಕ ನೀಡಲು ಸಭೆಯು ಒಪ್ಪಿಗೆ ಸೂಚಿಸಿತು.

‘ಮಾನಸಗಂಗೋತ್ರಿಯ ವಿವಿಧ ವಿಭಾಗಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಕೊರತೆ ಇರುವ ಕಡೆ, ಆರಂಭದಲ್ಲೇ ಅನ್ಯ ವಿ.ವಿ. ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡಬೇಕು. ಅರ್ಜಿ ಆಹ್ವಾನ ಸಂದರ್ಭವೇ ಈ ಮಾಹಿತಿ ನೀಡಿದರೆ, ಬೇರೆ ವಿ.ವಿ.ಗಳಿಂದ ವಿದ್ಯಾರ್ಥಿಗಳು ಬರುತ್ತಾರೆ’ ಎಂದು ನಾಮನಿರ್ದೇಶಿತ ಸದಸ್ಯ ರವಿ ಸಲಹೆ ನೀಡಿದರು.

‘ಈ ವರ್ಷ ಮಾನಸಗಂಗೋತ್ರಿಯ ಎಲ್ಲ ವಿಭಾಗಗಳಿಗೆ ವಿದ್ಯಾರ್ಥಿಗಳು ನಿಗದಿತ ಪ್ರಮಾಣದಲ್ಲಿ ಪ್ರವೇಶ ಪಡೆದಿದ್ದು, ಯಾವ ವಿಭಾಗವನ್ನೂ ಮುಚ್ಚಿಲ್ಲ’ ಎಂದು ಕುಲಪತಿ ಹೇಳಿದರು.

ಸಂಶೋಧನೆ ಪೂರ್ಣಕ್ಕೆ ಡಿಸೆಂಬರ್ ಗಡುವು

ಮೈಸೂರು: ‘ಪಿಎಚ್‌ಡಿಗೆ ನೋಂದಾಯಿಸಿಕೊಂಡು ಕಳೆದ 5ರಿಂದ 7 ವರ್ಷದಿಂದ ವಿಶ್ವವಿದ್ಯಾಲಯದಿಂದ ಫೆಲೋಶಿಪ್‌ ಪಡೆಯುತ್ತಿರುವ 69 ವಿದ್ಯಾರ್ಥಿಗಳು ತಮ್ಮ ಸಂಶೋಧನೆ ಪೂರ್ಣಕ್ಕೆ ಡಿಸೆಂಬರ್ 31ರ ಗಡುವು ನೀಡಲಾಗಿದೆ. ಅವರು ಅವಧಿಯೊಳಗೆ ಪ್ರಬಂಧ ಸಲ್ಲಿಸದಿದ್ದಲ್ಲಿ ನೋಂದಣಿ ರದ್ದುಪಡಿಸಲಾಗುವುದು’ ಎಂದು ಕುಲಸಚಿವ ನಾಗರಾಜು ಮಾಹಿತಿ ನೀಡಿದರು. ಸಭೆಯಲ್ಲಿ ಈ ವಿಷಯ ಚರ್ಚೆ ಆಯಿತು. ‘ಮೈಸೂರು ವಿ.ವಿ.ಯಲ್ಲಿ ಪ್ರಸ್ತುತ 1164 ವಿದ್ಯಾರ್ಥಿಗಳು ಪಿಎಚ್‌ಡಿ ಮಾಡುತ್ತಿದ್ದಾರೆ. ಇವರಲ್ಲಿ 70 ಮಂದಿಯೂ ಐದಕ್ಕೂ ಹೆಚ್ಚು ವರ್ಷದಿಂದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮಾರ್ಗದರ್ಶಕರೂ ಕೂಡಾ ವಾರ್ಷಿಕ ವರದಿಯಲ್ಲಿ ತೃಪ್ತಿಕರವಾಗಿದೆ ಎಂದು ತಿಳಿಸುತ್ತ ಬಂದಿದ್ದಾರೆ. ಆದರೆ ಸಂಶೋಧಕರು ಮಾತ್ರ ಮಹಾ ಪ್ರಬಂಧವನ್ನು ಮಂಡಿಸಿಲ್ಲ. ಹೀಗಾಗಿ ಅಂತಿಮ ಅವಕಾಶ ನೀಡಲು ತೀರ್ಮಾನಿಸಲಾಗಿದೆ’ ಎಂದು ಕುಲಸಚಿವರು ಮಾಹಿತಿ ನೀಡಿದರು. ಸಂಶೋಧಕರಿಗೆ ಮಾರ್ಗದರ್ಶನ ನೀಡುವ ಪ್ರಾಧ್ಯಾಪಕರು ಕಠಿಣ ಆಗಿರಬೇಕು. ಆರು ತಿಂಗಳಿಗೆ ಒಮ್ಮೆ ಆಯಾ ವಿಭಾಗಗಳ ಮುಖ್ಯಸ್ಥರು ಸಂಶೋಧಕರ ಕಾರ್ಯಗಳ ಆಂತರಿಕ ಮೌಲ್ಯಮಾಪನ ಮಾಡಬೇಕು ಎನ್ನುವ ಸಲಹೆಗಳು ಹೇಳಿಬಂದವು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪಿಎಚ್‌ಡಿ ಪಡೆಯುತ್ತಿರುವವರ ಸಂಶೋಧನಾ ಗುಣಮಟ್ಟದ ಬಗ್ಗೆಯೂ ಚರ್ಚೆ ನಡೆಯಿತು.