
ಮೈಸೂರು: ‘ನಕಲು ಅಂಕಪಟ್ಟಿ ಪಡೆಯಲು ₹18 ಸಾವಿರ ಹಣ ಕೇಳುತ್ತಿದ್ದಾರೆ’ ಎಂದು ಆರೋಪಿಸಿ ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಡಿ.ಸಿ.ಪ್ರಭಾ ಕಾಫರ್ಡ್ ಭವನದ ಮುಂಭಾಗದ ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
‘ನಾನು ಬಿ.ಇಡಿ ಪ್ರವೇಶ ಪಡೆಯಲು ಬಯಸಿದ್ದೆ. ಅದಕ್ಕಾಗಿ ವಿಶ್ವವಿದ್ಯಾಲಯದಲ್ಲೇ ಉಳಿದಿರುವ ನನ್ನ ಎಸ್ಸೆಸ್ಸೆಲ್ಸಿ ಹಾಗೂ ಪದವಿ ಅಂಕಪಟ್ಟಿ ನೀಡುವಂತೆ ವಿನಂತಿ ಮಾಡಿದ್ದೆ. ಆದರೆ, ಬಾಕಿ ಶುಲ್ಕ ಪಾವತಿಸಿದರೆ ಅಂಕಪಟ್ಟಿ ನೀಡುವಾಗಿ ತಿಳಿಸಿದರು. ನಾನು ಈಗಾಗಲೇ ಬಾಕಿ ಶುಲ್ಕವನ್ನು ಪಾವತಿಸಿದ್ದೇನೆ ಎಂದು ಅದರ ರಸೀದಿ ತೋರಿಸಲು ಸಿದ್ಧಳಿದ್ದರೂ ಅದನ್ನು ಪರಿಶೀಲಿಸಲಿಲ್ಲ. ಅದಕ್ಕಾಗಿ ಪ್ರತಿಭಟನೆ ನಡೆಸಬೇಕಾಯಿತು’ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ವಿದ್ಯಾರ್ಥಿನಿಯನ್ನು ಕರೆದುಕೊಂಡು ವಿವಿಯಲ್ಲಿ ವಿಚಾರಿಸಿ ಮಾಹಿತಿ ಪಡೆದಿದ್ದಾರೆ.
‘ವಿದ್ಯಾರ್ಥಿನಿ 2021ರಲ್ಲೇ ಮಾನಸಗಂಗೋತ್ರಿಯಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಆದರೆ, ಅನಾರೋಗ್ಯದ ಕಾರಣ ದ್ವಿತೀಯ ವರ್ಷದ ಪ್ರವೇಶ ಶುಲ್ಕವನ್ನು ನಿಧಾನವಾಗಿ ಪಾವತಿಸುತ್ತೇನೆ ಎಂದು ತಿಳಿಸಿದ್ದರು. ಹಾಗಾಗಿ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿತ್ತು ಅಲ್ಲದೆ, ಅವರ ಖಾತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನವು ಜಮೆಯಾಗಿದೆ. ಆ ಹಣದಲ್ಲಿಯೂ ಬಾಕಿ ಪಾವತಿಸಿಲ್ಲ. ಮೂರು ವರ್ಷದ ನಂತರ ಇದೀಗ ಬಂದು ಅಂಕಪಟ್ಟಿ ಕೇಳುತ್ತಿದ್ದಾರೆ. ಬಾಕಿ ಶುಲ್ಕ ಪಾವತಿಸಿದರೆ ಮಾತ್ರ ಅಂಕಪಟ್ಟಿ ನೀಡುವುದಾಗಿ ವಿಭಾಗದವರು ತಿಳಿಸಿದ್ದಾರೆ. ಅದಕ್ಕೆ ಕೋಪಗೊಂಡು ವಿದ್ಯಾರ್ಥಿನಿ ಪ್ರತಿಭಟನೆ ನಡೆಸಿದ್ದಾರೆ’ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.