ಮೈಸೂರು: ಸಾಮಾಜಿಕ ಕಾರ್ಯಕರ್ತ ಎಸ್.ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ, ಹಿಂದೆ ಮುಡಾ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ವಿರುದ್ಧ ಪ್ರಕರಣ ದಾಖಲಿಸುವಂತೆ ಇಲ್ಲಿನ ಎಂಟನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಫ್‌ಎಂಸಿ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ.
‘ಡಿ.ಬಿ.ನಟೇಶ್ ಅಕ್ರಮಗಳ ತನಿಖೆಗೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ. ದೂರಿಗೆ ಸಂಬಂಧಿಸಿ ತನಿಖೆ ನಡೆಸಿ, ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದರು. ಈ ಬಗ್ಗೆ ವಿಚಾರಣೆಗೆ ನಾನು ಹಾಜರಾಗದಂತೆ ಮಾಡಲು ನನ್ನ ಮೇಲೆ ಹಲ್ಲೆ ನಡೆಸಲು ನಟೇಶ್ ರೌಡಿಗಳನ್ನು ಕಳಿಸಿದ್ದರು. ಈ ಕುರಿತು ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಸಿದ್ದೆ. 2022ರ ಮಾರ್ಚ್ 10ರಂದು ಮುಡಾ ಆಯುಕ್ತರ ಕಚೇರಿಯಲ್ಲಿ ನಟೇಶ್ ಅವರನ್ನು ಭೇಟಿಯಾಗಿ ಅವರ ಆಡಿಯೊ ರೆಕಾರ್ಡ್ ಮಾಡುತ್ತಿದ್ದೆ. ಅದು ತಿಳಿದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದರು. ನಂತರ, ಸರ್ಕಾರಿ ಕೆಲಸಕ್ಕೆ ಅಡ್ಡಿ ಆರೋಪದಡಿ ಲಕ್ಷ್ಮಿಪುರಂ ಠಾಣೆಗೆ ನನ್ನ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ನ್ಯಾಯಾಲಯದ ಗಮನಸೆಳೆದು ಅವರ ವಿರುದ್ಧ ಸೂಕ್ತ ದಾಖಲೆಯನ್ನು ಸಲ್ಲಿಸಿದ್ದೆ’ ಎಂದು ಶ್ರೀನಿವಾಸ್ ತಿಳಿಸಿದರು.
ನ್ಯಾಯಾಲಯವು ನಟೇಶ್ ವಿರುದ್ಧ ಮೊಬೈಲ್ ಫೋನ್ ಕಳವು, ಪ್ರಾಣ ಬೆದರಿಕೆ, ಕೈಯಲ್ಲಿ ಹಲ್ಲೆ ಹಾಗೂ ಅಕ್ರಮ ತಡೆ ಆರೋಪದಲ್ಲಿ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ.
‘ನ್ಯಾಯಾಲಯದಿಂದ ಯಾವುದೇ ಆದೇಶ ಬಂದಿಲ್ಲ. ಬಂದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದು ಲಕ್ಷ್ಮಿಪುರಂ ಠಾಣೆ ಇನ್‌ಸ್ಪೆಕ್ಟರ್ ರವಿಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು. ದೂರುದಾರರ ಪರವಾಗಿ ಕೆ.ಎಚ್.ಪ್ರಸನ್ನ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.