ADVERTISEMENT

ಮೈಸೂರು | ಗ್ರಾಮದಲ್ಲಿ ಕಲೆ, ಕೌಶಲ, ಭಾಷೆಯ ಹುಟ್ಟು: ನಾಗೇಶ್ ಗರ್ಗೇಶ್ವರಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 3:24 IST
Last Updated 18 ಜನವರಿ 2026, 3:24 IST
ಜಗನ್ನಾಥ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರ (ಜೆಸಿಎಸಿ)ವು ಆಯೋಜಿಸಿರುವ ಮೈಸೂರು ಚಿತ್ರಸಂತೆಗೆ ಕೇಂದ್ರದ ಜಗನ್ನಾಥ ಶೆಣೈ ಚಾಲನೆ ನೀಡಿದರು
ಜಗನ್ನಾಥ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರ (ಜೆಸಿಎಸಿ)ವು ಆಯೋಜಿಸಿರುವ ಮೈಸೂರು ಚಿತ್ರಸಂತೆಗೆ ಕೇಂದ್ರದ ಜಗನ್ನಾಥ ಶೆಣೈ ಚಾಲನೆ ನೀಡಿದರು   

ಮೈಸೂರು: ಇಲ್ಲಿನ ಜಗನ್ನಾಥ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರ (ಜೆಸಿಎಸಿ)ವು ಆಯೋಜಿಸಿರುವ ಮೈಸೂರು ಚಿತ್ರಸಂತೆಗೆ ಕೇಂದ್ರದ ಜಗನ್ನಾಥ ಶೆಣೈ ಹಾಗೂ ಸಿಐಐನ ಅಧ್ಯಕ್ಷ ನಾಗೇಶ್ ಗರ್ಗೇಶ್ವರಿ ಚಾಲನೆ ನೀಡಿದರು.

ನಾಗೇಶ್ ಗರ್ಗೇಶ್ವರಿ ಮಾತನಾಡಿ, ‘ಜೆಸಿಎಸಿ ಕೇಂದ್ರವು ವಿನ್ಯಾಸ, ತಂತ್ರಜ್ಞಾನ, ಕಲೆ ಹಾಗೂ ಪರಿಸರ ಪ್ರೇಮದ ಸಂಗಮವಾಗಿದ್ದು, ಕಲಾ ಪ್ರೇಮಿಗಳ ನೆಚ್ಚಿನ ತಾಣವಾಗಲಿದೆ. ವಿದೇಶದಲ್ಲಿ ಕಲೆಗೆ ಹೆಚ್ಚಿನ ಪ್ರೋತ್ಸಾಹವಿದೆ. ಹೀಗಾಗಿ ಅವರು ಉತ್ತಮ ಜೀವನ ನಡೆಸುತ್ತಿದ್ದಾರೆ. ಭಾರತದಲ್ಲಿ ಆ ಸಂಸ್ಕೃತಿ ನಿಧಾನವಾಗಿ ಬರುತ್ತಿದೆ. ಕಲಾವಿದರನ್ನು ಗೌರವಿಸುವ ಕಾರ್ಯ ಹೆಚ್ಚಬೇಕು’ ಎಂದರು.

ರಂಗಕರ್ಮಿ ಪ್ರಸನ್ನ ಮಾತನಾಡಿ, ‘ಗ್ರಾಮ ಕೌಶಲ, ಭಾಷೆ, ಕಲೆ ಹುಟ್ಟುಹಾಕುತ್ತವೆ. ಅಲ್ಲಿಂದಲೇ ಮಹಾನ್‌ ಕಲಾವಿದರು, ದಾರ್ಶನಿಕರು ಸ್ಫೂರ್ತಿ ಪಡೆಯುತ್ತಾರೆ. ಅದನ್ನು ಮೇಲೆತ್ತುವ ಕೆಲಸ ನಗರ ಮಾಡಬೇಕು. ಈ ಕೇಂದ್ರವು ಗ್ರಾಮ ಮತ್ತು ನಗರವನ್ನು ಬೆಸೆಯುವ ಮಾಧ್ಯಮವಾಗಬೇಕು’ ಎಂದು ತಿಳಿಸಿದರು.

ADVERTISEMENT

ಎಡಿಸಿ ಪಿ.ಶಿವರಾಜು ಮಾತನಾಡಿ, ‘ಮನುಷ್ಯ ಆರ್ಥಿಕವಾಗಿ ಎಷ್ಟೇ ಮುಂದುವರಿದರೂ, ಕಲೆಯ ಆರಾಧನೆಯಷ್ಟೇ ಆತನಿಗೆ ಮಾನಸಿಕ ನೆಮ್ಮದಿ ನೀಡಬಲ್ಲದು. ಹೀಗಾಗಿ ಸಾಹಿತ್ಯ ಹಾಗೂ ಕಲೆಯನ್ನು ಬೆಂಬಲಿಸುವ ಕೆಲಸ ಮಾಡಬೇಕು. ದಸರಾ ಈ ಭಾಗದಲ್ಲೂ ಬೆಳೆಯಬೇಕು. ಜೆಸಿಎಸಿ ಕೇಂದ್ರದಲ್ಲೂ ಕಾರ್ಯಕ್ರಮ ಆಯೋಜಿಸಿ’ ಎಂದರು.

ಸಿಎಫ್‌ಟಿಆರ್‌ಐ ಮಾಜಿ ನಿರ್ದೇಶಕ ಡಾ.ವಿ.ಪ್ರಕಾಶ್, ಬಿ.ಎಸ್.ಪ್ರಶಾಂತ್ ಭಾಗವಹಿಸಿದ್ದರು.

ಖಾದಿ ಮಾರಾಟ: ಪ್ರದರ್ಶನದಲ್ಲಿ ಬದನವಾಳು ಹಾಗೂ ತಗಡೂರು ಖಾದಿ ಗಮನ ಸೆಳೆಯಿತು. ಹಲವರು ಬಟ್ಟೆ ಖರೀದಿಸಿ ಪ್ರೋತ್ಸಾಹಿಸಿದರು.

ಬದನವಾಳು ಹಾಗೂ ತಗಡೂರು ಖಾದಿ ಕೇಂದ್ರಗಳ ಅಭಿವೃದ್ಧಿಗಾಗಿ 2015ರಿಂದ ಸತ್ಯಾಗ್ರಹ ನಡೆದಿದ್ದು, ಸರ್ಕಾರ ₹ 40 ಕೋಟಿ ನೀಡುವ ಭರವಸೆ ನೀಡಿದ ಬಳಿಕ ಖಾದಿಗೆ ಮಾರುಕಟ್ಟೆಯ ಬಲ ತುಂಬಲು ‘ಕೊಳ್ಳುಗರ ಸತ್ಯಾಗ್ರಹ’ ಮುಂದುವರಿಸಿದ್ದು, ಪ್ರಥಮ ಭಾಗವಾಗಿ ಚಿತ್ರಸಂತೆಯಲ್ಲಿ ಮಾರಾಟ ಮಳಿಗೆ ತೆರೆಯಲಾಗಿತ್ತು.

ಚಿತ್ರಸಂತೆಯುದ್ದಕ್ಕೂ ವಿವಿಧ ಕಲಾಕೃತಿಗಳು ಗಮನಸೆಳೆದವು. ಕರಕುಶಲ ವಸ್ತುಗಳು, ಆಟಿಕೆಗಳು ಆಕರ್ಷಕವಾಗಿದ್ದವು. ವುಡ್‌ ಆರ್ಟ್‌, ವ್ಯಂಗ್ಯಚಿತ್ರ ರಚನೆ ಮಳಿಗೆಗಳು ಕುತೂಹಲ ಕೆರಳಿಸಿದವು. ಈಗಿನ ಟ್ರೆಂಡ್‌ಗೆ ಅನುಗುಣವಾಗಿ ಬ್ಯಾಗ್‌, ಶರ್ಟ್‌ಗಳ ಮೇಲೆ ರಚಿಸಿದ ಕಲಾಕೃತಿಗಳು ಹೆಚ್ಚಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.