ಮೈಸೂರು: ಇಲ್ಲಿನ ಸಿದ್ಧಾರ್ಥನಗರದಲ್ಲಿ ಚಾಮರಾಜೇಂದ್ರ ದೃಶ್ಯಕಲಾ ಸರ್ಕಾರಿ ಕಾಲೇಜು (ಕಾವಾ) ಬೋಧಕರ ಹುದ್ದೆ ಖಾಲಿ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.
ಇಲ್ಲಿನ ಸಯ್ಯಾಜಿರಾವ್ ರಸ್ತೆಯಲ್ಲಿದ್ದ ಕಾಲೇಜನ್ನು ಸಿದ್ಧಾರ್ಥನಗರದಲ್ಲಿರುವ ಭಾರತೀಯ ಪಠ್ಯಪುಸ್ತಕ ಮುದ್ರಣಾಲಯ ಆವರಣದ ಒಳಗೆ ನೂತನವಾಗಿ ನಿರ್ಮಿಸಲಾದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಕಲಿಕೆಗೆ ಪೂರಕವಾದ ಹಾಗೂ ಉತ್ತಮವಾದ ವಾತಾವರಣ ಅಲ್ಲಿದೆ. ಆದರೆ, ‘ಅತಿಥಿ ಉಪನ್ಯಾಸಕರ’ ಮೂಲಕವೇ ನಿರ್ವಹಿಸಲಾಗುತ್ತಿದೆ.
ರಾಜ್ಯ ಸರ್ಕಾರದ ಏಕೈಕ ಕಲಾ ಶಿಕ್ಷಣ ನೀಡುವ ಪ್ರಥಮ ದರ್ಜೆ ಕಾಲೇಜಾಗಿದ್ದು, 1982ರಲ್ಲಿ ಸ್ಥಾಪನೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದೆ. ಕಲಾಸಕ್ತ ವಿದ್ಯಾರ್ಥಿಗಳಲ್ಲಿ ಇರುವ ಕಲಾತ್ಮಕ ಶಕ್ತಿಯನ್ನು ಸಂವರ್ಧಿಸಿ ಪ್ರೋತ್ಸಾಹಿಸುವುದು ಹಾಗೂ ದೃಶ್ಯಕಲೆಗಳ ಎಲ್ಲಾ ಮಾಧ್ಯಮಗಳನ್ನು ಹಾಗೂ ಮತ್ತು ಆಯಾಮಾಗಳನ್ನು ಪರಿಚಯಿಸುವುದು ಕಾಲೇಜಿನ ಉದ್ದೇಶವಾಗಿದೆ.
ಇಲ್ಲಿ ಚಿತ್ರಕಲೆ, ಶಿಲ್ಪಕಲೆ, ಅಚ್ಚುಕಲೆ, ಅನ್ವಯಕಲೆ, ಛಾಯಾಚಿತ್ರ ಮತ್ತು ಛಾಯಾಪತ್ರಿಕೋದ್ಯಮ ಹಾಗೂ ಕಲಾ ಇತಿಹಾಸ ವಿಭಾಗಗಳಲ್ಲಿ ಬಿವಿಎ ಪದವಿಯನ್ನು ಹಾಗೂ ಚಿತ್ರಕಲೆ, ಅಚ್ಚುಕಲೆ ಮತ್ತು ಶಿಲ್ಪಕಲೆ ವಿಭಾಗಗಳಲ್ಲಿ ಸ್ನಾತಕೋತ್ತರ (ಎಂಎಫ್‌ಎ) ಪದವಿ ಶಿಕ್ಷಣವನ್ನು ನೀಡುತ್ತಿದೆ. ಈ ಕಾಲೇಜು ಮೈಸೂರು ವಿಶ್ವವಿದ್ಯಾಲಯಕ್ಕೆ ಶಾಶ್ವತ ಸಂಯೋಜನೆಯನ್ನು ಹೊಂದಿದ್ದು, ನ್ಯಾಕ್ (ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ)ನಿಂದ ‘ಬಿ+’ ಮಾನ್ಯತೆಯನ್ನು ಗಳಿಸಿದೆ. ಬಹಳಷ್ಟು ದೊಡ್ಡ ದೊಡ್ಡ ಕಲಾವಿದರನ್ನು ರೂಪಿಸಿದ ಹೆಗ್ಗಳಿಕೆ ಈ ಕಾಲೇಜಿನದು.
ಏನಾಗಿದೆ?: ಇಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 22 ಬೋಧಕರ ಹುದ್ದೆ ಮಂಜೂರಾಗಿದ್ದು, ಈ ಪೈಕಿ ಐವರಷ್ಟೆ ಕಾಯಂ ನೌಕರರಿದ್ದಾರೆ. ನಾಲ್ವರು ಅತಿಥಿ ಉಪನ್ಯಾಸಕರಿದ್ದಾರೆ. ಅವರಿಗೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಕಾಲೇಜುಗಳವರಿಗೆ ನೀಡುವ ವೇತನವನ್ನು ಕೊಡಬೇಕು ಎಂಬ ಬೇಡಿಕೆಯು ಇಂದಿಗೂ ಈಡೇರಿಲ್ಲ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಅದಕ್ಕೆ ಅನುಮೋದನೆಯ ಮೊಹರು ಬಿದ್ದಿಲ್ಲ. ಡೀನ್ ಹುದ್ದೆಗೆ ಕಲಾವಿದರೊಬ್ಬರನ್ನು ನೇಮಿಸಬೇಕು ಎಂಬ ಬೇಡಿಕೆಯೂ ಹಾಗೆಯೇ ಉಳಿದಿದೆ. ಡೀನ್ ಹುದ್ದೆಯು ಹಲವು ವರ್ಷಗಳಿಂದ ಪ್ರಭಾರದಲ್ಲೇ ಮುಂದುವರಿದಿದೆ. ಸದ್ಯ, ಮೈಸೂರಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಕೇಂದ್ರ ಕಚೇರಿ ಹೊಂದಿರುವ ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜ್ ಅವರಿಗೆ ‘ಪ್ರಭಾರ’ ವಹಿಸಲಾಗಿದೆ.
ಈ ಕಾಲೇಜಿಗೆ ಸಿದ್ಧಾರ್ಥನಗರದ ಹೊಸ ಜಿಲ್ಲಾಧಿಕಾರಿ ಕಚೇರಿ (ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣ)ದ ಪಕ್ಕದ ರಸ್ತೆಯ ಮೂಲಕ ಸಂಪರ್ಕಕ್ಕೆ ಮುಖ್ಯ ರಸ್ತೆ ಇದೆ. ಅದು ಹೋದ ವರ್ಷವಷ್ಟೆ ಡಾಂಬರು ಕಂಡಿದೆ. ಆದರೆ, ಕಾಲೇಜಿನ ಒಳಾವರಣದಲ್ಲಿ ಕೆಂಪುಮಣ್ಣಿನ ರಸ್ತೆ ಇದೆ. ಅದು ಮಳೆಯಾದಾಗ ಕೆಸರು ಗದ್ದೆಯಂತಾಗುತ್ತದೆ. ಇದರಿಂದ ಅಲ್ಲಿನ ನೌಕರರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿರುವುದು ಕಂಡುಬಂದಿದೆ. ಈ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಬೇಕು ಎಂದು ಮನವಿ ಮಾಡುತ್ತಾರೆ ವಿದ್ಯಾರ್ಥಿಗಳು.
ಪ್ರಸ್ತಾವ ಸಲ್ಲಿಕೆ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಭಾರ ಡೀನ್, ‘ಕಾವಾದಲ್ಲಿನ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಪ್ರಸ್ತಾವ ಸಲ್ಲಿಸಲಾಗಿದ್ದು, ಕೆಪಿಎಸ್‌ಸಿಗೆ ಹೋಗಿದೆ. ಪರಿಶಿಷ್ಟ ಜಾತಿ ಒಳಮೀಸಲಾತಿ ಅಂತಿಮಗೊಳ್ಳುವವರೆಗೆ ನೇಮಕಾತಿ ಮಾಡಬಾರದೆಂದು ಸರ್ಕಾರದಿಂದ ಆದೇಶವಾಗಿದೆ. ಹೀಗಾಗಿ, ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಎರಡು ರೀಡರ್ ಹಾಗೂ 3 ಉಪನ್ಯಾಸಕರ ಹುದ್ದೆ ಬ್ಯಾಕ್‌ಲಾಗ್ ಇದ್ದು, ಮೊದಲು ಭರ್ತಿ ಮಾಡಬೇಕಾಗುತ್ತದೆ’ ಎಂದು ತಿಳಿಸಿದರು.
ಕಾವಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಕೆಲವು ಸಮಸ್ಯೆಗಳಿರುವುದು ಗೊತ್ತಿದ್ದು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು.-ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.