
ಮೈಸೂರು: ಇಲ್ಲಿನ ಮೈಸೂರು ಮಹಾನಗರಪಾಲಿಕೆಯಿಂದ 2025–26ನೇ ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳು ಪುಸ್ತಕದಲ್ಲೇ ಉಳಿದಿವೆ!
ಮತ್ತೊಂದು ಬಜೆಟ್ ಮಂಡನೆಯ ಹೊಸ್ತಿಲಲ್ಲಿದ್ದರೂ, ಹೋದ ವರ್ಷ ಹೇಳಲಾಗಿದ್ದ ಹಲವು ಕಾರ್ಯಕ್ರಮಗಳು ಅನುಷ್ಠಾನದ ಹಂತಕ್ಕೂ ಬಂದೇ ಇಲ್ಲ.
ಈ ನಗರ ಸ್ಥಳೀಯ ಸಂಸ್ಥೆಯಲ್ಲಿ ಸದ್ಯ ಜನಪ್ರತಿನಿಧಿಗಳಿಲ್ಲ. ಹೋದ ವರ್ಷವೂ ಆಗಿನ ಆಡಳಿತಾಧಿಕಾರಿಯೂ ಆಗಿದ್ದ ಪ್ರಾದೇಶಿಕ ಆಯುಕ್ತ ಡಿ.ಎಸ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 20ರಂದು ನಡೆದಿದ್ದ ಸಭೆಯಲ್ಲಿ ಒಟ್ಟು ₹ 1,228.72 ಕೋಟಿ ಗಾತ್ರದ ಬಜೆಟ್ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗಿತ್ತು.
ಕಾಂಕ್ರೀಟ್ ರಸ್ತೆ ನಿರ್ಮಾಣ, ಮಹಾರಾಣಿ ಕಾಲೇಜು ಎದುರು ಸ್ಕೈವಾಕ್ ನಿರ್ಮಾಣ, ಖ್ಯಾತ ಕಾದಂಬರಿಕಾರ ಆರ್.ಕೆ.ನಾರಾಯಣ್ ನಿವಾಸಕ್ಕೆ ಪ್ರವಾಸಿ ತಾಣದ ಸ್ಪರ್ಶ ಮೊದಲಾದ ಯೋಜನೆಗಳನ್ನು ಬಜೆಟ್ ಒಳಗೊಂಡಿತ್ತು. ಅದು ಇಂದಿಗೂ ‘ಆ’ ಬಜೆಟ್ ಪುಸ್ತಕದಲ್ಲೇ ಇದೆಯಷ್ಟೆ!
ಸಿದ್ಧಗೊಳ್ಳಲಿಲ್ಲ ರಂಗಮಂದಿರ
ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಲು, ನಗರದ ಪುರಭವನದ ಆವರಣದಲ್ಲಿ ಬಯಲು ರಂಗಮಂದಿರ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇದರಿಂದ ಕಲಾವಿದರಿಗೆ ಅನುಕೂಲದ ಜೊತೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಮನರಂಜನೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಲಾಗಿತ್ತು. ಈ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆಗಳು ನಡೆದೇ ಇಲ್ಲ.
ಪಾಲಿಕೆಯ ವಲಯ ಕಚೇರಿಗಳ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ.
ಸಮಸ್ಯೆ ನಿವಾರಣೆ ಆಗಲೇ ಇಲ್ಲ
ನಗರದಲ್ಲಿ ವಾಹನಗಳ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿರುವುದು ಸುಗಮ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಪುರಭವನದ ಆವರಣದಲ್ಲಿ ಪಾರ್ಕಿಂಗ್ ಹಾಗೂ ದೇವರಾಜ ಅರಸು ರಸ್ತೆಯಲ್ಲಿ ಪಿಪಿಪಿ ಮಾದರಿಯಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಅನುಷ್ಠಾನಕ್ಕೆ ಉದ್ದೇಶಿಸಲಾಗಿದೆ ಎಂದು ಘೋಷಿಸಲಾಗಿತ್ತು. ಇದು ಅನುಷ್ಠಾನಕ್ಕೆ ಬಂದಿಲ್ಲ; ಟ್ರಾಫಿಕ್ ಸಮಸ್ಯೆಯಾಗಲಿ, ವಾಹನ ನಿಲುಗಡೆಗೆ ಎದುರಾಗುತ್ತಿರುವ ತೊಂದರೆಯಾಗಲಿ ನಿವಾರಣೆಯೇ ಆಗಿಲ್ಲ.
ಪುರಭವನದ ಆವರಣದಲ್ಲಿ ನಿರ್ಮಿಸಲಾಗಿರುವ ವಾಹನ ನಿಲುಗಡೆ ತಾಣ ಬಳಸಿಕೊಳ್ಳುವ ಕೆಲಸವೂ ಪಾಲಿಕೆಯಿಂದ ಆಗಿಲ್ಲ. ಪರಿಣಾಮ, ವಾರಾಂತ್ಯ, ಸರಣಿ ರಜಾ ದಿನಗಳು, ವರ್ಷಾಂತ್ಯ ಹಾಗೂ ದಸರಾ ಮಹೋತ್ಸವದ ಸಂದರ್ಭದಲ್ಲಿ ಬಹಳಷ್ಟು ಕಿರಿಕಿರಿಯನ್ನು ಜನರು ಎದುರಿಸುತ್ತಿದ್ದಾರೆ.
ಪ್ರಯತ್ನವಾಗಿದೆ
‘ನಗರದಲ್ಲಿ ಉತ್ಪಾದನೆ ಆಗುತ್ತಿರುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಯೋಜನೆ ಕೈಗೊಂಡು ಪ್ರಸ್ತುತ ಶೇ 40ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಎಲ್ಲ ತ್ಯಾಜ್ಯವನ್ನೂ ವಿಲೇವಾರಿ ಮಾಡಿ, ವಿದ್ಯಾರಣ್ಯಪುರಂನ ಘನತ್ಯಾಜ್ಯ ಸಂಸ್ಕರಣಾ ಘಟಕದ ಸ್ಥಳವನ್ನು ತ್ಯಾಜ್ಯದಿಂದ ಇಂಧನ ಯೋಜನೆಗೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.ಗೆ ವಹಿಸಲಾಗುವುದು’ ಎಂದು ತಿಳಿಸಲಾಗಿತ್ತು. ಇದರ ಅನುಷ್ಠಾನಕ್ಕೆ ಪ್ರಯತ್ನಗಳು ನಡೆದಿವೆ.
ನಿರ್ಮಾಣವಾಗದ ಟ್ರ್ಯಾನ್ಸ್‌ಫರ್ ಘಟಕ
ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ 535 ಟಿಪಿಡಿ ಘನತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಪ್ರತಿ ವಲಯ ಕಚೇರಿಯಲ್ಲಿ 2ನೇ ಹಂತದ ತ್ಯಾಜ್ಯ ವಿಲೇವಾರಿಗೆ ಪ್ರಸ್ತುತ ಮೂರು ಕಾಂಪ್ಯಾಕ್ಟರ್ ವಾಹನಗಳನ್ನು ಬಳಸಲಾಗುತ್ತಿದೆ. ಇಂದಿನಿಂದ ತ್ಯಾಜ್ಯ ವಿಲೇವಾರಿಗೆ ಸಾಕಷ್ಟು ಸಮಯ ತೆಗೆದುಕೊಳ್ಳುವ ಕಾರಣ, ಕಡಿಮೆ ಸಮಯದಲ್ಲಿ ತ್ಯಾಜ್ಯ ಸಂಗ್ರಹಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸ್ವಚ್ಛ ಭಾರತ ಮಿಷನ್–2.0 ಅನುದಾನ, ರಾಜ್ಯ ಸರ್ಕಾರದ ಅನುದಾನ ಹಾಗೂ ಪಾಲಿಕೆಯ ವಂತಿಗೆಯನ್ನು ಸೇರಿಸಿ ₹9.90 ಕೋಟಿ ಅನುದಾನದಲ್ಲಿ 16 ಕ್ಯೂ.ಮೀ. ಸಾಮರ್ಥ್ಯದ 3 ಟ್ರ್ಯಾನ್ಸ್‌ಫರ್ ಘಟಕಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಲಾಗಿತ್ತು. ಇದು ಕೂಡ ಬಜೆಟ್ ಪುಸ್ತಕದಲ್ಲೇ ಉಳಿದಿದೆ.
ಘನ ತ್ಯಾಜ್ಯವನ್ನು ಆಧುನಿಕ ರೀತಿಯಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸಲು ವಿಶ್ವಸಂಸ್ಥೆಯ ಯುಎನ್‌ಐಡಿಒ (ಯುನೈಟೆಡ್ ನೇಷನ್ಸ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಆರ್ಗನೈಜೇಷನ್) ಪುರಸ್ಕೃತ ಅನುದಾನದಲ್ಲಿ ‘ವಿನ್‌ಡ್ರಾ ಟರ್ನರ್’ ಯಂತ್ರಗಳನ್ನು ಖರೀದಿಸಲಾಗುವುದು ಎಂದು ತಿಳಿಸಲಾಗಿತ್ತು. ಇದು ಕೂಡ ಈವರೆಗೂ ಸಾಧ್ಯವಾಗಿಲ್ಲ ಎನ್ನುತ್ತವೆ ಮೂಲಗಳು.
₹ 1,228.72 ಕೋಟಿ ಗಾತ್ರದ ಬಜೆಟ್ ಮಂಡನೆಯಾಗಿತ್ತು ಹೋದ ವರ್ಷವೂ ಆಡಳಿತಾಧಿಕಾರಿ ಈ ಬಾರಿಯೂ ಜನಪ್ರತಿನಿಧಿಗಳಿಲ್ಲ
ಮೇಲ್ದರ್ಜೆಗೇರಲಿಲ್ಲ
ಮೈಸೂರಿನ ಯಾದವಗಿರಿಯಲ್ಲಿರುವ ಖ್ಯಾತ ಬರಹಗಾರ ದಿ.ಆರ್.ಕೆ.ನಾರಾಯಣ್ ನಿವಾಸವನ್ನು ಪ್ರವಾಸ ತಾಣವನ್ನಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಹಾಲಿ ಇರುವ ವಸ್ತುಸಂಗ್ರಹಾಲಯವನ್ನು ಮೇಲ್ದರ್ಜೆಗೇರಿಸಿ ಆಕರ್ಷಣೀಯವಾಗಿಸಿ ಪ್ರವಾಸಿಗರನ್ನು ಸೆಳೆಯಲು ಉದ್ದೇಶಿಸಲಾಗಿದೆ. ಇದನ್ನು ಸಿಎಸ್ಆರ್ ಅನುದಾನದಲ್ಲಿ ನಿರ್ವಹಿಸಲು ತೀರ್ಮಾನಿಸಲಾಗಿದೆ ಎಂದು ಪಾಲಿಕೆ ಹೇಳಿತ್ತು. ಇದು ಕಾರ್ಯಗತಗೊಂಡಿಲ್ಲ.
ಈಜುಕೊಳ ಮೈದಳೆಯಲಿಲ್ಲ
ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಈಜುಕೊಳ ನಿರ್ಮಾಣದ ಬಗ್ಗೆ 2022–23ನೇ ಸಾಲಿನ ಬಜೆಟ್‌ನಲ್ಲೂ ಪ್ರಸ್ತಾಪಿಸಲಾಗಿತ್ತು. ಆದರೆ ಸ್ಥಳ ಲಭ್ಯವಾಗದ ಕಾರಣದಿಂದ ಆ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಸ್ಥಳಾವಕಾಶ ಇರುವ ಬಗ್ಗೆ ಖಚಿತಪಡಿಸಿಕೊಳ್ಳಲಾಗಿದ್ದು ಪ್ರಸಕ್ತ ಸಾಲಿನಲ್ಲಿ ನಿರ್ಮಾಣಕ್ಕೆ ಯೋಜಿಸಲಾಗಿದೆ ಎಂದು ತಿಳಿಸಲಾಗಿತ್ತು. ಈ ಈಜುಕೊಳ ಈವರೆಗೂ ಮೈದಳೆದಿಲ್ಲ.
‘ಮಹಾರಾಣಿ’ಯರಿಗೆ ಸ್ಕೈವಾಕ್ ಬರಲಿಲ್ಲ...
ಮೈಸೂರು ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಲಾ ಹಾಗೂ ವಾಣಿಜ್ಯ ಕಾಲೇಜು ಉದ್ಘಾಟಿಸುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸ್ಕೈವಾಕ್ ನಿರ್ಮಿಸುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದರು. ಅದರಂತೆ ಜೆಎಲ್‌ಬಿ ರಸ್ತೆಯಲ್ಲಿ ಪಿಪಿಪಿ (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಸ್ಕೈವಾಕ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮಹಾನಗರಪಾಲಿಕೆ ತಿಳಿಸಿತ್ತು. ಇದರ ಕೆಲಸ ಕೂಡ ಆರಂಭಗೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.