ADVERTISEMENT

ಮೈಸೂರು | ಮಹಾನಗರ ಪಾಲಿಕೆಗೆ ಸಾವಿರ ಕೋಟಿ ಮೀಸಲಿಡಿ: ಎಂ.ಲಕ್ಷ್ಮಣ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 2:51 IST
Last Updated 21 ಜನವರಿ 2026, 2:51 IST
<div class="paragraphs"><p>ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್‌ ಮುಖಂಡರು ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿದರು ಪ್ರಜಾವಾಣಿ ಚಿತ್ರ</p></div>

ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್‌ ಮುಖಂಡರು ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿದರು ಪ್ರಜಾವಾಣಿ ಚಿತ್ರ

   

ಮೈಸೂರು: ‘ಬೃಹತ್ ಮೈಸೂರು ಮಹಾನಗರ ಪಾಲಿಕೆಗೆ ಮೂಲಸೌಕರ್ಯ ಒದಗಿಸಲು ಬಜೆಟ್‌ನಲ್ಲಿ ಸಾವಿರ ಕೋಟಿ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕಾಂಗ್ರೆಸ್‌ ನಿಯೋಗವು ಮನವಿ ಸಲ್ಲಿಸಿತು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಮಾತನಾಡಿ, ‘ಕಾಂಗ್ರೆಸ್‌ ಪಕ್ಷ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಬೃಹತ್ ಮೈಸೂರು ಮಹಾನಗರ ಪಾಲಿಕೆ ಮೂಲಕ ನಗರವನ್ನು 341 ಚದರ ಕಿ.ಮೀಗೆ ವಿಸ್ತರಿಸಿದೆ. ಅದಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರ್ಕಾರಕ್ಕೆ ತಿಳಿಸಬೇಕು’ ಎಂದರು.

ADVERTISEMENT

‘ವಿವಿಧ ಕಡೆ ನಾಲ್ಕು ಕಸ ಸಂಸ್ಕರಣಾ ಘಟಕ ಆರಂಭಿಸಬೇಕು. ರಸ್ತೆ, ಒಳಚರಂಡಿ, ಪೈಪ್‌ಲೈನ್‌ಗಳಿಗೆ ಆದ್ಯತೆ ನೀಡಬೇಕು. ಶಾಲಾ, ಕಾಲೇಜುಗಳಿಗೆ ಹಾಗೂ ಮೈದಾನಕ್ಕೆ ಈಗಲೇ ಜಾಗ ಮೀಸಲಿಡಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮಾರ್ಗೋಪಾಯ ಕಂಡುಕೊಳ್ಳಬೇಕು. ಕೇವಲ ಸಿಗ್ನಲ್‌ ಲೈಟ್‌ ಅಳವಡಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದು ಹೇಳಿದರು.

‘120 ವಾರ್ಡ್ ರಚನೆಯಾಗಬೇಕು. 20 ವಲಯ ಕಚೇರಿಗಳು ಬೇಕಾಗುತ್ತವೆ. ಕುಡಿಯುವ ನೀರಿಗಾಗಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಬೇಕು. ಬೃಹತ್ ಬಸ್ ಡಿಪೊ, ಪಾರ್ಕಿಂಗ್, ಪೊಲೀಸ್‌ ಠಾಣೆ, ಸರ್ಕಾರಿ ಆಸ್ಪತ್ರೆಗೆ ಜಾಗ ಗುರುತಿಸಬೇಕು. ನಾಗನಹಳ್ಳಿ, ಕಳಸ್ತವಾಡಿ, ಲಕ್ಷ್ಮಿಪುರಂವನ್ನು ಮಹಾನಗರಪಾಲಿಕೆಗೆ ಸೇರಿಸಿಕೊಳ್ಳಬೇಕು’ ಎಂದರು. 

ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಮಾತನಾಡಿ, ‘ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿದೆ. ಕಸದ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು. ಶಾಲಾ, ಕಾಲೇಜು, ಮೈದಾನಗಳಿಗೆ ಮುಡಾದಿಂದ ಸಿಎ ಸೈಟ್‌ಗಳನ್ನು ಮೀಸಲಿಡಿ. ಚಾಮುಂಡಿ ಬೆಟ್ಟ ಮತ್ತು ಮೃಗಾಲಯದ ಬಳಿ ರಸ್ತೆ ಬದಿ ಅತಿಕ್ರಮಣ ಮಾಡಿ ಮಳಿಗೆ ನಿರ್ಮಿಸಿದ್ದಾರೆ. ಬೆಟ್ಟದ ಪಾದ ಹಾಗೂ ಮೇಲೆ ಅನಧಿಕೃತ ಮನೆ ನಿರ್ಮಾಣಗೊಂಡಿವೆ. ಅವನ್ನು ತೆರವುಗೊಳಿಸಬೇಕು’ ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ ಮಾತನಾಡಿ, ‘ಪಾಲಿಕೆಯು ಈಗಿರುವ ವ್ಯಾಪ್ತಿಗೆ ಸೌಲಭ್ಯ ಪೂರೈಸಲು ಹಣಕಾಸಿನ ತೊಂದರೆ ಅನುಭವಿಸುತ್ತಿದೆ. ಮತ್ತಷ್ಟು ವಿಸ್ತರಣೆಯಾದಾಗ ಅದಕ್ಕೆ ಬೇಕಾದ ಹಣಕಾಸಿನ ಕ್ರೋಢಿಕರಣದ ಬಗ್ಗೆ ಚಿಂತನೆ ನಡೆಸಿ, ಹಳೆ ಮೈಸೂರಿನ ಗತವೈಭವ ಉಳಿಸಿಕೊಂಡು ಅಭಿವೃದ್ಧಿ ಮಾಡಿ’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ‘ಹೊರ ವರ್ತುಲ ರಸ್ತೆಯಲ್ಲಿ 27 ಎಕರೆ ಜಮೀನನ್ನು ಕ್ರೀಡಾ ಚಟುವಟಿಕೆಗಳಿಗಾಗಿ ಮೈದಾನ ನಿರ್ಮಿಸಲು ಕ್ರೀಡಾ ಇಲಾಖೆಗೆ ನೀಡಲಾಗುತ್ತಿದೆ. ಯುಜಿಡಿ ಹಾಗೂ ಕಸ ವಿಲೇವಾರಿಗೆ ಆದ್ಯತೆ ನೀಡಲಾಗುವುದು. ಅದಕ್ಕಾಗಿ ₹ 800 ಕೋಟಿ ಅನುದಾನ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ತಿಳಿಸಿದ್ದೇವೆ. ಕಸ ವಿಲೇವಾರಿಗೆ ಹೆಚ್ಚಿನ ವಾಹನ ಖರೀದಿಸುವ ಯೋಜನೆಯಿದೆ’ ಎಂದರು.

ಮುಖಂಡರಾದ ರಾಕೇಶ್‌ ಪಾಪಣ್ಣ ಮಾತನಾಡಿ, ‘ಚಾಮುಂಡಿ ಬೆಟ್ಟವನ್ನು ಪ್ರತ್ಯೇಕ ಇಟ್ಟು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಇಡಿ ಎನ್ನುತ್ತಿದ್ದಾರೆ’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಬೆಟ್ಟದಲ್ಲಿನ ಎಲ್ಲಾ ಚಟುವಟಿಕೆಗಳನ್ನು ಪಾಲಿಕೆ ಮೂಲಕವೇ ಮಾಡಲಾಗುತ್ತಿದೆ. ಮಧ್ಯದಲ್ಲಿ ಒಂದು ಪ್ರದೇಶ ಬಿಡುವುದು ಸಮಂಜಸವಲ್ಲ. ಮುಖ್ಯಮಂತ್ರಿಗೂ ಗ್ರಾಮಸ್ಥರು ಮನವಿ ನೀಡಿದ್ದು, ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದರು.

ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಮುಡಾ ಆಯುಕ್ತ ರಕ್ಷಿತ್‌, ಕಾಂಗ್ರೆಸ್‌ ಮುಖಂಡರಾದ ಮಲ್ಲೇಶ್, ರೇವಣ್ಣ, ಭೈರಪ್ಪ, ಅಬ್ರಾರ್, ಮಹೇಶ್, ರಾಕೇಶ್ ಪಾಪಣ್ಣ, ರಾಮು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.