ಜೈಲು (ಪ್ರಾಧಿನಿಧಿಕ ಚಿತ್ರ)
– ಐಸ್ಟಾಕ್ ಚಿತ್ರ
ಮೈಸೂರು: ಪತ್ನಿ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎಂಬ ಆರೋಪ ಸಾಬೀತಾದ ಕಾರಣ ಪತಿಯೊಬ್ಬರಿಗೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ನಂಜನಗೂಡು ತಾಲ್ಲೂಕಿನ ದೇವಿರಮ್ಮ ಹಳ್ಳಿಯ ಚೈತ್ರಾನಂದ ಶಿಕ್ಷೆಗೆ ಒಳಗಾದ ಅಪರಾಧಿ. ಅವರು ಪತ್ನಿ ಸೌಮ್ಯಶ್ರೀ ಅವರಿಗೆ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದರು. ಇದರಿಂದ ನೊಂದು 2016ರ ಡಿ.27ರಂದು ಸೌಮ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಎಸಿಪಿ ಮಹಮ್ಮದ್ ಸುಜೀತ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಕೆ.ಎನ್.ರೂಪಾ ವಿಚಾರಣೆ ನಡೆಸಿ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ₹1.35 ಲಕ್ಷ ದಂಡ ವಿಧಿಸಿದ್ದಾರೆ. ಯೋಗೇಶ್ವರ ಬಿ.ಈ ಹಾಗೂ ಎ.ಎನ್. ಮಧು ಸರ್ಕಾರದ ಪರವಾಗಿ ವಾದಿಸಿದ್ದರು.
ಅನ್‌ಲೈನ್‌ನಲ್ಲಿ ₹30 ಲಕ್ಷ ವಂಚನೆ
ಮೈಸೂರು: ಆನ್‌ಲೈನ್ ವಂಚನೆಯಿಂದ ಸರ್ಕಾರಿ ಅಧಿಕಾರಿಯೊಬ್ಬರು ₹ 30 ಲಕ್ಷ ಕಳೆದುಕೊಂಡಿದ್ದಾರೆ.
‘ಅಧಿಕಾರಿಯ ಮೊಬೈಲ್‌ಗೆ ವಾಟ್ಸಆ್ಯಪ್ ಮೂಲಕ ಷೇರು ಮಾರುಕಟ್ಟೆ ಮಾಹಿತಿ ಬಂದಿದೆ. ನಂತರ ಅವರು ಟೆಲಿಗ್ರಾಂ ಮೂಲಕ ಗ್ಲೋಬಲ್ ಪ್ರೈಂ ಎಂಬ ಕಂಪನಿಯ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಾರೆ. ಆತ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿಕೊಂಡರೆ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿದ್ದ. ಇದನ್ನು ನಂಬಿದ ಅವರು ಹಂತಹಂತವಾಗಿ ₹ 30 ಲಕ್ಷ ಹೂಡಿಕೆ ಮಾಡಿ ಕಳೆದುಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರಿ ಅಧಿಕಾರಿಗೆ ಹಲ್ಲೆ: ದೂರು
ಮೈಸೂರು: ‘ಸರ್ಕಾರಿ ಕಚೇರಿ ಗೋಡೆ ಒತ್ತುವರಿ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾರೆ’ ಎಂಬ ಆರೋಪ ಸಂಬಂಧ ಸ್ಥಳೀಯ ನಿವಾಸಿ ತಿರುಮತಿ ವಿರುದ್ಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧಿಕಾರಿ ಮನು ಅವರು ದೂರು ನೀಡಿದ್ದಾರೆ.
‘ನಗರದ ಅಶೋಕಪುರಂ ರೈಲ್ವೆ ನಿಲ್ದಾಣದ ಬಳಿ ಸಂಸ್ಥೆಯ ಸಂಪನ್ಮೂಲ ಕೇಂದ್ರದ ಕಚೇರಿ ಇದ್ದು, ಕಚೇರಿಯ ಗೋಡೆಗೆ ಹೊಂದಿಕೊಂಡಂತೆ ಒತ್ತುವರಿ ಮಾಡಿಕೊಂಡಿದ್ದ ತಿರುಮತಿ, ಅಲ್ಲಿ ಹಸು ಸಾಕಾಣಿಕೆ ಮಾಡುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ
ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಂಚಾರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ
ಮೈಸೂರು: ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಬುಧವಾರದಿಂದ ಡಿ.30ರವರೆಗೆ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ.
‘ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರನ್ನು ನಿಯಂತ್ರಿಸಲು ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಿದ್ದೇವೆ. ಸಂಚಾರ ನಿಯಮ ಉಲ್ಲಂಘಿಸುವವರ ಕುರಿತು ಸಾರ್ವಜನಿಕರು ಮೊ.ಸಂ 9481100100
ಅಥವಾ ಪೊಲೀಸ್ ಸಹಾಯವಾಣಿ: 112ಗೆ ಮಾಹಿತಿ ನೀಡಬಹುದು’ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.