ADVERTISEMENT

ಅದ್ದೂರಿ ದಸರೆಗೆ ₹41 ಕೋಟಿ ವೆಚ್ಚ!: 8 ತಿಂಗಳ ಬಳಿಕ ‘ಲೆಕ್ಕ’ ಕೊಟ್ಟ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 15:18 IST
Last Updated 12 ಜೂನ್ 2025, 15:18 IST
<div class="paragraphs"><p>ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ಆನೆ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದ ದೃಶ್ಯ </p></div>

ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ಆನೆ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದ ದೃಶ್ಯ

   

-ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ಹೋದ ವರ್ಷ ವಿಜೃಂಭಣೆಯಿಂದ ನಡೆಸಲಾದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಬರೋಬ್ಬರಿ ₹ 41.69 ಕೋಟಿ ಖರ್ಚು ಮಾಡಲಾಗಿದೆ.

ADVERTISEMENT

ಜಿಲ್ಲಾಡಳಿತದಿಂದ ಇದೇ ಮೊದಲ ಬಾರಿಗೆ ಬಹಳ ವಿಳಂಬವಾಗಿ ಅಂದರೆ, ಎಂಟು ತಿಂಗಳ ನಂತರ ಖರ್ಚು–ವೆಚ್ಚದ ಮಾಹಿತಿಯನ್ನು ಗುರುವಾರ ಸಂಜೆ ಬಿಡುಗಡೆ ಮಾಡಲಾಗಿದೆ.

ರಾಜ್ಯ ಸರ್ಕಾರದಿಂದ ₹ 25 ಕೋಟಿ ಅನುದಾನ ನೀಡಲಾಗಿತ್ತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ₹ 10 ಕೋಟಿ ಬಂದಿತ್ತು. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಂದ ಪ್ರಾಯೋಜಕತ್ವದ ಮೂಲಕ ₹ 2.15 ಕೋಟಿ ಸಂಗ್ರಹವಾಗಿತ್ತು. ಯುವದಸರಾ, ಮೆರವಣಿಗೆ, ಪಂಜಿನ ಕವಾಯತು ಟಿಕೆಟ್‌ಗಳು ಮತ್ತು ‘ಗೋಲ್ಡ್‌ ಕಾರ್ಡ್‌’ಗಳ ಮಾರಾಟದಿಂದ ₹ 4.76 ಕೋಟಿ ಸೇರಿದಂತೆ ಒಟ್ಟು ₹ 41.91 ಕೋಟಿ ಸಂಗ್ರಹವಾಗಿತ್ತು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

18 ಉಪ ಸಮಿತಿಗಳಿಗೆ ₹ 31.27 ಕೋಟಿ ಬಿಡುಗಡೆ ಮಾಡಲಾಗಿತ್ತು. ಉತ‌್ಸವಕ್ಕೆ ಅಗತ್ಯವಾದ ಸಿವಿಲ್ ಹಾಗೂ ವಿದ್ಯುತ್‌ ಕಾಮಗಾರಿಗಳಿಗೆ ₹ 5.91 ಕೋಟಿ ಕೊಡಲಾಗಿತ್ತು. ಚಾಮರಾಜನಗರಕ್ಕೆ ₹ 1.75 ಕೋಟಿ, ಮಂಡ್ಯಕ್ಕೆ ₹2 ಕೋಟಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ₹ 75 ಲಕ್ಷ ಹಾಗೂ ‘ ‘ಪ್ರಭುತ್ವ ಮತ್ತು ಸಂವಿಧಾನದ ಆಶಯ’ ಕುರಿತು ರಾಜ್ಯಮಟ್ಟದ ಕಾರ್ಯಾಗಾರ ಆಯೋಜನೆಗೆ ಹುಣಸೂರು ಉಪವಿಭಾಗಾಧಿಕಾರಿಗೆ ₹ 1 ಲಕ್ಷ ನೀಡಲಾಗಿತ್ತು ಎಂದು ತಿಳಿಸಿದೆ.

ಈ ಬಾರಿಯ ದಸರಾ ಮಹೋತ್ಸವಕ್ಕೆ ಸಿದ್ಧತೆ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ಸಭೆಯನ್ನು ಜೂನ್‌ 26ರಂದು ವಿಧಾನಸೌಧದಲ್ಲಿ ನಿಗದಿಪಡಿಸಲಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.