ADVERTISEMENT

ಮೈಸೂರು ದಸರಾ: ಕಾಡಿನ ಮಕ್ಕಳ ಕುಣಿತ, ಸವಿಯೂಟ

ಹೋಳಿಗೆ ಸವಿದ ಮಾವುತ, ಕಾವಾಡಿಗಳ ಕುಟುಂಬ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:28 IST
Last Updated 15 ಸೆಪ್ಟೆಂಬರ್ 2025, 5:28 IST
<div class="paragraphs"><p>ಮೈಸೂರಿನ ಅರಮನೆಯ ಟೆಂಟ್‌ ಶಾಲೆಯಲ್ಲಿ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಾವುತ–ಕಾವಾಡಿಗರ ಮಕ್ಕಳು </p></div>

ಮೈಸೂರಿನ ಅರಮನೆಯ ಟೆಂಟ್‌ ಶಾಲೆಯಲ್ಲಿ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಾವುತ–ಕಾವಾಡಿಗರ ಮಕ್ಕಳು

   

ಪ್ರಜಾವಾಣಿ ಚಿತ್ರ 

ಮೈಸೂರು: ನಗರದ ಅರಮನೆಯಲ್ಲಿ ಭಾನುವಾರ ದಸರಾ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಕುಟುಂಬದವರು ಹೋಳಿಗೆ ಉಪಾಹಾರ ಸವಿದರೆ, ಟೆಂಟ್‌ ಶಾಲೆಯಲ್ಲಿ ಮಕ್ಕಳು ನಲಿದರು. 

ADVERTISEMENT

ಅರಮನೆ ಮಂಡಳಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೋಳಿಗೆ ಬಡಿಸಿದರೆ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್‌ ತುಪ್ಪ ಬಡಿಸಿ ನೆರವಾದರು. ಬಳಿಕ ಮಾವುತರೊಂದಿಗೆ ಕುಳಿತು ಉಪಾಹಾರ ಸವಿದರು.

ರವೆ ಇಡ್ಲಿ, ದೋಸೆ, ಉಪ್ಪಿಟ್ಟು, ಉದ್ದಿನ ವಡೆ, ಪೊಂಗಲ್‌, ಸಾಗು ಸೇರಿದಂತೆ 10ಕ್ಕೂ ಹೆಚ್ಚು ಭಕ್ಷ್ಯಗಳನ್ನು ಚಿಣ್ಣರು, ಮಹಿಳೆಯರು, ಕುಟುಂಬದವರಿಗೆ ಬಡಿಸಲಾಯಿತು. 

ನಲಿದ ಮಕ್ಕಳು:

ಮಾವುತರು ಹಾಗೂ ಕಾವಾಡಿಗಳ ಮಕ್ಕಳಿಗೆ ‘ಶಾಲಾ ಕಲಿಕೆ’ ತಪ್ಪಿಹೋಗದಂತೆ ಅರಮನೆ ಅಂಗಳದಲ್ಲಿ ಆರಂಭವಾಗಿರುವ ‘ಟೆಂಟ್‌ ಶಾಲೆ’ಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿಣ್ಣರು ನಲಿದರು. ಈ ವೇಳೆ ಅರಮನೆ ವೇದಿಕೆಯಲ್ಲಿ ನಮಗೂ ಅವಕಾಶ ಕೊಡಬೇಕು ಎಂದು ಕೋರಿದರು. ಅದಕ್ಕೆ ಸಚಿವರು ಸಮ್ಮತಿಸಿದರು.  

ಅರಮನೆ ಮಂಡಳಿಯ ಸಹಕಾರದೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೈಸೂರು ದಕ್ಷಿಣ ವಲಯವು ನಡೆಸುತ್ತಿರುವ ಶಾಲೆ, ಆಯುಷ್‌ ಇಲಾಖೆಯ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಹಾಗೂ ಜೆಎಸ್‌ಎಸ್‌ ಆಸ್ಪತ್ರೆಯ ಆರೋಗ್ಯ ತಪಾಸಣಾ ಶಿಬಿರಕ್ಕೆ ಮಹದೇವಪ್ಪ ಚಾಲನೆ ನೀಡಿದರು.

ಜೆಎಸ್‌ಎಸ್‌ ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಷಕ ಸಿಬ್ಬಂದಿ ಮಾವುತರು ಹಾಗೂ ಕಾವಾಡಿಗಳಿಗೆ ಆರೋಗ್ಯ ಉಚಿತ ತಪಾಸಣೆ ಮಾಡಿದರು. ರಕ್ತದೊತ್ತಡ, ಮಧುಮೇಹ ಹಾಗೂ ಇತರ ಸಮಸ್ಯೆಗಳನ್ನು ಪರಿಶೀಲಿಸಿ ಅಗತ್ಯ ಸಲಹೆಯನ್ನು ನೀಡಿದರು. ಆಯುಷ್‌ನಿಂದ ‘ಪಂಚಕರ್ಮ’ ಚಿಕಿತ್ಸೆಯನ್ನು ನೀಡಲಾಯಿತು.

ಮಕ್ಕಳೊಂದಿಗೆ ಹೋಳಿಗೆ ಉಪಾಹಾರ ಸವಿದ ಮಾವುತರು ಮತ್ತು ಕಾವಾಡಿಗರು 

ತಿಂಗಳಾದ ಮೇಲೆ ಚಾಲನೆ 

‘ಟೆಂಟ್‌ ಶಾಲೆ’ಯು ತಿಂಗಳ ಹಿಂದೆಯೇ ಆರಂಭವಾದರೂ ಉದ್ಘಾಟನೆ ದೊರೆತಿರಲಿಲ್ಲ. ಆರಂಭದ ವೇಳೆಯಲ್ಲಿಯೇ ಅಧಿಕೃತವಾಗಿ ಉದ್ಘಾಟನೆ ಆಗುವುದು ವಾಡಿಕೆ.   ರಜಾ ದಿನವಾದ ಭಾನುವಾರವೇ ಶಾಲೆಗೆ ಚಾಲನೆ ನೀಡಲಾಯಿತು. ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಬಂದಿದ್ದರು. ಮಕ್ಕಳಿಗೆ ಸಮವಸ್ತ್ರ ಪಠ್ಯ ನೋಟ್ ಪುಸ್ತಕ ಲೇಖನಿ ಸಾಮಗ್ರಿ ವಿತರಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.