ಮೈಸೂರು: ನಾಡಹಬ್ಬ ದಸರೆಯ ವಿದ್ಯುತ್ ದೀಪಾಲಂಕಾರವು 136 ಕಿ.ಮೀ ರಸ್ತೆ ಹಾಗೂ 118 ವೃತ್ತಗಳಲ್ಲಿ ಜಗಮಗಿಸಲಿದ್ದು, ವಿದ್ಯುತ್ ದೀಪಗಳು ನಗರಕ್ಕೆ ಮೆರುಗು ಹೆಚ್ಚಿಸಲಿವೆ.
ಅರಮನೆ ಮಂಡಳಿ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿದ್ಯುತ್ ದೀಪಾಲಂಕಾರ, ಡ್ರೋಣ್ ಪ್ರದರ್ಶನದ ಪೋಸ್ಟರ್ ಹಾಗೂ ವಿಡಿಯೊ ಟೀಸರ್ ಬಿಡುಗಡೆ ಮಾಡಿದರು.
80 ಪ್ರತಿಕೃತಿಗಳು, 51 ಬೆಳಕಿನ ಕಮಾನುಗಳು ಇರಲಿದ್ದು, ಆಲ್ಬರ್ಟ್ ವಿಕ್ಟರ್, ಸಯ್ಯಾಜಿರಾವ್, ಡಿ.ದೇವರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ, ಕೃಷ್ಣರಾಜ, ಜಯಚಾಮರಾಜೇಂದ್ರ, ಚಾಮರಾಜೇಂದ್ರ, ಆಯುರ್ವೇದಿಕ್ ಕಾಲೇಜು, ಜೆಎಸ್‌ಎಸ್ ವಿದ್ಯಾಪೀಠ, ಎಲ್‌ಐಸಿ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ವೈಭವ ಅನಾವರಣಗೊಳ್ಳಲಿದೆ.
ದೀಪಾಲಂಕಾರಕ್ಕೆ 300 ಕೆ.ವಿಯ, 2,57,520 ಯುನಿಟ್ ವಿದ್ಯುತ್ ಬಳಕೆ ಆಗಲಿದೆ.
3 ಸಾವಿರ ಡ್ರೋಣ್‌ಗಳು:
ಕಳೆದ ಬಾರಿ 1,500 ಡ್ರೋಣ್ ಬಳಸಿ ಪ್ರದರ್ಶನ ನೀಡಲಾಗಿತ್ತು. ಈ ಬಾರಿ 3 ಸಾವಿರ ಡ್ರೋಣ್‌ಗಳು ಸೆ.28, 29 ಮತ್ತು ಅ.1, 2ರಂದು ಚಿತ್ತಾರ ಸೃಷ್ಟಿಸಲಿವೆ.
ಸುರಕ್ಷತೆಗೂ ಆದ್ಯತೆ ನೀಡಲಾಗಿದ್ದು, ದೀಪಾಲಂಕಾರದ ಕಂಬ ಮುಟ್ಟದೆ, ಅಂತರ ಕಾಯ್ದುಕೊಳ್ಳುವುದು, ಕಂಬಗಳ ಬಳಿ ಫೋಟೊ, ವಿಡಿಯೊ ಶೂಟ್ ಮಾಡುವುದನ್ನು ನಿಷೇಧಿಸಲಾಗಿದೆ. ತೊಂದರೆ ಆದಲ್ಲಿ ಸಹಾಯವಾಣಿ 1912 ಸಂಪರ್ಕಿಸುವಂತೆ ಕೋರಲಾಗಿದೆ.
ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು, ಎಸ್‌ಇ ಸುನೀಲ್ ಸೇರಿದಂತೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.