ADVERTISEMENT

ಲೈವ್‌ನಲ್ಲೂ ಹೊಳೆದ ಮೈಸೂರು ದಸರಾ: 1.33 ಕೋಟಿ ದಾಖಲೆಯ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 6:17 IST
Last Updated 4 ಅಕ್ಟೋಬರ್ 2025, 6:17 IST
ಟಿ.ಕೆ. ಹರೀಶ್‌
ಟಿ.ಕೆ. ಹರೀಶ್‌   

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕಾರ್ಯಕ್ರಮಗಳು ‘ನೇರಪ್ರಸಾರ’ದಲ್ಲೂ ಹೊಳೆದಿವೆ. 

ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾದ ಲೈವ್‌ನಲ್ಲಿ ಉತ್ತಮ ವೀಕ್ಷಣೆ ದಾಖಲಾಗಿದೆ. ಎಲ್ಲ ವೇದಿಕೆಗಳಲ್ಲಿ (ಕ್ರಾಸ್ ಪೋಸ್ಟಿಂಗ್‌ ಸೇರಿದಂತೆ) ಒಟ್ಟು ದಾಖಲೆಯ 1.33 ಕೋಟಿ ವೀಕ್ಷಣೆಯನ್ನು ಕಂಡಿದೆ. ಇದು ಹೋದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ್ದಾಗಿದೆ. ಹೋದ ವರ್ಷ 97 ಲಕ್ಷ ಮಂದಿ ನೋಡಿದ್ದರು.

ಜಿಲ್ಲಾಡಳಿತದಿಂದ ಬಿಡುಗಡೆ ಮಾಡಲಾಗಿದ್ದ, ದಸರೆಯ ಅಧಿಕೃತ ಜಾಲತಾಣಕ್ಕೆ (https://www.mysoredasara.gov.in) ಸೆ.5ರಿಂದ ಅ.2ರವರೆಗೆ 3.5.50 ಲಕ್ಷ ವೀವ್ಸ್‌ ಬಂದಿದೆ. ಲೈವ್ ಸ್ಟ್ರೀಮ್ ಅನ್ನು 36 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ADVERTISEMENT

ಮೈಸೂರು ದಸರಾ, ಸೆಸ್ಕ್‌ ಹಾಗೂ ಸಂಬಂಧಿಸಿದ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇನ್‌ಸ್ಟಗ್ರಾಂನ ಪ್ರತಿ ಪೋಸ್ಟ್‌ಗಳೂ ಸರಾಸರಿ 2 ಲಕ್ಷದಿಂದ 4 ಲಕ್ಷದವರೆಗೆ ವೀಕ್ಷಣೆ ಪಡೆದಿದ್ದು, ಇದು ನೆಟ್ಟಿಗರ ಬಲವಾದ ಪಾಲ್ಗೊಳ್ಳುವಿಕೆಯನ್ನು ಸಾಕ್ಷೀಕರಿಸಿದೆ. ಒಟ್ಟು 90 ಲಕ್ಷಕ್ಕೂ ಹೆಚ್ಚು ವೀಕ್ಷಣೆಯ ಕೊಡುಗೆ ನೀಡಿದೆ.

ವಿವರಕ್ಕಾಗಿ ಭೇಟಿ:

ದಸರಾ ಜಾಲತಾಣವನ್ನು ನಿತ್ಯ ಸರಾಸರಿ 80ಸಾವಿರದಿಂದ 1.20 ಲಕ್ಷ ವೀಕ್ಷಣೆಗಳು ಬಂದಿವೆ. ಟಿಕೆಟ್ ಹಾಗೂ ಮಾರಾಟಕ್ಕೆ ಸಂಬಂಧಿಸಿದ ಪ್ರಕಟಣೆಗಳು, ಕಾರ್ಯಕ್ರಮಗಳ ದಿನಾಂಕ ವಿವರ, ಲೈವ್-ಇವೆಂಟ್ ಮತ್ತು ಸ್ಟ್ರೀಮಿಂಗ್ ಪುಟಗಳನ್ನು ಹೆಚ್ಚು ಜನರು ವೀಕ್ಷಿಸಿದ್ದಾರೆ.

ಯುವ ದಸರೆಯನ್ನು 25 ಲಕ್ಷ ಮಂದಿ ಲೈವ್‌ನಲ್ಲೇ ನೋಡಿದ್ದಾರೆ. ಅಲ್ಲಿನ ಕಾರ್ಯಕ್ರಮಗಳನ್ನು ಸೆ.23 ಹಾಗೂ 24ರಂದು ಹೆಚ್ಚಿನ ಮಂದಿ ವೀಕ್ಷಿಸಿದ್ದಾರೆ. ಅರ್ಜುನ್‌ ಜನ್ಯ ಹಾಗೂ ಪ್ರೀತಂ ನೀಡಿದ ಪ್ರದರ್ಶನಕ್ಕೆ ಹೆಚ್ಚಿನ ವೀಕ್ಷಣೆ ಸಿಕ್ಕಿದೆ.

ಆಯುಧ ಪೂಜೆ, ವಿಜಯದಶಮಿ ಆಚರಣೆಗಳು ಮತ್ತು ಜಂಬೂಸವಾರಿ ಮೆರವಣಿಗೆ, ಏರ್ ಶೋ, ಡ್ರೋನ್ ಶೋ, ಪಂಜಿನ ಕವಾಯತು ಕಾರ್ಯಕ್ರಮವನ್ನು (ಸೆ. 28, ಅ.1 ಹಾಗೂ 2) ಒಟ್ಟು 22 ಲಕ್ಷ ವೀವರ್ಸ್‌ ದಾಖಲಾಗಿದೆ. ಇದರಲ್ಲಿ ಜಂಬೂಸವಾರಿ ಮೆರವಣಿಗೆ, ಏರ್ ಶೋ, ಡ್ರೋನ್ ಶೋ, ಪಂಜಿನ ಕವಾಯತನ್ನು ಹೆಚ್ಚು ಮಂದಿ ನೋಡಿದ್ದಾರೆ.

ಬರಲಾಗದವರು: 

‘ಭೌತಿಕವಾಗಿ ಹಾಜರಾಗಲು ಸಾಧ್ಯವಾಗದವರು ಕುಳಿತಲ್ಲೇ ವೀಕ್ಷಿಸಿದ್ದಾರೆ. ಇದಕ್ಕೆ, ಜಿಲ್ಲಾಡಳಿತ ಮಾಡಿದ ಲೈವ್‌ ವ್ಯವಸ್ಥೆ ನೆರವಾಗಿರುವುದನ್ನು ಅಂಕಿ–ಅಂಶ ದೃಢೀಕರಿಸಿದೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್ ಟಿ.ಕೆ. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ದಸರೆಯು ಡಿಜಿಟಲ್‌ ವೇದಿಕೆಗಳ ಮೂಲಕ ದೇಶ–ವಿದೇಶಗಳ ಆಸಕ್ತರನ್ನು ತಲುಪಿದೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹಾಗೂ ಡಿಜಿಟಲ್‌ ಜಗತ್ತಿನ ಸಾಧ್ಯತೆಗಳನ್ನು ಬಳಸಿಕೊಳ್ಳಲಾಯಿತು’ ಎಂದರು.

ನೇರಪ್ರಸಾರದ ವ್ಯವಸ್ಥೆಯ ಜವಾಬ್ದಾರಿಯನ್ನು ಜಿಲ್ಲಾಡಳಿತದಿಂದ ‘ಫ್ಯೂಷನ್‌ ಮೈಂಡ್ಸ್‌ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಡೆಡ್‌’ ಕಂಪನಿಗೆ ಕೊಡಲಾಗಿತ್ತು. ಈ ಕಂಪನಿಯ ಸರಾಸರಿ 65 ಮಂದಿ ವೃತ್ತಪರರ ತಂಡವು (ಒಂದು ಕಾರ್ಯಕ್ರಮಕ್ಕೆ) ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ನೇರಪ್ರಸಾರ ಮಾಡಿದರು. ಸುಧಾರಿತ ‘ನೆಕ್ಸ್ಟ್‌ ಝೆನ್‌ ಕ್ಲೌಡ್ ಸ್ಟುಡಿಯೊ’ ತಂತ್ರಜ್ಞಾನ ಬಳಸಲಾಯಿತು’ ಎಂದು ಫ್ಯೂಷನ್‌ ಮೈಂಡ್ಸ್‌ ಟೆಕ್ನಾಲಜಿ ಕಂಪನಿಯ ನಿರ್ದೇಶಕ ಯಶವಂತ್‌ಕುಮಾರ್ ಪ್ರತಿಕ್ರಿಯಿಸಿದರು.

ಹಿಂದಿನ ವರ್ಷಗಳಿಗಿಂತಲೂ ಹೆಚ್ಚಿನ ಮಂದಿಗೆ ತಲುಪಿ ಡಿಜಿಟಲ್ ವೇದಿಕೆಯಲ್ಲಿ ‘ದಸರೆಯ ಹೆಜ್ಜೆಗುರುತು’ ಮೂಡಿಸಲಾಗಿದೆ.
ಹರೀಶ್ ಟಿ.ಕೆ. ಸಹಾಯಕ ನಿರ್ದೇಶಕ ವಾರ್ತಾ ಇಲಾಖೆ

ಉದ್ಘಾಟನೆಗೂ ಉತ್ತಮ ಪ್ರತಿಕ್ರಿಯೆ ಸೆ.22ರಂದು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಬಾನು ಮುಷ್ತಾಕ್ ಅವರಿಂದ ನೆರವೇರಿದ ಉದ್ಘಾಟನೆ ಸಮಾರಂಭ ಮತ್ತು ಸೆ.29ರವರೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಫೇಸ್‌ಬುಕ್ ಮತ್ತು ಯೂಟ್ಯೂಬ್ ಒಟ್ಟು 15 ಲಕ್ಷ ವೀಕ್ಷಣೆ ದೊರೆತಿದೆ. ದೈನಂದಿನ ಸರಾಸರಿಯು 90ಸಾವಿರದಿಂದ 1.60 ಲಕ್ಷದವರೆಗೆ ಇತ್ತು. ಅಂಬಾವಿಲಾಸ ಅರಮನೆ ಮೈದಾನದಲ್ಲಿ ಇದೇ ಮೊದಲಿಗೆ ಬಂದಿದ್ದ ಕೇರಳದ ಥೈಕುಡಂ ಬ್ರಿಡ್ಜ್‌ ಬ್ಯಾಂಡ್‌ ಕಾರ್ಯಕ್ರಮವನ್ನು ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಮೈಸೂರಿನವರೇ ಆದ ವಿಜಯಪ್ರಕಾಶ್ ತಂಡದ ಗಾಯನ ನಿಲಾದ್ರಿ ಕುಮಾರ್ ಅವರ ಸಿತಾರ್ ವಾದನ ಕಾರ್ಯಕ್ರಮಕ್ಕೆ ನಂತರದ ಸ್ಥಾನ ಸಿಕ್ಕಿದೆ.

ಲಿಂಕ್ ಹಂಚಿಕೆ ದಸರಾ ಕಾರ್ಯಕ್ರಮಗಳ ನೇರಪ್ರಸಾರವನ್ನು ಇನ್‌ಸ್ಟಗ್ರಾಂ ಫೇಸ್‌ಬುಕ್ ಯೂಟ್ಯೂಬ್ ಮತ್ತು ಸಂಬಂಧಿತ ಹ್ಯಾಂಡಲ್‌ಗಳಲ್ಲಿ (ಸೆಸ್ಕ್‌ ಹಾಗೂ ಇತರರು) ಕ್ರಾಸ್-ಪೋಸ್ಟಿಂಗ್ ಮಾಡಲಾಗಿತ್ತು. ವಾರ್ತಾ ಇಲಾಖೆಯಿಂದ ಉತ್ತಮವಾದ ಮಾಧ್ಯಮ ಸಮನ್ವಯದೊಂದಿಗೆ ಲಿಂಕ್‌ಗಳನ್ನು ಹಂಚಿಕೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.