ಬಾನು ಮುಷ್ತಾಕ್ ಅವರಿಂದ ನವರಾತ್ರಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು: ಹಿಂದೆಂದೂ ಕಾಣದ ಪೊಲೀಸರ ಬಿಗಿಭದ್ರತೆ, 'ಅಘೋಷಿತ ನಿಷೇಧಾಜ್ಞೆ' ನಡುವೆ ನಗರದ ಚಾಮುಂಡಿ ಬೆಟ್ಟದಲ್ಲಿ ಸೋಮವಾರ ಉದ್ಘಾಟನೆಗೊಂಡ ನಾಡಹಬ್ಬ ದಸರಾ ಉತ್ಸವವು, ರಾಜ್ಯದಲ್ಲಿ ಕೋಮು ಸೌಹಾರ್ದ, ಧಾರ್ಮಿಕ ಸಹಿಷ್ಣತೆ ಮತ್ತು ಭಾಷಾ ಸಾಮರಸ್ಯದ ಅಗತ್ಯವನ್ನು ಮತ್ತೊಮ್ಮೆ ಸಾರಿ ಹೇಳಿತು. 'ಜೈ ಹಿಂದ್ , 'ಜೈ ಕರ್ನಾಟಕ' ದ ಜೊತೆಗೆ 'ಜೈ ಸಂವಿಧಾನ' ಎಂಬ ಘೋಷಣೆಯೂ ಮೊಳಗಿತು.
ಕುವೆಂಪು ಅವರ ನಾಡಗೀತೆಯ 'ಸರ್ವ ಜನಾಂಗದ ಶಾಂತಿಯ ತೋಟ' ನುಡಿ ಸಾಲು ಕಾರ್ಯಕ್ರಮದ ಆರಂಭದಿಂದ ಕೊನೆವರೆಗೂ ಅನುರಣಿಸಿತು. ದಸರೆಯು ಎಲ್ಲ ಜಾತಿ, ಧರ್ಮಗಳ ಜನರ ಹಬ್ಬ ಎಂಬ ಸಂದೇಶವನ್ನೂ ಕೊಟ್ಟಿತು.
ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಳಿಕ ದಸರಾ ಉದ್ಘಾಟಿಸಲು ಆಯ್ಕೆಯಾದ ದಿನದಿಂದಲೂ ನಾಡಿನಾದ್ಯಂತ ಗಮನ ಸೆಳೆದು, ವಿರೋಧಿಗಳಿಗೆ ಸಂವಿಧಾನದ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ನೆನಪಿಸುವ ಸನ್ನಿವೇಶಕ್ಕೂ ಕಾರಣವಾಗಿದ್ದ ಲೇಖಕಿ ಬಾನು ಮುಷ್ತಾಕ್, ನಾಡದೇವಿ ಚಾಮುಂಡೇಶ್ವರಿ ಮೂರ್ತಿಗೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡಿ ಉತ್ಸವಕ್ಕೆ ಚಾಲನೆ ನೀಡಿದರು.
ನವರಾತ್ರಿ ಆಚರಣೆಯ ಮೊದಲ ದಿನದ ಬಣ್ಣವಾದ ಹಳದಿ ಸೀರೆಯನ್ನು ಉಟ್ಟಿದ್ದ ಅವರು ತಮ್ಮ ಪ್ರತಿ ಮಾತಿನಲ್ಲೂ ಸಾಮರಸ್ಯದ ಕುರಿತು ಒತ್ತಿ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಮಾತನಾಡಿದ ಎಲ್ಲರೂ ಸೌಹಾರ್ದವನ್ನೇ ಪ್ರತಿಪಾದಿಸಿದರು.
'ದೇವಿ ಚಾಮುಂಡಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ' ಎಂದು ಮಾತು ಆರಂಭಿಸಿದ ಬಾನು ಮುಷ್ತಾಕ್,, 'ಸರ್ವ ಜನಾಂಗದ ತೋಟವಾದ ನಾಡಿನಲ್ಲಿ ಪ್ರತಿ ಹೂ ತನ್ನ ಬಣ್ಣದಲ್ಲೆ ಅರಳಲಿ, ತನ್ನ ಸುವಾಸನೆಯನ್ನೇ ಬೀರಲಿ, ಪ್ರತಿ ಹಕ್ಕಿ ತನ್ನ ರಾಗದಲ್ಲೇ ಹಾಡಲಿ. ಆದರೆ ಎಲ್ಲವೂ ಒಟ್ಟಾದಾಗ ಸೌಹಾರ್ದದ ಹಾಡಾಗಲಿ' ಎಂದು ಆಶಿಸಿದರು.
'ನಾವೆಲ್ಲರೂ ಒಂದೇ ಗಗನದ ಅಡಿಯ ಪಯಣಿಗರು. ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿಯು ಯಾರನ್ನೂ ಹೊರತಳ್ಳುವುದಿಲ್ಲ. ಆದರೆ ಮನುಷ್ಯರು ಮಾತ್ರ ಗಡಿಗಳನ್ನು ಸೃಷ್ಟಿಸುತ್ತಾರೆ' ಎಂದು ವಿಷಾದಿಸಿದ ಅವರು, ಸೌಹಾರ್ದ, ಸಮಾನತೆಗಾಗಿ ಶ್ರಮಿಸಿದ ಜಯಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಉಲ್ಲೇಖಿಸಿ ಗಮನ ಸೆಳೆದರು.
'ದಸರೆ ಎಂದರೆ ಹಬ್ಬವಷ್ಟೇ ಅಲ್ಲ. ನಾಡಿನ ನಾಡಿ ಮಿಡಿತ, ಸಂಸ್ಕೃತಿಯ ಉತ್ಸವ. ಇದು ಎಲ್ಲರನ್ನೂ ಒಳಗೊಳ್ಳುವ ಘಳಿಗೆ. ಸಮನ್ವಯ ಮೇಳ. ವಿವಿಧತೆಯಲ್ಲಿ ಏಕತೆ ಇರುವ ಸುಗಂಧ' ಎಂದು ಬಣ್ಣಿಸಿದರು.
'ನವರಾತ್ರಿಯಲ್ಲಿ ಉರ್ದು ಭಾಷಿಕರು ತಮ್ಮ ಗುರುತನ್ನು ಕೊಟ್ಟಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳದಲ್ಲಿ ವಾಸವಿದ್ದ ನನ್ನ ಆಪ್ತ ಸಂಬಂಧಿ ಮೊಹಮದ್ ಗೌಸ್ ಎಂಬುವವರು ಮೈಸೂರು ಮಹಾರಾಜರ ಅಂಗರಕ್ಷಕ ಪಡೆಯ ಸೈನಿಕರಾಗಿದ್ದರು. ಅಂಥ ಹಲವರು ಅಂಗರಕ್ಷಕ ಪಡೆಯಲ್ಲಿದ್ದರು. ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಮರನ್ನು ನಂಬಿ ಅಂಗರಕ್ಷಕ ಪಡೆಗೆ ನೇಮಿಸಿಕೊಂಡಿದ್ದರು. ಇದು ಅವಿಸ್ಮರಣೀಯವಾದ ಹೆಮ್ಮೆ' ಎಂದು ಸ್ಮರಿಸಿದರು.
'ನಮ್ಮ ಸಂಸ್ಕೃತಿಯು ಹೃದಯಗಳನ್ನು ಒಂದುಗೂಡಿಸುವಂಥದ್ದು, ದ್ವೇಷಗಳನ್ನು ಬೆಳೆಸುವಂಥದ್ದಲ್ಲ, ಪ್ರೀತಿಯನ್ನು ಹರಡುವಂಥದ್ದು. ಇದುವರೆಗೂ ನನ್ನ ಧರ್ಮದ ಆಚರಣೆಗಳು ನನ್ನ ಮನೆಯ ಹೊಸ್ತಿಲ ಗಡಿಯನ್ನು ದಾಟಿಲ್ಲ' ಎಂದು ಪ್ರತಿಪಾದಿಸಿದರು.
'ಪ್ರಜಾಪ್ರಭುತ್ವ ಒಂದು ವ್ಯವಸ್ಥೆಯಲ್ಲ. ಅದೊಂದು ಮೌಲ್ಯ. ಅದನ್ನು ಗೌರವಿಸೋಣ. ಈ ನೆಲದಲ್ಲಿ ಸೌಹಾರ್ದದ ಕುರುಹುಗಳಿವೆ. ಇಲ್ಲಿನ ಬಿಸಿಲು ಕೂಡ ಮಾನವೀಯತೆಯ ಪ್ರತೀಕವಾಗಿದೆ. ದೇವಿ ಚಾಮುಂಡಿ ನಮ್ಮೊಳಗಿನ ದ್ವೇಷ, ಅಸಹಿಷ್ಣುತೆಯನ್ನು ನಾಶ ಮಾಡಲಿ' ಎಂದು ಆಶಿಸಿದರು.
'ದಸರಾ ಮೈಸೂರು ನಗರ, ನಾಡು ಹಾಗೂ ದೇಶಕ್ಕಷ್ಟೇ ಸೀಮಿತವಾಗದೆ, ಇಡೀ ಜಗತ್ತಿನಾದ್ಯಂತ ಶಾಂತಿ, ಸೌಹಾರ್ದ, ಪ್ರೀತಿಯ ದೀಪವಾಗಿ ನೆಲೆ ಕಂಡುಕೊಳ್ಳಲಿ' ಎಂದರು.
'ನನ್ನ ಬದುಕು ನನಗೆ ಹಲವು ಪಾಠಗಳನ್ನು ಕಲಿಸಿದೆ. ವ್ಯಷ್ಟಿಯಿಂದ ಸಮಷ್ಟಿಯತ್ತ ಸಾಗುವುದೇ ನಿಜವಾದ ದಾರಿ ಎಂಬುದು ಅದರಲ್ಲೊಂದು. ನನ್ನ ಧಾರ್ಮಿಕ ನಂಬಿಕೆ, ಜೀವನದರ್ಶನ ಜೀವಪರವಾಗಿದೆ. ಅದು ಮರದ ನೆರಳಂತೆ, ತಂಪಾದ ನದಿಯಂತೆ. ಅಸ್ತ್ರದ ಬದಲು ಅಕ್ಷರದಿಂದ, ಹಗೆಯ ಬದಲು ಪ್ರೀತಿಯಿಂದ ಗೆಲ್ಲುವಂಥದ್ದು' ಎಂದು ಪ್ರತಿಪಾದಿಸಿದರು.
ಹತ್ತು ವರ್ಷದ ಹಿಂದೆ ಬರೆದ 'ಬಾಗಿನ' ಕವಿತೆಯನ್ನು ಭಾಷಣದ ಕೊನೆಗೆ ಓದಿದ ಅವರು, ಬಾಗಿನ ಪಡೆದ ಮುಸ್ಲಿಂ ಮಹಿಳೆಯಲ್ಲಿ ಮೂಡುವ ಭಾವನೆಗಳನ್ನು ಬಣ್ಣಿಸಿದರು.
ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಿದ್ದವರ ಅರ್ಜಿಯನ್ನು ವಜಾಗೊಳಿಸುವ ವೇಳೆಯಲ್ಲಿ, ಸುಪ್ರೀಂ ಕೋರ್ಟ್ ಸಂವಿಧಾನದ ಪ್ರಸ್ತಾವನೆಯನ್ನು ಓದುವಂತೆ ಅರ್ಜಿದಾರರಿಗೆ ಹೇಳಿದ್ದನ್ನು ಉಲ್ಲೇಖಿಸಿದರು. 'ರಾಜ್ಯ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಸಂವಿಧಾನದ ಪರವಾಗಿಯೇ ಇದೆ. ಎಲ್ಲರೂ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಗಳು' ಎಂದು ಪ್ರತಿಪಾದಿಸಿದರು. ಶಾಸಕ ಜಿ.ಟಿ.ದೇವೇಗೌಡ ಅವರೂ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡರು.
'ಓಲೈಕೆ ರಾಜಕಾರಣ ಬೇಡ; ಸಿದ್ದರಾಮಯ್ಯ
'ಯಾರನ್ನೋ ಓಲೈಸಿ, ರಾಜಕಾರಣ ಮಾಡಲು ನಾಡಹಬ್ಬವನ್ನು ವಿರೋಧಿಸುವುದು ಸಂವಿಧಾನಕ್ಕೆ, ದೇಶಕ್ಕೆ ಮಾಡುವ ಅಪಚಾರ, ಅಕ್ಷಮ್ಯ' ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು. ಎಂದಿಗಿಂತ ಹೆಚ್ಚಿನ ಉತ್ಸಾಹದಲ್ಲಿ ಮಾತನಾಡಿ ಸಭಿಕರನ್ನು ಹಿಡಿದಿಟ್ಟ ಅವರು, 'ರಾಜಕಾರಣ ಮಾಡಲು ಬೇರೆ ಸ್ಥಳ, ಸಂದರ್ಭಗಳಿವೆ. ಗೋಡಾ ಹೈ, ಮೈದಾನ್ ಹೈ. ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡಬೇಕೇ ಹೊರತು, ದಸರೆಯಂಥ ಉತ್ಸವದಲ್ಲಿ ಅಲ್ಲ' ಎಂದರು.
'ಬಾನು ಮುಷ್ತಾಕ್ ಅವರು ದಸರೆ ಉದ್ಘಾಟಿಸಿದ್ದು ಸರಿಯಾಗಿಯೇ ಇದೆ' ಮತ್ತೊಮ್ಮೆ ಸಮರ್ಥಿಸಿಕೊಂಡರು. ಬಾನು ಅವರ ಕತೆಗಳ ಅನುವಾದಕಿ ದೀಪಾ ಭಾಸ್ತಿಯವರನ್ನೂ ಉಲ್ಲೇಖಿಸಿದರು.
ಸಚಿವರಾದ ಕೆ.ಎಚ್.ಮುನಿಯಪ್ಪ, ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ, ಕೆ.ವೆಂಕಟೇಶ್, ಶಾಸಕರಾದ ಡಿ.ರವಿಶಂಕರ್, ಜಿ.ಡಿ.ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ, ಡಾ.ಡಿ.ತಿಮ್ಮಯ್ಯ, ದರ್ಶನ್ ಧ್ರುವನಾರಾಯಣ, ಅನಿಲ್ ಚಿಕ್ಕಮಾದು, ಎ.ಆರ್.ಕೃಷ್ಣ ಮೂರ್ತಿ, ರಮೇಶ್ ಬಂಡಿಸಿದ್ದೇಗೌಡ, ಕೆ.ಹರೀಶ್ ಗೌಡ, ತನ್ವೀರ್ ಸೇಠ್, ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್, ಕೆ.ವಿವೇಕಾನಂದ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ,, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್, ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವೆಂಕಟೇಶ್, ನಿರ್ದೇಶಕಿ ಕೆ.ಎಂ.ಗಾಯತ್ರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಯುಕೇಶ್ ಕುಮಾರ್, ಎಡಿಜಿಪಿ ಆರ್. ಹಿತೇಂದ್ರ, ಐಜಿಪಿ ಡಾ.ಎಂ.ಬಿ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಪಾಲ್ಗೊಂಡಿದ್ದರು.
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.
ಎಲ್ಲ ಕಡೆ ಪೊಲೀಸರು: ಅಘೋಷಿತ ನಿಷೇಧಾಜ್ಞೆ
ಚಾಮುಂಡಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ನಗರದ ಎಲ್ಲ ರಸ್ತೆ, ವೃತ್ತಗಳಲ್ಲೂ ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಎಲ್ಲಿಯೂ ಗುಂಪು ಸೇರಲು ಜನರಿಗೆ ಪೊಲೀಸರು ಅವಕಾಶ ನೀಡಲಿಲ್ಲ.
ಬೆಟ್ಟದ ಮೇಲೆ ಉದ್ಘಾಟನೆ ಕಾರ್ಯಕ್ರಮದ ವೇದಿಕೆ ಒಳ ಹೊರಗೂ ಪೊಲೀಸರ ಕಣ್ಗಾವಲು ಹೆಚ್ಚಿತ್ತು.
ಪಾಸ್ ಇದ್ದ ಸಾರ್ವಜನಿಕರನ್ನು ತಪಾಸಣೆ ಮಾಡಲು ಇದೇ ಮೊದಲ ಬಾರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದ ಬಸ್ ನಿಲ್ದಾಣದ ಬಳಿಯಿಂದ ಮೂರು ಹಂತದ ಬಿಗಿ ತಪಾಸಣೆ ಮಾಡಲಾಯಿತು.
ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನೂ ನಿಯೋಜಿಸಲಾಗಿತ್ತು.
ನೂರಾರು ಪೊಲೀಸರು ಬಾನು ಮುಷ್ತಾಕ್ ಅವರಿಗೆ ರಕ್ಷಣೆ ನೀಡಿ ಬೆಟ್ಟಕ್ಕೆ ಕರೆತಂದರು. ಅವರ ಕುಟುಂಬಸ್ಥರಿಗೆಂದೇ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.