ADVERTISEMENT

ಮೈಸೂರು ದಸರಾ: ಅರಮನೆ ಅಂಗಳದಲ್ಲಿ ಗಾನ ಸಿಂಚನ

ಲಕ್ಷ್ಮೀ–ಇಂದೂ ನಾಗರಾಜ್‌ ಸಹೋದರಿಯರಿಂದ ಗಾಯನ; ಮೈಸೂರು ಗುರುರಾಜ್‌ ಜಾನಪದ ಕಲರವ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:33 IST
Last Updated 30 ಸೆಪ್ಟೆಂಬರ್ 2025, 6:33 IST
<div class="paragraphs"><p>ಅರಮನೆ ಆವರಣದಲ್ಲಿ ಸೋಮವಾರ ಸಂಜೆ ಸಹೋದರಿಯರಾದ ಲಕ್ಷ್ಮಿ ನಾಗರಾಜ್ ಹಾಗೂ ಇಂದೂ ನಾಗರಾಜ್ ಭಕ್ತಿಗೀತೆಗಳನ್ನು ಪ್ರಸ್ತತಪಡಿಸಿದರು  </p></div>

ಅರಮನೆ ಆವರಣದಲ್ಲಿ ಸೋಮವಾರ ಸಂಜೆ ಸಹೋದರಿಯರಾದ ಲಕ್ಷ್ಮಿ ನಾಗರಾಜ್ ಹಾಗೂ ಇಂದೂ ನಾಗರಾಜ್ ಭಕ್ತಿಗೀತೆಗಳನ್ನು ಪ್ರಸ್ತತಪಡಿಸಿದರು

   

ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.

ಮೈಸೂರು: ಸಹೋದರಿಯರಾದ ಲಕ್ಷ್ಮಿ ನಾಗರಾಜ್ ಹಾಗೂ ಇಂದೂ ನಾಗರಾಜ್ ಅವರ ಭಕ್ತಿ ಗಾಯನ, ಮೈಸೂರು‌ ಗುರುರಾಜ್ ಅವರ ಜನಪದ ಗಾಯನದ ಮೂಲಕ ಅಂಬಾವಿಲಾಸ ಅರಮನೆ ಅಂಗಳದಲ್ಲಿ ಕಳೆದ 9 ದಿನಗಳ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮವು ಸೋಮವಾರ ತೆರೆಕಂಡಿತು.

ADVERTISEMENT

‘ವಾತಾಪಿ ಗಣಪತಿಂ ..ಭಜೇ’ ಎಂಬ ಗಣಪತಿ ಸ್ತುತಿಯ ಮೂಲಕ ತಮ್ಮ‌ಗಾನ ಲಹರಿ ಆರಂಭಿಸಿದ ಸಹೋದರಿಯರು, ನೆರೆದ ಸಂಗೀತ ಪ್ರಿಯರು ತಲೆದೂಗುವಂತೆ ಮಾಡಿದರು.

ಶ್ರೀ ಚಾಮುಂಡೇಶ್ವರಿ, ಪುರಂದರ ದಾಸರ ಬೃಂದಾವನದೊಳು ಆಡಿದವನ್ಯಾರೆ, ಇಂದು ಭುವನೇಶ್ವರಿಯ ನೆನೆ ಮನವೆ ಮೊದಲಾದ ಭಕ್ತಿ ಗೀತೆಗಳ ಗಾಯನವು ಕಿವಿಗೆ ಮಾಧುರ್ಯ ತುಂಬಿದವು.

ಜಾನಪದ ಕಲಾವಿದ ಮೈಸೂರು ಗುರುರಾಜ್ ಮತ್ತು ತಂಡದವರು ನಡೆಸಿಕೊಟ್ಟ ಜಾನಪದ ಗಾಯನವೂ ಪ್ರೇಕ್ಷಕರನ್ನು ರಂಜಿಸಿತು.

ಶರಣು ಶರಣು ಅಯ್ಯ ಗಣನಾಯಕ....ಹಾಡಿನ ಮೂಲಕ ಶುರುವಾದ ಜನಪದ ಸಂಗೀತ ಸಂಜೆಯಲ್ಲಿ ಚಾಮುಂಡೇಶ್ವರಿ –ನಂಜುಂಡೇಶ್ವರರ ಪ್ರೇಮ ಪ್ರಸಂಗ ಕುರಿತ ಮೂಲ ಜಾನಪದ ಗೀತೆ, ಮಾದಪ್ಪನ ಕುರಿತ ಬೆಟ್ಟ ನುಡಿದಾವೋ ಮಾದೇವ.. ಬಿದಿರು ನುಡಿದಾವೋ.. ಗಾಯನದ ಜೊತೆ ಕಂಸಾಳೆ ನೃತ್ಯಕ್ಕೆ ನೆರೆದಿದ್ದವರು ಉಘೇ ಎಂದರು.

ನಾಲ್ಕಾರು ಪ್ರಸಿದ್ಧ ಜನಪದ ಗೀತೆಗಳನ್ನು ಕಲಾವಿದರು ಪ್ರಸ್ತುತಪಡಿಸಿದರು.

ಇದಕ್ಕೂ ಮುನ್ನ ಬೀದರ್ ಜಿಲ್ಲೆಯ ಜನಪದ ಕಲಾವಿದೆ ರೇಖಾ ಸವದಿ ವಿವಿಧ ಜನಪದ ಗೀತೆಗಳ ಮೂಲಕ ರಂಜಿಸಿದರು. ಜಯನಗರದ ಇಸ್ಕಾನ್ ದೇಗುಲದ ತಂಡದಿಂದ ಹರಿನಾಮ ಸಂಕೀರ್ತನೆ ಮೂಡಿಬಂದಿತು.

ಜಾನಪದ ಕಲಾವಿದ ಮೈಸೂರು ಗುರುರಾಜ್ ಮತ್ತು ತಂಡದವರು ಜನಪದ ಗಾಯನ ಪ್ರಸ್ತುತಪಡಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.