ADVERTISEMENT

ಮೈಸೂರು ದಸರಾ: ‘ಯುವ ಸಂಭ್ರಮ’ಕ್ಕೆ ಬಂದ ಅರ್ಜುನ!

ಅಂಬಾರಿ ಹೊತ್ತವರ ಕಥನ ಹೇಳಿದ ವಿದ್ಯಾರ್ಥಿಗಳು l ಇತಿಹಾಸಕ್ಕೆ ಭಾವುಕ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:28 IST
Last Updated 15 ಸೆಪ್ಟೆಂಬರ್ 2025, 5:28 IST
ಮೈಸೂರಿನ ಮಾನಸಗಂಗೋತ್ರಿಯಲ್ಲಿ ನಡೆಯುತ್ತಿರುವ ‘ಯುವ ಸಂಭ್ರಮ’ದಲ್ಲಿ ಅಂಬಾರಿ ಹೊತ್ತ ಆನೆಗಳ ಇತಿಹಾಸ ಹೇಳಿದ ಮಂಡ್ಯದ ಚಿನಕುರುಳಿಯ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ 
ಮೈಸೂರಿನ ಮಾನಸಗಂಗೋತ್ರಿಯಲ್ಲಿ ನಡೆಯುತ್ತಿರುವ ‘ಯುವ ಸಂಭ್ರಮ’ದಲ್ಲಿ ಅಂಬಾರಿ ಹೊತ್ತ ಆನೆಗಳ ಇತಿಹಾಸ ಹೇಳಿದ ಮಂಡ್ಯದ ಚಿನಕುರುಳಿಯ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ    

ಮೈಸೂರು: ಕಾಡಾನೆ ವಿರುದ್ಧ ಹೋರಾಡಿ ಹುತಾತ್ಮನಾದ ಮಾಸ್ಟರ್ ‘ಅರ್ಜುನ’ ಮಾನಸಗಂಗೋತ್ರಿಯ ಬಯಲು ರಂಗಮಂದಿರಕ್ಕೆ ಬಂದನು. ಹುಚ್ಚೆದ್ದು ಕುಣಿಯುತ್ತಿದ್ದ ಯುವ ಸಮೂಹವನ್ನು ಅರೆಕ್ಷಣ ಭಾವುಕಗೊಳಿಸಿದನು.. 

ಮಾನಸಗಂಗೋತ್ರಿಯಲ್ಲಿ ನಡೆಯುತ್ತಿರುವ ‘ಯುವ ಸಂಭ್ರಮ’ದ 5ನೇ ದಿನವಾದ ಭಾನುವಾರ ಮಂಡ್ಯದ ಚಿನಕುರುಳಿಯ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜು ಹಾಗೂ ಬನ್ನೂರಿನ ಸಂತೆಮಾಳದ ಬಾಲಕರ ಪಿಯು ಕಾಲೇಜಿನ ವಿದ್ಯಾರ್ಥಿಗಳ ‘ಅರ್ಜುನ’ ಕುರಿತ ಪ್ರಸ್ತುತಿಯು, ನಾಡಿನ ಮನಸ್ಸುಗಳಲ್ಲಿ ಹೇಗೆ ಅಚ್ಚಳಿಯದೇ ಉಳಿದಿದ್ದಾನೆ ಎಂಬುದನ್ನು ಸಾರಿತು. 

ಎಸ್‌ಟಿಜಿ ಕಾಲೇಜಿನ ವಿದ್ಯಾರ್ಥಿಗಳು ಇದುವರೆಗೂ ಅಂಬಾರಿ ಹೊತ್ತ ಆನೆಗಳ ಪರಿಚಯ ಮಾಡಿಕೊಟ್ಟರು. ಅಂಬಾರಿ ಆನೆಗಳ ಇತಿಹಾಸದ ಝಲಕ್‌ ಅನಾವರಣವಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮೆಚ್ಚಿನ ಆನೆ ‘ಜಯಮಾರ್ತಾಂಡ’ ಸಿಕ್ಕಿದ್ದು ಎಲ್ಲಿ? ಹಾಲಿವುಡ್‌ ಸಿನಿಮಾ ‘ಎಲಿಫೆಂಟ್‌ ಬಾಯ್‌’ ಖ್ಯಾತಿಯ ‘ಐರಾವತ’, 10 ಅಡಿ ಎತ್ತರದ ದೈತ್ಯ ‘ಬಿಳಿಗಿರಿ’, ಗಂಧದಗುಡಿಯ ಸಿನಿಮಾದಲ್ಲಿ ರಾಜ್‌ ಕುಮಾರ್‌ ಹೊತ್ತಿದ್ದ ‘ರಾಜೇಂದ್ರ’ನನ್ನು ‍ವೇದಿಕೆಗೆ ತಂದರು.  

ADVERTISEMENT

ಜನರ ನೆಚ್ಚಿನ ಆನೆ ‘ದ್ರೋಣ’, ‘ಬಲರಾಮ’, ಹುತಾತ್ಮನಾದ ‘ಅರ್ಜುನ’ ಹಾಗೂ ಈಗ ಅಂಬಾರಿ ಹೊರುತ್ತಿರುವ  ‘ಅಭಿಮನ್ಯು’ ಹಿರಿಮೆಯನ್ನು ಮೆರೆಸಿದರು.

ಬನ್ನೂರಿನ ಸಂತೆಮಾಳದ ವಿದ್ಯಾರ್ಥಿಗಳು ‘ಅರ್ಜುನ’ನ ಹಿರಿಮೆಯನ್ನು ಕೊಂಡಾಡಿದರು. ಬಲಶಾಲಿ ಆನೆಯನ್ನು ಪಳಗಿಸಿದ ಮಾವುತ ಮಾಸ್ತಿಯನ್ನೂ ನೆನೆದರು. ‘ಅಪ್ರತಿಮ ಹೋರಾಟಗಾರ.. ಅಜರಾಮರ.. ಜೊತೆಗಿರದ ಜೀವ ಎಂದೂ ಜೀವಂತ’ ಎಂದು ಅಗಲಿಕೆಯನ್ನು ತೀವ್ರಗೊಳಿಸಿದರು. 

ಸ್ಪರ್ಧೆಗಿಳಿದ ಸಮೂಹ: 

ಕಿಕ್ಕಿರಿದು ತುಂಬಿದ್ದ ಯುವ ಸಮೂಹದ ಎದುರು ಸ್ಪರ್ಧೆಗೆ ಬಿದ್ದಂತೆ ನೃತ್ಯ ರೂಪಕಗಳನ್ನು ಅನಾವರಣಗೊಳಿಸಿದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮಿಂಚಿನ ಸಂಚಲನ ಉಂಟು ಮಾಡಿದರು. ಭಾವುಕ ಸನ್ನಿವೇಶಗಳಲ್ಲದೇ ವೀರ ಯೋಧರ ಹೋರಾಟ, ಜಾನಪದ ವೈಭವ, ಮಹಾಕಾಳಿ, ಚಾಮುಂಡೇಶ್ವರಿ ದೇವಿ ಕಥನಗಳು ಕಿಚ್ಚನ್ನು ಎಬ್ಬಿಸಿದವು. ವಿವಿಧ ವಿಷಯಗಳಲ್ಲಿ 57 ಕಾಲೇಜು ತಂಡಗಳು ನೃತ್ಯ ಪ್ರದರ್ಶಿಸಿದವು. ‌

ಭಾರತೀನಗರದ ಭಾರತೀ ಕಾಲೇಜಿನ ವಿದ್ಯಾರ್ಥಿಗಳ ‘ಮಲ್ಲಗಂಬ’ ಪ್ರಸ್ತುತಿಯು ನೋಡುಗರ ಮೈ ನವಿರೇಳಿಸಿತು. ‘ನಾಡಪ್ರಭು ಕೆಂಪೇಗೌಡ’ ಕುರಿತು ಮಳವಳ್ಳಿಯ ಶಾಂತಿಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ‘ಸೈನಿಕ’ ಕುರಿತು ಸೇಂಟ್‌ ಫಿಲೊಮಿನಾ ಕಾಲೇಜು, ‘ಅಂಬೇಡ್ಕರ್’ ಕುರಿತು ಮಂಡ್ಯದ ಶ್ರೀರಂಗಪಟ್ಟಣದ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ನೃತ್ಯ ರೂಪಕ ಪ್ರದರ್ಶಿಸಿದರು.  

ಹುಚ್ಚೆದ್ದು ಕುಣಿದ ಯುವ ಸಮೂಹ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.