ADVERTISEMENT

ಮೈಸೂರು: 28 ವರ್ಷಗಳಲ್ಲಿ 29 ಡಿಡಿಪಿಯುಗಳು!

1997ರಿಂದ ಈವರೆಗೆ ‘ಪ್ರಭಾರ’ ಹೊತ್ತಿರುವ 11 ಮಂದಿ ಅಧಿಕಾರಿಗಳು

ಎಂ.ಮಹೇಶ
Published 8 ಜುಲೈ 2025, 2:43 IST
Last Updated 8 ಜುಲೈ 2025, 2:43 IST
ಮೈಸೂರಿನಲ್ಲಿರುವ ಡಿಡಿಪಿಯು ಕಚೇರಿಯ ನೋಟ– ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿರುವ ಡಿಡಿಪಿಯು ಕಚೇರಿಯ ನೋಟ– ಪ್ರಜಾವಾಣಿ ಚಿತ್ರ   

ಮೈಸೂರು: ಇಲ್ಲಿನ ಪದವಿಪೂರ್ವ ಶಿಕ್ಷಣ ಉಪ ನಿರ್ದೇಶಕರ (ಡಿಡಿಪಿಯು) ಹುದ್ದೆಯು 28 ವರ್ಷಗಳಲ್ಲಿ ಬರೋಬ್ಬರಿ 29 ಮಂದಿ ಅಧಿಕಾರಿಗಳನ್ನು ಕಂಡಿದೆ! ಇವರಲ್ಲಿ ಬಹಳಷ್ಟು ಮಂದಿ ‘ಪ್ರಭಾರಿ’ಗಳು. ಹಲವರು ಒಂದಿಷ್ಟು ವರ್ಷಗಳ ಅವಧಿಗಾದರೂ ಕಾರ್ಯನಿರ್ವಹಿಸಿಲ್ಲ. ಇದರಿಂದಾಗಿ ಇದು, ಒಂದರ್ಥದಲ್ಲಿ ‘ಮ್ಯೂಸಿಕಲ್‌ ಚೇರ್‌’ ಆಟದ ಕುರ್ಚಿಯಂತಾಗಿದೆ! ಆಗಾಗ ಅಧಿಕಾರಿಗಳು ಬದಲಾಗುತ್ತಲೇ ಇದ್ದಾರೆ.

ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಹಾಕಿರುವ, ‘ಸೇವೆ ಸಲ್ಲಿಸಿದವರ ವಿವರ’ದ ಫಲಕದ ಪ್ರಕಾರ, 1997ರಿಂದ ಈವರೆಗೆ 11 ಮಂದಿ ‘ಪ್ರಭಾರ’ ಹೊತ್ತಿದ್ದಾರೆ.

ಇತ್ತೀಚೆಗೆ ಇದು, ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ಕಾಲೇಜುಗಳ ವಿಭಾಗ ಎಂದಾಗಿದ್ದು, ಈವರೆಗೆ ಉಪನಿರ್ದೇಶಕರಾಗಿದ್ದ ಎಂ. ಮರಿಸ್ವಾಮಿ ಜೂನ್‌ 30ರಂದು ವಯೋನಿವೃತ್ತಿ ಹೊಂದಿದ್ದು, ಕುವೆಂಪುನಗರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಎಂ.ಎಲ್. ಚಿದಾನಂದಕುಮಾರ್ ಅವರಿಗೆ ‘ಪ್ರಭಾರ’ ವಹಿಸಲಾಗಿದೆ. ಅವರು ಅಧಿಕಾರ ಸ್ವೀಕರಿಸಿದ್ದು, ಕಾಯಂ ಅಧಿಕಾರಿ ಬರುವವರೆಗೆ ನಿರ್ವಹಣೆಯ ಜವಾಬ್ದಾರಿ ನಿರ್ವಹಿಸಬೇಕಾಗಿದೆ.

ADVERTISEMENT

ಮಹತ್ವದ ಕೆಲಸ: ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಅತ್ಯಂತ ಮಹತ್ವದ ಘಟ್ಟ. ಯುವಜನರ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಇಲಾಖೆಯ ಈ ಹುದ್ದೆಗೆ ಅಧಿಕಾರಿಯನ್ನು ಹೆಚ್ಚಿನ ವರ್ಷಗಳು ಇರಿಸದಿರುವುದು ತೊಡಕಾಗಿ ಪರಿಣಮಿಸಿದೆ. ಆಡಳಿತಾತ್ಮಕ ವಿಷಯದೊಂದಿಗೆ ಶೈಕ್ಷಣಿಕ ಚಟುವಟಿಕಗಳ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಕೆಲವೇ ತಿಂಗಳುಗಳಲ್ಲಿ ಬದಲಾಗುತ್ತಿರುವುದು, ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ.

ಇತ್ತೀಚಿನ 5 ವರ್ಷಗಳಲ್ಲಿ 9 ಅಧಿಕಾರಿಗಳನ್ನು ಈ ಹುದ್ದೆ ಕಂಡಿದೆ! ಅವರಲ್ಲಿ ಮೂವರು ‘ಪ್ರಭಾರಿ’ಗಳು! ಶೀಘ್ರದಲ್ಲೇ, ಬೇರೊಬ್ಬರು ಈ ಹುದ್ದೆಗೆ ಬರುವ ಸಾಧ್ಯತೆಯೂ ಇದೆ.

ಇದರೊಂದಿಗೆ, ಹಲವು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪ್ರಾಂಶುಪಾಲರು, ಉಪನ್ಯಾಸಕರ ಹುದ್ದೆಯೂ ಬಹಳಷ್ಟು ಖಾಲಿ ಇದೆ. ಪ್ರಾಂಶುಪಾಲರ ಹುದ್ದೆಯನ್ನು ಪ್ರಭಾರಿಗಳಿಗೆ ವಹಿಸಿದ್ದರೆ, ಉಪನ್ಯಾಸಕರ ಕೊರತೆ ಸರಿದೂಗಿಸಲು ಅತಿಥಿ ಉಪನ್ಯಾಸಕರ ‘ಮೊರೆ’ ಹೋಗಲಾಗುತ್ತಿದೆ! ಮೂಲಸೌಕರ್ಯಗಳ ಕೊರತೆಯೂ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಇವೆಲ್ಲದರ ಪರಿಣಾಮವಾಗಿ ವಾರ್ಷಿಕ ಪರೀಕ್ಷೆಯಲ್ಲಿ ‘ಗಮನಾರ್ಹ’ ಸಾಧನೆ ತೋರುವಂತಹ ಫಲಿತಾಂಶವನ್ನೇನೂ ಜಿಲ್ಲೆಯು ಕಾಣುತ್ತಿಲ್ಲ.

ಜಿಲ್ಲೆಯಲ್ಲಿ ಒಟ್ಟು 261 ಪದವಿ ಪೂರ್ವ ಕಾಲೇಜುಗಳಿದ್ದು, ಈ ಪೈಕಿ 74 ಸರ್ಕಾರಿ, 31 ಅನುದಾನಿತ ಹಾಗೂ ಉಳಿದವು ಅನುದಾನರಹಿತ ಕಾಲೇಜುಗಳಾಗಿವೆ. 2024–25ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಕಳೆದ ಬಾರಿ 17ನೇ ಸ್ಥಾನದಲ್ಲಿದ್ದ ಜಿಲ್ಲೆಯು 12ನೇ ಸ್ಥಾನಕ್ಕೆ ಜಿಗಿತವನ್ನೇನೋ ಕಂಡಿತು, ಆದರೆ, ಒಟ್ಟಾರೆ ಫಲಿತಾಂಶದಲ್ಲಿ ಕುಸಿತ ಕಂಡಿದೆ.

ಆದ್ಯತೆಗೆ ಕನ್ನಡಿ!

ಜಿಲ್ಲೆಯಲ್ಲಿ ನಡೆದಿರುವ ಈ ಬೆಳವಣಿಗೆಯು ಜಿಲ್ಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯನ್ನು ಅಗ್ರಸ್ಥಾನಕ್ಕೆ ತೆಗೆದುಕೊಂಡು ಹೋಗುವಲ್ಲಿ ಹಿಂದೆ ಬೀಳುವುದಕ್ಕೆ ಕಾರಣವಾಗುತ್ತಿದೆ ಎಂದು ಶೈಕ್ಷಣಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಇದು ಜಿಲ್ಲೆಯಲ್ಲಿ ಪಿಯು ಶಿಕ್ಷಣಕ್ಕೆ ಸರ್ಕಾರದಿಂದ ದೊರೆಯುತ್ತಿರುವ ‘ಆದ್ಯತೆ’ಗೆ ಕನ್ನಡಿ ಹಿಡಿದಿದೆ! ಇತ್ತೀಚಿನ ವರ್ಷಗಳಲ್ಲಿ ಕೆ.ಎಂ. ಪುಟ್ಟು ಅವರಷ್ಟೆ ಹೆಚ್ಚಿನ ವರ್ಷಗಳು ಅಂದರೆ 2012ರ ಆ.8ರಿಂದ 2016ರ ಮೇ 31ರವರೆಗೆ ಕಾರ್ಯನಿರ್ವಹಿದ್ದಾರೆ. ಜ್ಯೇಷ್ಠತೆ ಆಧಾರದ ಮೇಲೆ ಪಿಯು ಕಾಲೇಜುಗಳ ಪ್ರಾಂಶುಪಾಲರಿಗೆ ‘ಪ್ರಭಾರ’ ನೀಡಲಾಗುತ್ತದೆ. ಹೀಗೆ ‘ಪ್ರಭಾರ’ದ ಮೇಲೆ ಬರುವವರು ಕಾಯಂ ಅಧಿಕಾರಿಗಳಂತೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಆಗುವುದಿಲ್ಲ. ಬಹುತೇಕ ಸಂದರ್ಭದಲ್ಲಿ ‘ನಿರ್ಧಾರಗಳನ್ನು ಕೈಗೊಳ್ಳುವುದು ಅವರಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ ಆಡಳಿತ ವ್ಯವಸ್ಥೆ ಮೇಲೆ ‘ಮಂಕು’ ಕವಿದಿರುತ್ತದೆ ಎನ್ನಲಾಗುತ್ತಿದೆ.

ಕಾಲಕಾಲಕ್ಕೆ ನಡೆಯದ ಕಾರಣದಿಂದ...

‘ಕಾಲ ಕಾಲಕ್ಕೆ ಬಡ್ತಿ ನೀಡುವುದು ಹಾಗೂ ನೇಮಕಾತಿ ಪ್ರಕ್ರಿಯೆ ನಡೆದಿದ್ದರೆ ಈ ಪರಿಸ್ಥಿತಿ ಇರುತ್ತಿರಲಿಲ್ಲ. ಬಹಳಷ್ಟು ಹಿರಿಯ ಉಪನ್ಯಾಸಕರಿದ್ದರೂ ಅವರಿಗೆ ಬಡ್ತಿ ಸಿಕ್ಕಿಲ್ಲ. ಹೀಗಾಗಿ ಪ್ರಾಂಶುಪಾಲರ ಹುದ್ದೆಗಳು ಖಾಲಿ ಇವೆ. ಉಪನ್ಯಾಸಕರ ಹುದ್ದೆಗಳೂ ಭರ್ತಿಯಾಗುತ್ತಿಲ್ಲ. ಈಗಿರುವವರಿಗೆ ಕಾರ್ಯಭಾರದ ಒತ್ತಡ ಉಂಟಾಗುತ್ತಿದೆ. ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ನಿವೃತ್ತ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

‘ನಿವೃತ್ತಿ ಅಂಚಿನಲ್ಲಿದ್ದಾಗ ಬಡ್ತಿ ಸಿಕ್ಕಿರುತ್ತದೆ ಹಾಗೂ ವರ್ಗಾವಣೆ ಕಾರಣದಿಂದ ಅಧಿಕಾರಿಗಳು ಬದಲಾಗಿದ್ದಾರೆ. ಯಾರೇ ಇದ್ದರೂ ಆಡಳಿತಾತ್ಮಕ ಕೆಲಸಗಳು ನಡೆಯುತ್ತಿರುತ್ತವೆ’ ಎನ್ನುತ್ತಾರೆ ನಿವೃತ್ತ ಡಿಡಿಪಿಯುಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.