ADVERTISEMENT

ಮೈಸೂರು: ದೇಸಿ ಅಕ್ಕಿ ಮೇಳ ನಾಳೆಯಿಂದ

ನಂಜರಾಜ ಬಹದ್ದೂರ್‌ ಛತ್ರದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 2:14 IST
Last Updated 8 ಆಗಸ್ಟ್ 2025, 2:14 IST
ಅಕ್ಕಿ ವೈವಿಧ್ಯ (ಸಾಂಕೇತಿಕ ಚಿತ್ರ)
ಅಕ್ಕಿ ವೈವಿಧ್ಯ (ಸಾಂಕೇತಿಕ ಚಿತ್ರ)   

ಮೈಸೂರು: ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗವು ‘ಭತ್ತ ಉಳಿಸಿ ಆಂದೋಲನ’ದ ಜೊತೆಗೂಡಿ ಆ.9 ಹಾಗೂ 10ರಂದು ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಇಲ್ಲಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ‘ದೇಸಿ ಭತ್ತ ಮೇಳ’ ಆಯೋಜಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣಪ್ರಸಾದ್, ‘ದೇಸಿ ಅಕ್ಕಿಗಳ ವೈವಿಧ್ಯದ ಬಗ್ಗೆ ಗ್ರಾಹಕರು ಮತ್ತು ರೈತರಿಗೆ ಅರಿವು ಮೂಡಿಸುವ ಉದ್ದೇಶದಿಂದ ಮೇಳ ಹಮ್ಮಿಕೊಳ್ಳಲಾಗಿದೆ. ಕೆಂಪು, ಕಪ್ಪು, ಕೆನೆ ಬಣ್ಣದ, ಪರಿಮಳದ ಬಗೆ ಬಗೆಯ ಅಕ್ಕಿಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಔಷಧೀಯ ಭತ್ತ ಮತ್ತು ಅಕ್ಕಿಗಳ ಮಾರಾಟ ಈ ವರ್ಷದ ವಿಶೇಷ’ ಎಂದು ತಿಳಿಸಿದ್ದಾರೆ.

‘ಹಳೆ ಮೈಸೂರು ಭತ್ತದ ವೈವಿಧ್ಯಕ್ಕೆ ಹೆಸರುವಾಸಿಯಾಗಿತ್ತು. ರಾಜಮುಡಿ, ರತ್ನಚೂಡಿ, ರಾಜಭೋಗ, ಪುಟ್ಟ ಭತ್ತ, ಆನೆ ಕೊಂಬಿನ ಭತ್ತ, ಬಂಗಾರ ಕಡ್ಡಿ, ಮುಂಡುಗ, ಹಾಲುಬ್ಬಲು ಮೊದಲಾದ ತಳಿಗಳನ್ನು ಇಲ್ಲಿನ ರೈತರು ಬೆಳೆಸುತ್ತಿದ್ದರು. ಅನ್ನಕ್ಕೊಂದು, ಅವಲಕ್ಕಿಗೊಂದು, ಕಜ್ಜಾಯಕ್ಕೆ ಇನ್ನೊಂದು, ಬಿರಿಯಾನಿಗೆ ಮತ್ತೊಂದು ಅಕ್ಕಿ ಬಳಕೆಯಾಗುತ್ತಿತ್ತು. ಹತ್ತಾರು ಕಾಯಿಲೆಗಳಿಗೆ ದೇಸಿ ಅಕ್ಕಿಯ ಅನ್ನವೇ ಔಷಧಿಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಕೈಯಿಂದ ಜಾರುವಷ್ಟು ನುಣುಪಾದ, ಪಾಲಿಷ್ ಮಾಡಿದ ಬಿಳಿ ಬಣ್ಣದ ಅಕ್ಕಿಯೇ ಶ್ರೇಷ್ಠ ಎಂದು ನಂಬಿದ ನಮಗೆ ಅರಿವಿಲ್ಲದೆಯೇ ರೋಗಗಳ ದಾಸರಾಗುತ್ತಿದ್ದೇವೆ’ ಎಂದು ಹೇಳಿದ್ದಾರೆ.

ADVERTISEMENT

ಏನೇನು ಸಿಗಲಿದೆ?:

‘ಉತ್ತರ ಪ್ರದೇಶದ ಕಲಾ ನಮಕ್, ಒರಿಸ್ಸಾದ ಕಾಲಾ ಜೀರ, ಅಸ್ಸಾಂನ ಕೋಮಲ್ ಚಾವಲ್, ಕೇರಳದ ನವರ, ಮುಳ್ಳನ್ ಕಯಮ, ತಮಿಳುನಾಡಿನ ಮಾಪಿಳ್ಳೆ ಸಾಂಬ, ಮಹಾರಾಷ್ಟ್ರದ ಅಂಬೆ ಮೊಹರ್, ಆಂಧ್ರದ ಚಿಟ್ಟ ಮುತ್ಯಾಲು, ಪಶ್ಚಿಮ ಬಂಗಾಳದ ಗೋವಿಂದ ಭೋಗ್ ಮತ್ತು ಕಾಲಾ ಬಾತ್ ಅಕ್ಕಿ ಮೊದಲಾದ ಹೆಸರಾಂತ ತಳಿಯ ಭತ್ತ ಮತ್ತು ಅಕ್ಕಿ ಮಾರಾಟಕ್ಕೆ ಬರಲಿವೆ’ ಎಂದು ತಿಳಿಸಿದ್ದಾರೆ.

‘ಕರ್ನಾಟಕದ ಕರಿಗಜಿವಿಲಿ, ರಾಜಮುಡಿ, ದೊಡ್ಯಗ, ದೊಡ್ಡ ಬೈರ ನೆಲ್ಲು, ಸಿದ್ಧ ಸಣ್ಣ, ಸೇಲಂ ಸಣ್ಣ, ರಾಜ ಭೋಗ, ಅಂದನೂರು ಸಣ್ಣ, ಉದುರು ಸಾಲಿ, ಗಿಣಿ ಸಾಲಿ ಮೊದಲಾದ ಅಕ್ಕಿ ಮಾರಾಟಕ್ಕೆ ಸಿಗಲಿವೆ. 200ಕ್ಕೂ ಹೆಚ್ಚಿನ ದೇಸಿ ಭತ್ತದ ತಳಿಗಳ ಪ್ರದರ್ಶನ ಇರಲಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತಲು ಗುಣಮಟ್ಟದ ಬಿತ್ತನೆ ಭತ್ತ ಸಿಗಲಿದೆ. ಸಾವಯವ ಪದಾರ್ಥಗಳು, ಹಣ್ಣು ಹಂಪಲು, ನಾಟಿ ಬೀಜ ಮತ್ತು ಮೌಲ್ಯವರ್ಧಿತ ಪದಾರ್ಥಗಳು ಸಿಗಲಿವೆ’ ಎಂದು ವಿವರಿಸಿದ್ದಾರೆ.

ಅಡುಗೆ ಚಿತ್ರ ಬಿಡಿಸುವ ಸ್ಪರ್ಧೆ

‘ಅನ್ನ ಸಂಸ್ಕೃತಿಯ ಮಹತ್ವವನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸಲು ‘ಅಕ್ಕಿ ಅಡುಗೆ ಸ್ಪರ್ಧೆ’ ಏರ್ಪಡಿಸಲಾಗಿದೆ. ಪಾಲ್ಗೊಳ್ಳಲು ಬಯಸುವವರು ದೇಸಿ ಅಕ್ಕಿಯಿಂದ ಮನೆಯಲ್ಲೇ ಅಡುಗೆ ಮಾಡಿ ಆ.10ರ ಮಧ್ಯಾಹ್ನ 12.30ಕ್ಕೆ ಮೇಳಕ್ಕೆ ತರಬೇಕು. ಆಯ್ದ ಮೂರು ಉತ್ತಮ ಅಡುಗೆಗಳಿಗೆ ನಗದು ಬಹುಮಾನ ನೀಡಲಾಗುವುದು. 5ರಿಂದ 10 ವರ್ಷದ ಮತ್ತು 10ರಿಂದ 15 ವರ್ಷದ ಒಳಗಿನ ಮಕ್ಕಳಿಗೆ ‘ನಾ ಕಂಡ ಭತ್ತದ ಲೋಕ’ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಮನೆಯಲ್ಲೇ ಚಿತ್ರ ಬಿಡಿಸಿ ಆ.10ರಂದು ಬೆಳಿಗ್ಗೆ 11ಕ್ಕೆ ಮೇಳಕ್ಕೆ ತರಬೇಕು. ಆಯ್ಕೆಯಾದ ಆರು ಚಿತ್ರಗಳಿಗೆ ಬಹುಮಾನ ನೀಡಲಾಗುವುದು’ ಎಂದು ಕೃಷ್ಣಪ್ರಸಾದ್ ಮಾಹಿತಿ ನೀಡಿದ್ದಾರೆ. ಸಂಪರ್ಕಕ್ಕೆ ಮೊ.ಸಂ. 70900 09944.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.