ADVERTISEMENT

ಮೈಸೂರು: ಕಾಂಗ್ರೆಸ್ ಸಮಿತಿಯ ಮಹಿಳಾ ಸಹಕಾರ ವಿಭಾಗದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 3:21 IST
Last Updated 3 ಮಾರ್ಚ್ 2026, 3:21 IST
ಕಾರ್ಯಾಗಾರದಲ್ಲಿ ಎಐಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಮಾತನಾಡಿದರು 
ಕಾರ್ಯಾಗಾರದಲ್ಲಿ ಎಐಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಮಾತನಾಡಿದರು    

ಮೈಸೂರು: ‘ದೇಶದ ಜನಸಂಖ್ಯೆಯಲ್ಲಿ ಮಹಿಳೆಯರು ಅರ್ಧದಷ್ಟಿದ್ದು, ನಾವು ಆತ್ಮಸ್ಥೈರ್ಯದಿಂದ ಮುನ್ನುಗ್ಗಿದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ’ ಎಂದು ಎಐಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಸಹಕಾರ ವಿಭಾಗದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಮತ್ತು ‘ಭಾರತ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮಹಿಳಾ ನಾಯಕತ್ವ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರ ಸರಿಸಮಾನರಾಗಿ ಹೋರಾಡಿದ ಹೆಗ್ಗಳಿಕೆ ಸ್ತ್ರೀಯರದ್ದು. ಇಂದಿರಾ ಗಾಂಧಿಯವರು ಭಾರತದ ದೀರ್ಘಾವಧಿ ಪ್ರಧಾನಮಂತ್ರಿಯಾಗಿ ಇಡೀ ಮಹಿಳಾ ಸಮುದಾಯವನ್ನು ಪ್ರತಿನಿಧಿಸಿ ಮಹಿಳೆಯರು ಪುರುಷರಷ್ಟೇ ಸಮಾನ ಧೈರ್ಯವನ್ನು ಹೊಂದಿದ್ದಾರೆ ಎಂಬ ಸಂದೇಶವನ್ನು ಸಾರಿದರು. ಸರ್ಕಾರಗಳು ಮಹಿಳೆಯರಿಗೆ ಶೇ 50 ಮೀಸಲಾತಿ ಕಲ್ಪಿಸುವ ಚಿಂತನೆಯಲ್ಲಿ ತೊಡಗಿರುವುದು ಇದೇ ಕಾರಣದಿಂದಾಗಿ’ ಎಂದರು.

ADVERTISEMENT

ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ‘ಕಾಂಗ್ರೆಸ್ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳ ಮಹತ್ವಗಳು ಹೆಣ್ಣು ಮಕ್ಕಳಿಗೆ ಮಾತ್ರ ಸೂಕ್ಷ್ಮವಾಗಿ ಅರ್ಥ ಆಗುತ್ತವೆ. ಯಾಕೆಂದರೆ ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತ ಹೆಣ್ಣಿಗೆ ಮಾತ್ರ ಅದರ ಕಷ್ಟ ಅರಿವಾಗುತ್ತದೆ’ ಎಂದರು.

‘ಪ್ರತಿ ತಾಲ್ಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಸಹಕಾರ ಕ್ಷೇತ್ರ ವ್ಯಾಪಿಸಿಕೊಂಡಿದ್ದು ಮಹಿಳಾ ವರ್ಗವು ಸಬಲೀಕರಣಗೊಂಡು ತಾತ್ವಿಕವಾಗಿ ಬೆಳೆಯಬೇಕು’ ಎಂದು ಆಶಿಸಿದರು.

ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯ್ ಕುಮಾರ್, ‘ಮಹಿಳೆಯರು ರಾಜಕೀಯವಾಗಿ ಪ್ರಬುದ್ಧರಾದಾಗ ಮಾತ್ರ ಸಮಾಜವನ್ನು ಎದುರಿಸಲು ಸಾಧ್ಯ. ಮುಂಬರುವ ಚುನಾವಣೆಗಳಿಗೆ ಇಂದಿನಿಂದಲೇ ತಯಾರಿ ನಡೆಸಬೇಕು’ ಎಂದರು.

ಇದೇ ಸಂದರ್ಭದಲ್ಲಿ 16 ಬ್ಲಾಕಿನ ಮಹಿಳಾ ವಿಭಾಗದ ಅಧ್ಯಕ್ಷರು ಹಾಗೂ ಜಿಲ್ಲಾ ಮಹಿಳಾ ಸಹಕಾರ ವಿಭಾಗದ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಅಧ್ಯಕ್ಷ ಧನರಾಜ್ ತಾಳಂಪಳ್ಳಿ, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಎನ್. ಸಿದ್ದಯ್ಯ, ಮಹಿಳಾ ವಿಭಾಗದ ಅಧ್ಯಕ್ಷೆ ತಾರಾ ಕುಮಾರ್ ಗೌಡ, ಸಹಕಾರ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಗೌಡ, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ. ಶಿವಪ್ರಸಾದ್ ಇದ್ದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.