ADVERTISEMENT

ಮೈಸೂರು ಜಿಲ್ಲಾ ‘ಅಕ್ಷರ ಜಾತ್ರೆ’ಗೆ ಕಾರ್ಮೋಡ!: 2021ರಲ್ಲಿ ನಡೆದದ್ದೇ ಕೊನೆ

ಎಂ.ಮಹೇಶ
Published 4 ಜನವರಿ 2026, 5:17 IST
Last Updated 4 ಜನವರಿ 2026, 5:17 IST
ಕಸಾಪ ಲೋಗೊ
ಕಸಾಪ ಲೋಗೊ   

ಮೈಸೂರು: ‘ಅಕ್ಷರ ಜಾತ್ರೆ’ಯಾದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಾರ್ಮೋಡ ಕವಿದಿದೆ!

ನಿಯಮಿತವಾಗಿ ಈ ಸಮ್ಮೇಳನ ನಡೆಯುತ್ತಿಲ್ಲದಿರುವುದು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ವಿಷಯದಲ್ಲಿ ಜಾಗೃತಗೊಳಿಸುವ ಹಾಗೂ ನಾಡು–ನುಡಿಯ ಬಗ್ಗೆ ಪ್ರೇಮವನ್ನು ಹೆಚ್ಚಿಸುವ ಕೆಲಸಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಇದು ಕನ್ನಡ ಸಾಹಿತ್ಯ ಪ್ರೇಮಿಗಳ ಅಸಮಾಧಾನಕ್ಕೂ ಕಾರಣವಾಗಿದೆ.

ಜಿಲ್ಲೆಯಲ್ಲಿ 2021ರ ಫೆ.23ರಂದು ಗಡಿಯಾದ ಎಚ್.ಡಿ. ಕೋಟೆಯಲ್ಲಿ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗಿತ್ತು. ಸಾಹಿತಿ ಪ್ರೊ.ಎನ್‌.ಎಸ್‌.ತಾರಾನಾಥ ಸಮ್ಮೇಳನಾಧ್ಯಕ್ಷರಾಗಿದ್ದರು. ಆಗ ಎಸ್.ಟಿ. ಸೋಮಶೇಖರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಡಾ.ವೈ.ಡಿ. ರಾಜಣ್ಣ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಬಳಿಕ ಹಲವು ಕಾರಣದಿಂದಾಗಿ ‘ನುಡಿ ಉತ್ಸವ’ಕ್ಕೆ ಮುಹೂರ್ತವೇ ಕೂಡಿಬಂದಿಲ್ಲ. ಘೋಷಣೆಯಾಗಿದ್ದರೂ ನಡೆದಿಲ್ಲ.

ADVERTISEMENT

ಆಹ್ವಾನ ಪತ್ರಿಕೆ ಸಿದ್ಧವಾಗಿತ್ತು: 

19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಿ.ನರಸೀಪುರದಲ್ಲಿ ನಡೆಸಬೇಕೆಂದು ತೀರ್ಮಾನಿಸಲಾಗಿತ್ತು. ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಆಹ್ವಾನಪತ್ರಿಕೆಯನ್ನೂ ಮುದ್ರಿಸಲಾಗಿತ್ತು. 

ರಾಜಣ್ಣ ಅವರಿಗಿಂತ ಮುಂಚೆ ಅಧ್ಯಕ್ಷರಾಗಿದ್ದ ಎಂ.ಚಂದ್ರಶೇಖರ್‌ ಅವರು ಎಚ್‌.ಡಿ. ಕೋಟೆ, ನಂಜನಗೂಡು ಹಾಗೂ ಬನ್ನೂರಿನಲ್ಲಿ ಮೂರು ಜಿಲ್ಲಾ ಸಮ್ಮೇಳನಗಳನ್ನು ನಿಯಮಿತವಾಗಿ ನಡೆಸಿದ್ದರು.

ಮಡ್ಡೀಕೆರೆ ಗೋಪಾಲ್‌ ಅವರು ಅಧ್ಯಕ್ಷರಾದ ನಂತರ ಸರಗೂರು ಹಾಗೂ ಅಂತರಸಂತೆಯಲ್ಲಿ ಎರಡು ತಾಲ್ಲೂಕು ಸಮ್ಮೇಳನಗಳು ನಡೆದಿವೆ. ನಗರ ಘಟಕದಿಂದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಮತ್ತು ಚಾಮರಾಜ ವಿಧಾನಸಭಾ ಕ್ಷೇತ್ರದ ಸಾಹಿತ್ಯ ಸಮ್ಮೇಳನಗಳು ಗಮನಸೆಳೆದಿದ್ದವು. ನಗರ ಘಟಕದ ಅಧ್ಯಕ್ಷ ಕೆ.ಎಸ್. ಶಿವರಾಮು ನೇತೃತ್ವದಲ್ಲಿ ನಡೆದಿದ್ದ ವಿಧಾನಸಭಾ ಕ್ಷೇತ್ರವಾರು ಸಾಹಿತ್ಯ ಸಮ್ಮೇಳನಗಳು ಸದ್ದು ಮಾಡಿದ್ದವು.

ಕೊರತೆ ಇಲ್ಲ: 

ಇಲ್ಲಿನ ವಿಜಯನಗರದಲ್ಲಿರುವ ಕಸಾಪ ಜಿಲ್ಲಾ ಘಟಕದ ಕನ್ನಡ ಸಾಹಿತ್ಯ ಭವನದಲ್ಲಿ ಹಲವು ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಇದಕ್ಕೆ ಕಸಾದಿಂದಲೇ ಸಹಕಾರ ಕೊಡಲಾಗುತ್ತಿದೆ. ಆದರೆ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳುವುದು ಸಾಧ್ಯವಾಗಿಲ್ಲ. ಕಸಾಪ ಕೇಂದ್ರ ಸಮಿತಿಯಿಂದ ಅಗತ್ಯ ಸಹಕಾರ, ಆರ್ಥಿಕ ನೆರವು ದೊರೆಯದ ಕಾರಣ ಸಮ್ಮೇಳನಗಳು ನನೆಗುದಿಗೆ ಬೀಳುವಂತಾಗಿದೆ ಎಂದು ಹೇಳಲಾಗುತ್ತಿದೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಡ್ಡೀಕೆರೆ ಗೋಪಾಲ್‌, ‘ತಿ.ನರಸೀಪುರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿತ್ತು. ತಲಕಾಡು ಚಿಕ್ಕರಂಗೇಗೌಡ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಆದರೆ, ಚುನಾವಣೆ ನೀತಿಸಂಹಿತೆ, ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರ ಅಸಹಕಾರ ಮೊದಲಾದ ಕಾರಣದಿಂದ ನಡೆಸಲಾಗಿಲ್ಲ. ಕೇಂದ್ರ ಪರಿಷತ್ತಿನಿಂದ ಸಮರ್ಪಕವಾದ ಅನುದಾನ ಬರುತ್ತಿಲ್ಲ. ಎಲ್ಲ ಕಾರ್ಯಕ್ರಮ ನಮ್ಮ ಖರ್ಚಿನಿಂದಲೇ ಮಾಡುತ್ತಿದ್ದೇವೆ. ಕನ್ನಡ ಸಾಹಿತ್ಯ ಭವನದ ನಿರ್ವಹಣೆಗೂ ತೊಂದರೆಯಾಗಿದೆ. ಹೇಗೋ ನಿಭಾಯಿಸುತ್ತಿದ್ದೇವೆ’ ಎಂದು ಹೇಳಿದರು.

‘ಆದಷ್ಟು ಬೇಗ ತಿ. ನರಸೀಪುರದಲ್ಲೇ ಸಮ್ಮೇಳನ ನಡೆಸಲು ಕ್ರಮ ವಹಿಸಲಾಗುವುದು. ಅಲ್ಲಿನ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರ ಸಹಕಾರ ಪಡೆಯಲಾಗುವುದು. ಸಮ್ಮೇಳನಕ್ಕೆ ₹ 5 ಲಕ್ಷ ಅನುದಾನ ದೊರೆಯುತ್ತದೆ. ಕನ್ನಡದ ಕೆಲಸಗಳಿಗೆ ಬೆಂಬಲಿಸುವವರು ಬಹಳಷ್ಟು ಮಂದಿ ಇದ್ದಾರೆ. ನುಡಿಜಾತ್ರೆಯನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು’ ಎಂದು ತಿಳಿಸಿದರು.

ಮಡ್ಡೀಕೆರೆ ಗೋಪಾಲ್
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಮಗೆ ಆಸಕ್ತಿ ಇದ್ದರೂ ಹಲವು ಕಾರಣಗಳಿಂದ ಸಾಧ್ಯವಾಗಿಲ್ಲ. ಮತ್ತೆ ವಿಳಂಬ ಆಗದಂತೆ ನೋಡಿಕೊಳ್ಳಲಾಗುವುದು
ಮಡ್ಡೀಕೆರೆ ಗೋಪಾಲ್ ಅಧ್ಯಕ್ಷ ಕಸಾಪ ಜಿಲ್ಲಾ ಘಟಕ
ಎಂ. ಚಂದ್ರಶೇಖರ್
ಕನ್ನಡದ ಕೆಲಸಗಳು ನಿರಂತರವಾಗಿ ಸಮ್ಮೇಳನಗಳು ನಿಯಮಿತವಾಗಿ ನಡೆಯಬೇಕು. ಅದಕ್ಕೆ ತಕ್ಕಂತೆ ಕೇಂದ್ರ ಕಸಾಪದಿಂದ ಸಹಕಾರ ಸಿಗಬೇಕಾಗುತ್ತದೆ
ಎಂ.ಚಂದ್ರಶೇಖರ್‌ ನಿಕಟಪೂರ್ವ ಅಧ್ಯಕ್ಷ ಕಸಾಪ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.