
ಭತ್ತ ಖರೀದಿ ನೋಂದಣಿ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು
ಪ್ರಜಾವಾಣಿ ಚಿತ್ರ
ಮೈಸೂರು: ಭತ್ತ ಖರೀದಿ ಕೇಂದ್ರ ಆರಂಭಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ, ಕೂಡಲೇ ಭತ್ತ ಖರೀದಿ ನೋಂದಣಿ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.
‘ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್ಆರ್‌ಪಿ ₹2,369 ದರದ ಜೊತೆ ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್ ಭತ್ತಕ್ಕೆ ₹500 ಹೆಚ್ಚುವರಿ ದರ ನಿಗದಿ ಮಾಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೊಂದಣಿ ಪ್ರಕ್ರಿಯೆ ಆರಂಭಿಸಬೇಕು. ರಾಜ್ಯ ಸರ್ಕಾರವು ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ವಿತರಣೆ ಮಾಡುತ್ತಿರುವುದರಲ್ಲಿ ಬೇರೆ ರಾಜ್ಯದ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಹೀಗಾಗಿ, ರಾಜ್ಯದ ಪಡಿತರ ವ್ಯವಸ್ಥೆಗೆ ಅಕ್ಕಿ ವಿತರಿಸಲು ಭತ್ತ ಬೆಳೆಗಾರರಿಗೆ ಯಾವುದೇ ಷರತ್ತನ್ನು ವಿಧಿಸದೆ ರೈತರು ಬೆಳೆದಿರುವ ಎಲ್ಲಾ ಭತ್ತವನ್ನು ಖರೀದಿ ಕೇಂದ್ರದ ಮೂಲಕ ಖರೀದಿಸಬೇಕು’ ಎಂದು ಒತ್ತಾಯಿಸಿದರು.
‘ಕೃಷಿ ಮತ್ತು ಕಂದಾಯ ಇಲಾಖೆಯ ಜಂಟಿ ಸಮಿತಿ ರಚಿಸಬೇಕು. ಭತ್ತ ಖರೀದಿಗೆ ಬೇಡಿಕೆ ಇರಬಾರದು. ಈ ತಿಂಗಳ ಮೊದಲ ವಾರದಿಂದಲೇ ನೋಂದಣಿ ಪ್ರಕ್ರಿಯೆಯನ್ನು ಕಟಾವು ಪ್ರಾರಂಭವಾದ ತಕ್ಷಣ ಖರೀದಿಗೆ ಕ್ರಮ ಕೈಗೊಳ್ಳಬೇಕು. ರೈತರು ಭತ್ತ ಕಟಾವು ಮಾಡುವಾಗ, ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿ ಅಧಿಕ ಷರತ್ತುಗಳನ್ನು ವಿಧಿಸದೇ ನಿಯಮ ಸರಳೀಕರಣಗೊಳಿಸಬೇಕು’ ಎಂದು ಆಗ್ರಹಿಸಿದರು.
‘ಭತ್ತ ಖರೀದಿ ತಳಿಗಳು ಹಾಗೂ ಏಜೆನ್ಸಿ ಎಫ್ಆರ್‌ಪಿ ದರಕ್ಕಿಂತ ಕಡಿಮೆ ಬೆಲೆಗೆ ಖರೀದಿ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಕ್ರಮವನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು. ರಾಜ್ಯದಾದ್ಯಂತ ಭತ್ತ ಖರೀದಿಗಾಗಿ ರಾಜ್ಯ ಸರ್ಕಾರ ವಿಶೇಷ ಆವರ್ತ ನಿಧಿ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಕಾಡುಪ್ರಾಣಿ ಮತ್ತು ಹುಲಿ ದಾಳಿಗೆ ಮೃತಪಟ್ಟ ರೈತರ ಕುಟುಂಬಕ್ಕೆ ₹ 1 ಕೋಟಿ ಪರಿಹಾರವನ್ನು ಘೋಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಮುಖಂಡರಾದ ಎಚ್.ಎಸ್. ರಾಜು, ಕೆರೆಹುಂಡಿ ರಾಜಣ್ಣ, ಒಳಗೆರೆ ಗಣೇಶ್, ಮಲಿಯೂರು ಮಹೇಂದ್ರ, ಹೊನ್ನಗೌಡನಹಳ್ಳಿ ಮಹೇಶ್, ದೇವನೂರು ನಾಗೇಂದ್ರ, ದೇವಿರಾಮನಳ್ಳಿ ಪ್ರಭು, ಚಿಕ್ಕಬಸಪ್ಪ, ಶ್ರೀಕಂಠಸ್ವಾಮಿ, ಅಂಡುವಿನಹಳ್ಳಿ ಜಗದೀಶ್, ಮಹದೇವಪ್ಪ, ಮದನ್, ಚಿದಂಬರ, ಜಗದೀಶ್, ನಾಗರಾಜಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.