ಕಡತ
(ಸಾಂದರ್ಭಿಕ ಚಿತ್ರ)
ಮೈಸೂರು: ಜಿಲ್ಲೆಯಲ್ಲಿ 2023ನೇ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ಯಡಿ ಸಲ್ಲಿಕೆಯಾಗಿದ್ದ 473 ರೈತರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಯೋಜನೆಯಡಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರೈತರ ಬೆಳೆ ವಿಮೆಗೆ ನೋಂದಣಿಯಾದ ಪ್ರಸ್ತಾವಗಳನ್ನು ಬೆಳೆ ಸಮೀಕ್ಷೆಯ ದತ್ತಾಂಶಗಳೊಂದಿಗೆ ಹೋಲಿಕೆ ಮಾಡಿ, ಸರ್ಕಾರದಿಂದ ಅನುಮೋದನೆಯಾದ ವಿನಾಯಿತಿಗಳನ್ನು ಅಳವಡಿಸಿ ತಾಳೆ ಆದವುಗಳನ್ನು ವಿಮಾ ಪರಿಹಾರಕ್ಕಾಗಿ ತಂತ್ರಾಂಶದಲ್ಲಿ ‘ಲೆಕ್ಕ’ ಹಾಕಲಾಗಿದೆ. ತಾಳೆ ಆಗದ ಪ್ರಸ್ತಾವಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಪರಿಶೀಲಿಸಲು ನಿಗದಿತ ‘ತಂತ್ರಾಂಶ’ದ ಮೂಲಕ ಕಳುಹಿಸಲಾಗಿತ್ತು. ಅಧಿಕಾರಿಗಳ ಬಳಿಕ ಸಂಬಂಧಿಸಿದ ವಿಮಾ ಸಂಸ್ಥೆಯವರು ಪ್ರಸ್ತಾವಗಳನ್ನು ಪರಿಶೀಲಿಸಿದ್ದಾರೆ. ಬೆಳೆ ಸಮೀಕ್ಷೆಯ ದತ್ತಾಂಶಕ್ಕೆ ಹೋಲಿಕೆಯಾದ ಅರ್ಜಿಗಳಿಗೆ ಪರಿಹಾರ ದೊರೆಯುವುದಿಲ್ಲ.
ವಿಮೆಯ ಹಣ ಪಡೆದುಕೊಳ್ಳುವುದಕ್ಕಾಗಿ ರೈತರು ದಾಖಲೆಗಳನ್ನು ತೆಗೆದುಕೊಂಡು ಕಚೇರಿಗೆ ಅಲೆದಾಡಬೇಕಾಗಿದೆ. ದಾಖಲೆಗಳು ಇಲ್ಲದಿದ್ದರೆ ಅವರಿಗೆ ವಿಮೆಯ ಹಣ ಬರುವುದಿಲ್ಲ.
ಏನು ಮಾಡಬೇಕು?: ತಿರಸ್ಕೃತಗೊಂಡ ರೈತರ ಪಟ್ಟಿಯನ್ನು ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಎಲ್ಲ ರೈತ ಸಂಪರ್ಕ ಕೇಂದ್ರಗಳು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಪ್ರದರ್ಶಿಸಲಾಗಿದ್ದು, ಆಕ್ಷೇಪಣೆ ಸಲ್ಲಿಕೆಗೆ ರೈತರಿಗೆ ಅವಕಾಶವಿದೆ. ರೈತರು ಆಕ್ಷೇಪಣೆಗಳಿದ್ದಲ್ಲಿ 2023ನೇ ಸಾಲಿನ ಪಹಣಿ (ಆರ್‌ಟಿಸಿ)ಯಲ್ಲಿ ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರುವ ದಾಖಲೆ ಹಾಗೂ ವಿಮೆಗೆ ನೋಂದಾಯಿತ ಬೆಳೆಯ ಉತ್ಪನ್ನವನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಲ್ಲಿ ಅದರ ರಸೀದಿಯೊಂದಿಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ 15 ದಿನದೊಳಗೆ ಸಲ್ಲಿಸಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.
ಇಲಾಖೆಯ ಮಾಹಿತಿ ಪ್ರಕಾರ, ನಂಜನಗೂಡು ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 196 ಅರ್ಜಿಗಳು ತಿರಸ್ಕೃತಗೊಂಡಿವೆ. ನಂತರದ ಸ್ಥಾನದಲ್ಲಿ ಮೈಸೂರು ತಾಲ್ಲೂಕು (142) ಇದೆ. ಎಚ್.ಡಿ. ಕೋಟೆಯಲ್ಲಿ ಅತಿ ಕಡಿಮೆ ಅಂದರೆ 1 ಅರ್ಜಿಯಷ್ಟೇ ತಿರಸ್ಕೃತಗೊಂಡಿದೆ.
ತಾಳೆಯಾಗದ ಕಾರಣದಿಂದ:
‘ಮೈಸೂರು ತಾಲ್ಲೂಕಿನಲ್ಲಿ ಇಲವಾಲ ಹೋಬಳಿಯಲ್ಲಿ 80, ವರುಣ ಹೋಬಳಿಯ 45 ಹಾಗೂ ಜಯಪುರ ಹೋಬಳಿಯ 17 ಸೇರಿ ಒಟ್ಟು 142 ರೈತರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಬೆಳೆ ಸಮೀಕ್ಷೆಯ ದತ್ತಾಂಶಗಳಿಗೆ ತಾಳೆ ಆಗದಿರುವುದೇ ಇದಕ್ಕೆ ಕಾರಣ’ ಎಂದು ಮೈಸೂರು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಬಿ.ಡಿ. ಜಯರಾಮ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಿವಿಧ 19 ಬೆಳೆಗಳಿಗೆ (ನೀರಾವರಿ, ಮಳೆಯಾಶ್ರಿತ) ವಿಮೆ ಮಾಡಿಸಬಹುದು ಎಂದು ತಿಳಿಸಲಾಗಿತ್ತು. ಎಳ್ಳು, ಸೂರ್ಯಕಾಂತಿ, ಉದ್ದು, ಹೆಸರು, ಅಲಸಂದೆ, ನೆಲಗಡಲೆ, ಎಲೆಕೋಸು, ಆಲೂಗಡ್ಡೆ, ಟೊಮೆಟೊ, ಜೋಳ, ಹತ್ತಿ, ಮುಸುಕಿನಜೋಳ, ತೊಗರಿ, ಅರಿಸಿನ, ರಾಗಿ, ಭತ್ತ ಹಾಗೂ ಹುರುಳಿ ಬೆಳೆಗೆ ರೈತರು ಇಂತಿಷ್ಟು ಪ್ರೀಮಿಯಂ ಕಟ್ಟಿ ವಿಮೆ ಮಾಡಿಸಿದ್ದರು. ತಿರಸ್ಕೃತಗೊಂಡಿರುವ ಅರ್ಜಿಗಳ ಮಾಹಿತಿಯನ್ನು ಕೃಷಿ ಇಲಾಖೆ ಈಗ ಪ್ರಕಟಿಸಿದೆ!
ರೈತ ಮುಖಂಡರು ಹೇಳುವುದೇನು?
‘ರೈತರು ಅರ್ಜಿ ಭರ್ತಿ ಮಾಡುವಾಗ ಸಮರ್ಪಕವಾದ ಮಾಹಿತಿ ನೀಡದಿರುವುದು ಅಥವಾ ಬೆಳೆಯ ಮಾಹಿತಿಯನ್ನು ತಪ್ಪಾಗಿ ದಾಖಲಿಸಿದ್ದರೆ ಅರ್ಜಿಗಳು ತಿರಸ್ಕೃತವಾಗುತ್ತವೆ. ಕೆಲವು ಅರ್ಜಿಗಳು ವಿಮಾ ಕಂಪನಿಗೆ ತಡವಾಗಿ ಸಲ್ಲಿಕೆಯಾದ ಕಾರಣದಿಂದಲೂ ತಿರಸ್ಕೃತವಾಗುತ್ತವೆ. ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಪರಿಣಾಮ ರೈತರು ನಷ್ಟ ಅನುಭವಿಸಬೇಕಾಗಿದೆ. ವಿಮೆ ಹಣ ಬರುತ್ತದೆ ಎನ್ನುವ ಆಸೆಯನ್ನು ಕೃಷಿಕರು ಇಟ್ಟುಕೊಂಡಿರುತ್ತಾರೆ. ಆದರೆ, ನೆಪಗಳನ್ನು ಹೇಳಿ ವಿಮಾ ಸೌಲಭ್ಯದಿಂದ ಅವರನ್ನು ವಂಚಿತರನ್ನಾಗಿಸುವುದು ನಡೆಯುತ್ತಲೇ ಇದೆ’ ಎನ್ನುವುದು ರೈತ ಮುಖಂಡರ ಆರೋಪವಾಗಿದೆ.
(ಮಾಹಿತಿ: ಕೃಷಿ ಇಲಾಖೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.