
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತಂಡ
ಮೈಸೂರು: ತಾಲ್ಲೂಕಿನ ಹಾರೋಹಳ್ಳಿ– ಹುನಗನಹಳ್ಳಿಹುಂಡಿ ಗ್ರಾಮಗಳ ಸಮೀಪದ ಫಾರಂ ಹೌಸ್‌ನಲ್ಲಿ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಆರೋಪದ ಮೇಲೆ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಿರುವ ವರುಣ ಠಾಣೆ ಪೊಲೀಸರು, ಮೂವರ ಪತ್ತೆಗೆ ಶೋಧ ನಡೆಸಿದ್ದಾರೆ.
ಬನ್ನೂರು ರಸ್ತೆಯ ಸುತ್ತಮುತ್ತಲ ಗ್ರಾಮಗಳಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿರುವ ಮಾಹಿತಿ ಮೇರೆಗೆ ಎರಡು ತಿಂಗಳಿಂದ ಕಣ್ಗಾವಲು ಇಟ್ಟಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬುಧವಾರ ಕಾರ್ಯಾಚರಣೆ ನಡೆಸಿದರು.
ಮೈಸೂರಿನ ಸ್ವಾಮಿ, ಗೋವಿಂದರಾಜು, ಶ್ಯಾಮಲಾ, ಕಾರ್ತಿಕ್, ಕೆ.ಆರ್.ನಗರದ ಭೇರ್ಯ ಗ್ರಾಮದ ಹರೀಶ್ ನಾಯಕ, ಕೆ.ಸಾಲುಂಡಿಯ ಶಿವಕುಮಾರ್ ಹಾಗೂ ಪುಟ್ಟರಾಜು ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸ್ಕ್ಯಾನಿಂಗ್ ಯಂತ್ರ ಹಾಗೂ ಲಾಕರ್‌ನಲ್ಲಿಟ್ಟಿದ್ದ ₹3 ಲಕ್ಷಕ್ಕೂ ಹೆಚ್ಚು ನಗದು, ಗರ್ಭಿಣಿಯರ ಮಾಹಿತಿ ಇದ್ದ ಡೈರಿ ಸಿಕ್ಕಿದೆ. ಭ್ರೂಣಲಿಂಗ ಪತ್ತೆಗೆ ₹25 ಸಾವಿರ ಮತ್ತು ಹೆಣ್ಣು ಭ್ರೂಣ ಹತ್ಯೆಗೆ ₹30 ಸಾವಿರ ಪಡೆಯುತ್ತಿದ್ದರು ಎನ್ನಲಾಗಿದೆ.
‘ಗರ್ಭಿಣಿಯೊಬ್ಬರನ್ನು ತಪಾಸಣೆ ಮಾಡಿಸುವ ಸೋಗಿನಲ್ಲಿ ತಂಡವು ತೆರಳಿದ್ದಾಗ, ಆ ಮನೆಯಲ್ಲಿ ತಪಾಸಣೆಗೆಂದು ಬಂದಿದ್ದ ಮೂವರು ಗರ್ಭಿಣಿಯರು ಇದ್ದರು. ಸ್ಕ್ಯಾನಿಂಗ್ ಉಪಕರಣವೂ ಸಿಕ್ಕಿದೆ’ ಎಂದು ಕಾರ್ಯಾಚರಣೆ ತಂಡದಲ್ಲಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ‘ಪ್ರಜಾವಾಣಿ’ಗೆ
ತಿಳಿಸಿದರು.
‘ಹಿಸ್ ಹೋಲಿನೆಸ್’–‘ಸ್ವಾಮಿ ಶಿವಾನಂದ ಪರಮಹಂಸ ನಿಲಯ’ ಫಲಕವಿದ್ದ ಬಂಗಲೆಯ ಮೊದಲ ಮಹಡಿಯಲ್ಲಿ ಲಿಂಗ ಪತ್ತೆ ಕಾರ್ಯ ನಡೆದಿತ್ತು. ಭ್ರೂಣ ಹತ್ಯೆ ಮಾಡಿಸಲು ವೈದ್ಯರೊಬ್ಬರು ಬರುವುದನ್ನೇ ಮೂವರು ಗರ್ಭಿಣಿಯರು ಕಾಯುತ್ತಿದ್ದರು’ ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ತಂಡದ ಸದಸ್ಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಮೆಲ್ಲಹಳ್ಳಿ ವೃತ್ತದಲ್ಲಿ ಗರ್ಭಿಣಿಯ ಸೋಗಿನಲ್ಲಿದ್ದ ಪುಟ್ಟಸಿದ್ದಮ್ಮ ಅವರಿಂದ ₹30 ಸಾವಿರ ನಗದು ಪಡೆದ ಆರೋಪಿ ಸ್ವಾಮಿ, ಕಾರಿನಲ್ಲಿ ಗೋವಿಂದರಾಜು ಎಂಬುವರೊಂದಿಗೆ ಬಂಗಲೆಗೆ ಕಳುಹಿಸಿಕೊಟ್ಟ. ಮಾರ್ಗ ಮಧ್ಯೆ ರೂಪಾ ಹಾಗೂ ಉಮಾ ಎಂಬ ಮಹಿಳೆಯರು ಹತ್ತಿಕೊಂಡರು. ಉಮಾ ಎಂಬುವರಿಂದಲೂ ಆರೋಪಿಗಳು ₹25 ಸಾವಿರ ಪಡೆದಿದ್ದರು’ ಎಂದು ಹೇಳಿದ್ದಾರೆ.
‘ರೂಪಾ ಅವರ ಪತಿ ಹರೀಶ್‌ನಾಯಕ, ಉಮಾ ಅವರ ಪತಿ ಶಿವಕುಮಾರ್ ಅವರೂ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ₹30ಸಾವಿರ ಹಣ ನೀಡಿದ್ದರು. ಮನೆಯ ಮಾಲೀಕರಾದ ಶ್ಯಾಮಲಾ ಅವರನ್ನು ವಿಚಾರಿಸಿದಾಗ ಆರಂಭದಲ್ಲಿ ಈ ಬಗ್ಗೆ ಗೊತ್ತಿಲ್ಲವೆಂದು ಹೇಳಿದ್ದರು. ಬಳಿಕ ಬನ್ನೂರಿನ ಎಸ್.ಕೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ. ವಿಚಾರಣೆ ನಡೆಸಿದಾಗ ಆಕೆಯ ಗಂಡ ಕಾರ್ತಿಕ್ ಮತ್ತು ಪುಟ್ಟರಾಜು ಎಂಬುವರೊಂದಿಗೆ ಸೇರಿಕೊಂಡು ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಕಾರ್ಯ ನಡೆಸುತ್ತಿದ್ದುದು ಬಯಲಾಯಿತು’ ಎಂದು ತಿಳಿಸಿದ್ದಾರೆ.
ಪಿಸಿಪಿಎನ್‌ಡಿಟಿ ಉಪನಿರ್ದೇಶಕ ವಿವೇಕ್ ದೊರೈ, ಮಂಡ್ಯ ಡಿಎಚ್‌ಒ ಡಾ.ಮೋಹನ್‌ಕುಮಾರ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ರೇಡಿಯಾಲಜಿಸ್ಟ್ ವಿಜಯಶರಧಿ, ಸಿಬ್ಬಂದಿ ಅನಿಲ್ ಪಿ.ಥಾಮಸ್, ಎನ್.ಅರುಣ್‌ಕುಮಾರ್, ಬಿ.ಮಂಗಳಾ, ಪುಟ್ಟಸಿದ್ಧಮ್ಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.