
ಮೈಸೂರು: ‘ಕಾಡಂಚಿನ ರೈತರ ರಕ್ಷಣೆಗಾಗಿ ಕಾಡಿನೊಳಗೆ ಸಫಾರಿಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಅಕ್ರಮ ರೆಸಾರ್ಟ್‌ಗಳನ್ನು ತೆರವುಗೊಳಿಸಬೇಕು’ ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳವರು ಇಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರದಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಸಾಮೂಹಿಕ ನಾಯಕತ್ವದ ರೈತ ಸಂಘ, ಕಬ್ಬುಬೆಳೆಗಾರರ ಸಂಘ, ಸೇವ್ ಕಬಿನಿ ಸಮಿತಿ, ದಲಿತಪರ, ಕನ್ನಡ ಪರ ಸಂಘಟನೆಗಳು ಧರಣಿ ಆರಂಭಿಸಿವೆ.
ಗನ್ ಹೌಸ್ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ‘ಹುಲಿಯೊಂದು ರೈತನ ಎದೆ ಬಗಿಯುವ’ ಪ್ರಾತ್ಯಕ್ಷಿಕೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ಸಫಾರಿ ನಿಲ್ಲಿಸಿದ್ದರಿಂದ ಕಾಡಿನಲ್ಲಿ ವನ್ಯ ಮೃಗಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅರಣ್ಯ ಇಲಾಖೆ ವರದಿಯೇ ಹೇಳಿದೆ. ಕಾಡುಪ್ರಾಣಿಗಳಿಂದ ಯಾರಿಗೂ ಹಾನಿಯಾಗಿಲ್ಲ. ಹೀಗಿದ್ದರೂ ಸಫಾರಿ ಮರುಆರಂಭ ಆತಂಕ ಮೂಡಿಸಿದೆ’ ಎಂದು ಎಂದರು.
‘ಕಾಡಿನೊಳಗಿನ ರೆಸಾರ್ಟ್ ಮಾಲೀಕರು ಪ್ರಭಾವಿಗಳಾಗಿರುವ ಕಾರಣಕ್ಕೆ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ಮೋಜಿಗಾಗಿ, ಹಣ ಸಂಪಾದನೆಗಾಗಿ ಜನವಿರೋಧಿ ನೀತಿ ಜಾರಿಗೊಳಿಸುವುದು ಖಂಡನೀಯ. ಸರ್ಕಾರ ತಕ್ಷಣವೇ ಸಫಾರಿ ನಿಲ್ಲಿಸಿ, ಕಾಡಿನೊಳಗೆ ಅಕ್ರಮವಾಗಿ ನಿರ್ಮಿಸಿರುವ ರೆಸಾರ್ಟ್ ಮುಚ್ಚಿಸಬೇಕು’ ಎಂದು ಒತ್ತಾಯಿಸಿದರು.
ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಪ್ರತಿಭಟನಾ ಸ್ಥಳಕ್ಕೆ ಬಂದು ಅಹವಾಲು ಆಲಿಸಿದರು. ಅವರ ಭರವಸೆಯ ಮಾತುಗಳನ್ನು ಒಪ್ಪದೆ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.