ಮೈಸೂರಿನ ದೇವರಾಜ ಅರಸು ರಸ್ತೆ ಸಮೀಪದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಬಳಿ ತ್ಯಾಜ್ಯದ ರಾಶಿ
- ಪ್ರಜಾವಾಣಿ ಚಿತ್ರ
ಮೈಸೂರು: ಸ್ವಚ್ಛ, ಸುಂದರ ಹಾಗೂ ಉತ್ತಮ ನಿರ್ವಹಣೆಯ ಕಾರಣದಿಂದ ಖ್ಯಾತಿ ಗಳಿಸಿದ್ದ ‘ಅರಮನೆ ನಗರಿ’ಯು ಈಗ ಗಬ್ಬೆದ್ದು ನಾರುತ್ತಿದೆ!
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಹಾನಗರಪಾಲಿಕೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರೊಂದಿಗೆ ಪೌರಕಾರ್ಮಿಕರು ಕೂಡ ಪಾಲ್ಗೊಳ್ಳುತ್ತಿದ್ದಾರೆ. ಈ ‘ಪೌರಬಂಧು’ಗಳು ಕರ್ತವ್ಯದಿಂದ ದೂರ ಉಳಿದಿರುವುದರಿಂದಾಗಿ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿ ಕಾರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಪರಿಣಾಮ, ನಗರದಾದ್ಯಂತ ತ್ಯಾಜ್ಯದ ರಾಶಿ ರಾಶಿ ಕಂಡುಬರುತ್ತಿದೆ. ಅದು ಕೊಳೆತು ನಾರುತ್ತಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಸ್ಥಳೀಯರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಎದುರಾಗಿದೆ.
ರಸ್ತೆ ಬದಿಗಳಲ್ಲಿ, ಖಾಲಿ ನಿವೇಶನಗಳಲ್ಲಿ, ರಸ್ತೆಯ ಮೂಲೆಗಳಲ್ಲಿ ತ್ಯಾಜ್ಯದ ರಾಶಿ ಕಂಡುಬರುತ್ತಿದೆ. ಅದರಲ್ಲಿ ಆಹಾರ ‘ಹುಡುಕುವ’ ಬಿಡಾಡಿ ದನಗಳು, ಕರುಗಳು, ಬೀದಿನಾಯಿಗಳು ತ್ಯಾಜ್ಯವನ್ನೆಲ್ಲಾ ಕೆದಕುತ್ತಿವೆ. ಇದರಿಂದ, ಆ ಸ್ಥಳದಲ್ಲಿ ಮತ್ತಷ್ಟು ಕಸ ವ್ಯಾಪಿಸುತ್ತಿದೆ. ಸೊಳ್ಳೆಗಳು, ನೊಣಗಳು ಮುತ್ತಿಕೊಳ್ಳುತ್ತಿವೆ. ಆ ರಸ್ತೆಯಲ್ಲಿ ಸಂಚರಿಸುವವರು ದುರ್ವಾಸನ ತಾಳಲಾರದೆ ಮೂಗು ಮುಚ್ಚಿಕೊಂಡು ಹೋಗುವುದು ಕಂಡುಬರುತ್ತಿದೆ. ‘ನಗರದಲ್ಲಿನ ದುಃಸ್ಥಿತಿ’ ಕಂಡು ಪ್ರವಾಸಿಗರಲ್ಲಿ ಮೈಸೂರಿನ ಬಗೆಗಿನ ದೃಷ್ಟಿಕೋನವೇ ಬದಲಾಗುವ ಸ್ಥಿತಿ ಬಂದಿದೆ! ನಗರದ ಹೃದಯ ಭಾಗವೂ ‘ಮಲಿನ’ಗೊಂಡಿದೆ.
ನಗರಪಾಲಿಕೆಯ ಎಲ್ಲ 1,952 ಪೌರಕಾರ್ಮಿಕರು ಕೂಡ ಸ್ವಚ್ಛತೆಗೆ ಇಳಿದಿಲ್ಲ. ಇದರ ‘ಬಿಸಿ’ ನಗರದ ಮೇಲೆ ತಟ್ಟಿದೆ.
ಐದು ದಿನಗಳು: ಪಾಲಿಕೆ ನೌಕರರು ಪ್ರತಿಭಟನೆ ಆರಂಭಿಸಿ ಶನಿವಾರಕ್ಕೆ ಐದು ದಿನಗಳಾಗಿವೆ. ಮೊದಲ ದಿನ ತ್ಯಾಜ್ಯ ವಿಲೇವಾರಿ ಕಾರ್ಯ ಬಹುತೇಕ ಕಡೆಗಳಲ್ಲಿ ನಡೆದಿತ್ತು. ಆದರೆ, ಮರು ದಿನದಿಂದ ಎಲ್ಲ ಕಡೆಯೂ ತ್ಯಾಜ್ಯ ಸಂಗ್ರಹ, ವಾಹನಗಳಲ್ಲಿ ತೆರಳಿ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವುದು, ವಿಂಗಡಿಸಿ ವಿಲೇವಾರಿ ಮಾಡುವುದು ಮೊದಲಾದ ಕಾರ್ಯ ಸಂಪೂರ್ಣವಾಗಿ ನಡೆದಿಲ್ಲ. ಅದರ ಪರಿಣಾಮ, ತ್ಯಾಜ್ಯದ ರಾಶಿಗಳು ಕೊಳೆತು ನಾರುತ್ತಿವೆ. ದೇಶದಾದ್ಯಂತ ಸ್ವಚ್ಛ ಸರ್ವೇಕ್ಷಣೆ ನಡೆಯುತ್ತಿದ್ದು, ಮೈಸೂರನ್ನು ಸ್ವಚ್ಛತಾ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಕಾಣಬೇಕು ಎಂಬ ಪ್ರಯತ್ನಗಳು ಆಗಬೇಕಾದ ಹೊತ್ತಿನಲ್ಲೇ ‘ಅಸ್ವಚ್ಛತೆ’ ತಾಂಡವವಾಡುತ್ತಿದೆ! ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.
ಈ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸ್ಪಂದಿಸದಿರುವುದು ಹೋರಾಟ ತೀವ್ರಗೊಳ್ಳುವುದಕ್ಕೆ ಕಾರಣವಾಗಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ‘ನಗರದಲ್ಲಿ ನಾಲ್ಕು ದಿನಗಳಿಂದ ತ್ಯಾಜ್ಯ ವಿಲೇವಾರಿ ನಡೆದಿಲ್ಲರುವುದು ನಿಜ. ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವುದರಿಂದ ಹೀಗಾಗಿದೆ. ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ, ಬೇಡಿಕೆ ಈಡೇರಿಕೆಗೆ ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ, ಪೌರಕಾರ್ಮಿಕರು ಭಾನುವಾರದಿಂದ ಕೆಲಸಕ್ಕೆ ಹಾಜರಾಗುವ ನಿರೀಕ್ಷೆ ಇದೆ. ಹೀಗಾಗಿ, ಭಾನುವಾರ ತ್ಯಾಜ್ಯ ಸಂಗ್ರಹ ನಡೆಯಲಿದೆ. ಬೇಡಿಕೆ ಈಡೇರದಿದ್ದರೆ ಮಂಗಳವಾರದಿಂದ ಕೆಲಸದಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.
ಪೌರಕಾರ್ಮಿಕರು ಕಸ ಸಂಗ್ರಹಕ್ಕೆ ಬಂದಿಲ್ಲ. ಎಷ್ಟು ದಿನವೆಂದು ಹಸಿಕಸವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು? ವಾಸನೆ ಬರುತ್ತಿತ್ತಾದ್ದರಿಂದ ಹೊರಗೆ ಎಸೆದೆವುರಮೇಶ್ ಕುವೆಂಪುನಗರ
ಅನಿವಾರ್ಯತೆಯಿಂದ...
ಪೌರಕಾರ್ಮಿಕರು ನಿರ್ವಹಿಸುವ ಕಸದ ವಾಹನ ಮನೆಗಳ ಬಳಿಗೆ ಬರದೇ ಇರುವುದರಿಂದಾಗಿ ನಿವಾಸಿಗಳು ಎಲ್ಲೆಂದರಲ್ಲಿ ಕಸ ಹಾಕುವ ಅನಿವಾರ್ಯತೆ ಉಂಟಾಗಿದೆ. ಇದರಿಂದಾಗಿ ಬಡಾವಣೆಗಳಲ್ಲೂ ತ್ಯಾಜ್ಯದ ‘ಗುಡ್ಡೆ’ಗಳು ದರ್ಶನ ನೀಡುತ್ತಿವೆ; ಅನೈರ್ಮಲ್ಯ ಹರಡುತ್ತಿವೆ. ‘ನಾವೂ ನಾಲ್ಕು ದಿನಗಳಿಂದ ಮನೆಯಲ್ಲಿ ಕಸ ಇಟ್ಟುಕೊಂಡಿದ್ದೆವು. ಪೌರಕಾರ್ಮಿಕರು ವಾಹನದೊಂದಿಗೆ ಬರುತ್ತಾರೆಂದು ಕಾದಿದ್ದೆವು. ಬರಲಿಲ್ಲ. ಮನೆಯಲ್ಲಿ ತ್ಯಾಜ್ಯದ ಪ್ರಮಾಣ ಜಾಸ್ತಿಯಾದ್ದರಿಂದ ರಸ್ತೆಯ ಮೂಲೆಯಲ್ಲೆಲ್ಲೋ ಬಿಸಾಡಬೇಕಾಯಿತು. ಈವರೆಗೆ ಸ್ವಚ್ಛವಾಗಿದ್ದ ಆ ಸ್ಥಳವೀಗ ‘ಕಸದ ಡಂಪಿಂಗ್ ಯಾರ್ಡ್’ನಂತಾಗಿದೆ. ಆ ತ್ಯಾಜ್ಯ ವಿಲೇವಾರಿ ನಡೆಯದಿದ್ದರೆ ಅಲ್ಲಿನ ವಾತಾವರಣ ಸಂಪೂರ್ಣ ಹಾಳಾಗಲಿದೆ’ ಎಂದು ಗೋಕುಲಂನ ಮಹದೇಶ್ವರ ಬಡಾವಣೆಯ ನಿವಾಸಿ ಶಿವಪ್ರಸಾದ್ ತಿಳಿಸಿದರು. ‘ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡು ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನರಲ್ಲಿ ಅನಾರೋಗ್ಯ ಉಂಟಾಗಲಿದೆ’ ಎಂದು ಅವರ ಆತಂಕ ವ್ಯಕ್ತಪಡಿಸಿದರು. ಇದೇ ರೀತಿಯ ಅಭಿಪ್ರಾಯ ನಗರದ ಜನರದಾಗಿದೆ.
ಕಡಿವಾಣ ಬಿದ್ದಿತ್ತು...
ಈ ಹಿಂದೆ ರಸ್ತೆ ಬದಿ ಕಸ ಎಸೆಯುವುದನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕೆಲಸ ಪಾಲಿಕೆಯಿಂದ ನಡೆಯುತ್ತಿತ್ತು. ಇದರಿಂದ ರಸ್ತೆ ಬದಿಗಳಲ್ಲಿನ ಕಸದ ರಾಶಿ ಬೀಳುವುದಕ್ಕೆ ಕಡಿವಾಣ ಬಿದ್ದಿತ್ತು. ಆದರೆ ಪ್ರತಿಭಟನೆ ಆರಂಭವಾದ ಬಳಿಕ ಮನೆ– ಮನೆಗಳಿಂದ ಕಸ ಸಂಗ್ರಹ ಮಾಡದಿರುವುದರಿಂದ ಸಾರ್ವಜನಿಕರು ನಿರ್ಜನ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಕಸ ಬಿಸಾಡುತ್ತಿದ್ದಾರೆ. ಪಾಲಿಕೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ರಾಜಕೀಯ ಮುಖಂಡರು ಜನಪ್ರತಿನಿಧಿಗಳು ಭೇಟಿ ಕೊಡುತ್ತಿದ್ದಾರೆ. ಆದರೆ ನೌಕರರ ಬೇಡಿಕೆ ಈಡೇರದೇ ದಿನನಿತ್ಯದ ಕೆಲಸಗಳು ಸ್ಥಗಿತಗೊಂಡಿವೆ. ಇದರ ಪರಿಣಾಮ ಜನರ ಮೇಲೆ ಉಂಟಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.