
ಮೈಸೂರು: ‘ರಾಜ್ಯ ಸರ್ಕಾರವೇ ಜಿಲ್ಲಾ ಕೇಂದ್ರಗಳಲ್ಲಿ ಮಿನಿ ಚಿತ್ರಮಂದಿರಗಳನ್ನು ನಿರ್ಮಿಸಿ, ಕೇರಳದಂತೆ ಸಿನಿಮಾ ಸಂಸ್ಕೃತಿ ಬೆಳೆಸಬೇಕು’ ಎಂದು ಸಾಹಿತಿ ಬರಗೂರು ಇಲ್ಲಿ ಸಲಹೆ ನೀಡಿದರು.
ರಂಗಾಯಣದ ‘ಭೂಮಿಗೀತ’ ರಂಗಮಂದಿರದಲ್ಲಿ ಭಾನುವಾರ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವ ನಿಮಿತ್ತ ಏರ್ಪಡಿಸಿರುವ ‘ಬಹುರೂಪಿ ಚಲನಚಿತ್ರೋತ್ಸವ’ ಉದ್ಘಾಟಿಸಿ ಮಾತನಾಡಿದರು.
‘ಬೆಂಗಳೂರಿನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿತ್ತು. ಬಜೆಟ್‌ನಲ್ಲಿ ಜಾರಿಗೊಳಿಸುವುದಾಗಿ ಮೂರು ಬಾರಿ ಹೇಳಿದ್ದರು. ಆದರೆ ಆಗಲಿಲ್ಲ’ ಎಂದರು.
‘ಏಕ ಪರದೆ ಚಿತ್ರಮಂದಿರಗಳಲ್ಲಿ ಜನರು ಸಿನಿಮಾವನ್ನು ಸಂಭ್ರಮಿಸುತ್ತಿದ್ದರು. ಮಲ್ಟಿಫ್ಲೆಕ್ಸ್‌ಗಳಲ್ಲಿ ಆ ಸಂಭ್ರಮ ಕಾಣುತ್ತಿಲ್ಲ. ಕಲಾತ್ಮಕ ಚಿತ್ರಗಳೂ ಸೇರಿ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ. 100 ಆಸನ ಸಾಮರ್ಥ್ಯದ ಚಿತ್ರಮಂದಿರಗಳನ್ನು ಸರ್ಕಾರವೇ ನಿರ್ಮಿಸಿದರೆ ಸಹಾಯವಾಗುತ್ತದೆ’ ಎಂದರು.
‘ಕೇರಳ ಸರ್ಕಾರ 100ಕ್ಕೂ ಹೆಚ್ಚು ಮಿನಿ ಚಿತ್ರಮಂದಿರಗಳನ್ನು ಸ್ಥಾಪಿಸಿ ನಡೆಸಲು ಸಾಧ್ಯವಿದ್ದರೆ ಇಲ್ಲೇಕೆ ಆಗುವುದಿಲ್ಲ? ಪ್ರಾಯೋಗಿಕವಾಗಿಯಾದರೂ ಯೋಜನೆ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ಚಿತ್ರೋದ್ಯಮ ಇಂದು ಸಾಮಾಜಿಕ ಸಂವೇದನೆಗಳಿಗೆ ಪ್ರತಿಸ್ಪಂದಿಸುವ ಮಾಧ್ಯಮವಾಗಿ ಉಳಿದಿಲ್ಲ. ರಾಜ್‌ಕುಮಾರ್ ಯುಗದ ಸಿನಿಮಾಗಳು ಅಭಿರುಚಿ ಬೆಳೆಸಿದ್ದವು. ಲಾಭವಷ್ಟೇ ಮುಖ್ಯವಾದಾಗ ಕಲಾತ್ಮಕತೆ ಮಾಯವಾಗುತ್ತದೆ. ಚಲನಚಿತ್ರವು ಮಾಧ್ಯಮವಾಗಬೇಕು. ಅದು ಸಂವೇದನೆ ಬೆಳೆಸುತ್ತದೆ’ ಎಂದು ಹೇಳಿದರು.
ಉದ್ಘಾಟನೆ ಇಂದು: ‘ಬಹುರೂಪಿ’ ಬೆಳ್ಳಿಹಬ್ಬದ ಪ್ರಯುಕ್ತ ‘ಬಹುರೂಪಿ ಬಾಬಾ ಸಾಹೇಬ್– ಸಮತೆಯೆಡೆಗೆ ನಡಿಗೆ’ ಆಶಯದಲ್ಲಿ ರಂಗಾಯಣ ಏರ್ಪಡಿಸಿರುವ ನಾಟಕೋತ್ಸವದ ಉದ್ಘಾಟನೆಯನ್ನು ಜ.12ರಂದು ಸಂಜೆ 5.30ಕ್ಕೆ ಮಣಿಪುರದ ರಂಗಕರ್ಮಿ ಹೈಸ್ನಾಂ ಸಾವಿತ್ರಿದೇವಿ ನೆರವೇರಿಸಲಿದ್ದಾರೆ. 18ರವರೆಗೆ ಉತ್ಸವ ನಡೆಯಲಿದ್ದು, ಬಹುಭಾಷೆಯ 12 ನಾಟಕಗಳೂ ಸೇರಿದಂತೆ 24 ನಾಟಕಗಳು ಪ್ರದರ್ಶನಗೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.